ಭಾರತದಲ್ಲಿ 2023ಕ್ಕೆ ಹೋಲಿಸಿದರೆ 2024ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2024ರಲ್ಲಿ ಭಾರತದಾದ್ಯಂತ ದ್ವೇಷ ಭಾಷಣಗಳ ಘಟನೆಗಳ ಪ್ರಮಾಣ 74.4% ಹೆಚ್ಚಾಗಿದೆ. ಇದು ಆತಂಕಕಾರಿ ವಿದ್ಯಮಾನವೆಂದು ವಿಶ್ಲೇಷರು ಕಳವಳ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಹೇಟ್ ಲ್ಯಾಬ್ (IHL) ಪ್ರಕಟಿಸಿರುವ ವರದಿಯ ಪ್ರಕಾರ, 2024ರಲ್ಲಿ ದೇಶಾದ್ಯಂತ 1,165 ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿವೆ. ಇಂತಹ ಘಟನೆಗಳಲ್ಲಿ 2023ರಲ್ಲಿ 668 ಪ್ರಕರಣಗಳು ದಾಖಲಾಗಿದ್ದವು. ಆದರೆ, 2024ರಲ್ಲಿ ಬಹುತೇಕ ದ್ವೇಷ ಭಾಷಣ ಪ್ರಕರಣಗಳು ದ್ವಿಗುಣಗೊಂಡಿವೆ. ಅದರಲ್ಲೂ, ಈ ಪ್ರಕರಣಗಳಲ್ಲಿ ರಾಜಕೀಯ ನಾಯಕರು, ವಿಶೇಷವಾಗಿ ಬಿಜೆಪಿ ನಾಯಕರೇ ಹೆಚ್ಚು ಆರೋಪಿಗಳು. ಬಿಜೆಪಿ-ಸಂಘಪರಿವಾರದ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಮಾಡಿರುವ ಪ್ರಚೋದನಾಕಾರಿ ದ್ವೇಷ ಭಾಷಣಗಳೇ ಹೆಚ್ಚಿವೆ ಎಂದು ಐಎಚ್‌ಎಲ್ ಗಮನಿಸಿದೆ.
ವರದಿಯು ವಿವರಿಸುವಂತೆ, 2024ರ ಲೋಕಸಭಾ ಚುನಾವಣೆ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗಳು ಸೇರಿದಂತೆ ಪ್ರಮುಖ ಚುನಾವಣಾ ಸಮಯಲ್ಲಿಯೇ ಹೆಚ್ಚಿನ ದ್ವೇಷ ಭಾಷಣದ ಘಟನೆಗಳು ವರದಿಯಾಗಿವೆ ಮತ್ತು ದಾಖಲಾಗಿವೆ.
ದ್ವೇಷ ಭಾಷಣ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದೆ. ಅಲ್ಲಿ, ಬರೋಬ್ಬರಿ 242 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, 210 ಪ್ರಕರಣಗಳು ದಾಖಲಾಗಿವೆ. ಗಮನಾರ್ಹವಾಗಿ ಈ ಎರಡೂ ರಾಜ್ಯಗಳು ಬಿಜೆಪಿಯ ಭದ್ರಕೋಟೆಗಳಾಗಿದ್ದು, ಎರಡಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ, ಅಂದರೆ, 2024ರ ಮೇ ತಿಂಗಳಿನಲ್ಲಿ ಪ್ರಚೋದನಾಕಾರಿ ದ್ವೇಷ ಭಾಷಣಗಳು ಹೆಚ್ಚದವು. ಆ ಒಂದೇ ತಿಂಗಳಲ್ಲಿ ದೇಶಾದ್ಯಂತ 269 ಪ್ರಕರಣಗಳು ದಾಖಲಾಗಿವೆ.
ದ್ವೇಷ ಭಾಷಣಗಳ ಹೆಚ್ಚಳದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಪಾತ್ರವೂ ಗಮನಾರ್ಹವಾಗಿದೆ.
ಈ ವರದಿ ಓದಿದ್ದೀರಾ?: ಬಿಜೆಪಿ ಕೋಮುದ್ವೇಷ ಮತ್ತು ವಕ್ಫ್ ಆಸ್ತಿ ವಿವಾದ
ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಮುಸ್ಲಿಮರನ್ನು ‘ಒಳನುಸುಳುವವರು’ ಎಂದು ಉಲ್ಲೇಖಿಸಿದ್ದರು. ಅಲ್ಲದೆ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹೆಚ್ಚು ಮಕ್ಕಳನ್ನು ಹೆರುವವರಿಗೆ ದೇಶದ ಆಸ್ತಿಯನ್ನು ಹಂಚುತ್ತಾರೆ. ಹಿಂದು ಮಹಿಳೆಯರ ಮಂಗಳಸೂತ್ರವನ್ನೂ ಬಿಡುವುದಿಲ್ಲ’ ಎಂದು ಪ್ರಚೋದನಾಕಾರಿ ದ್ವೇಷ ಭಾಷಣ ಮಾಡಿದ್ದರು. ಇದು ದೇಶಾದ್ಯಂತ ಬಿಜೆಪಿ ನಾಯಕರು ಇಂತಹದ್ದೇ ಹೇಳಿಕೆಗಳನ್ನು ನೀಡುವಂತೆ ಪ್ರಚೋದಿಸಿತು.
ಬನ್ಸ್ವಾರಾದಲ್ಲಿ ಮೋದಿ ದ್ವೇಷ ಭಾಷಣ ಮಾಡಿದ ನಂತರದ 43 ದಿನಗಳಲ್ಲಿ ದೇಶಾದ್ಯಂತ ಬರೋಬ್ಬರಿ 300ಕ್ಕೂ ಹೆಚ್ಚು ದ್ವೇಷ ಭಾಷಣದ ಘಟನೆಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 7 ಕೋಮುದ್ವೇಷ ಭಾಷಣಗಳು ವರದಿಯಾಗಿವೆ.
ಮತ್ತೊಂದು ಪ್ರಮುಖ ವಿಚಾರವೆಂದರೆ, ಇಡೀ ಉತ್ತರ ಪ್ರದೇಶವನ್ನೇ ಕೇಸರೀಕರಣಗೊಳಿತ್ತೇನೆಂದು ಪಣತೊಟ್ಟಿರುವ, ಕಠೋರ ಹಿಂದುತ್ವವಾದಿ ಎಂದು ಕರೆಸಿಕೊಂಡಿರುವ ಯೋಗಿ ಆದಿತ್ಯನಾಥ್ 2024ರಲ್ಲಿ 86 ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಹಲವು ‘ಲವ್ ಜಿಹಾದ್’ ಮತ್ತು ‘ವೋಟ್ ಜಿಹಾದ್’ ರೀತಿಯ ಕೋಮುದ್ವೇಷವನ್ನು ವ್ಯಾಪಕವಾಗಿ ಬಿತ್ತುವ ಹೇಳಿಕೆಗಳು ಸೇರಿವೆ.
ಕೋಮುದ್ವೇಷ ಹರಡುವಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರ
2024ರಲ್ಲಿ ದಾಖಲಾಗಿರುವ ಒಟ್ಟು 1,165 ಪ್ರಕರಣಗಳಲ್ಲಿ, 995 ಘಟನೆಗಳನ್ನು ಫೇಸ್‌ಬುಕ್, ಯೂಟ್ಯೂಬ್, ಮತ್ತು ಎಕ್ಸ್ ರೀತಿಯ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿದ ಹಾಗೂ ಲೈವ್-ಸ್ಟ್ರೀಮ್ ಮಾಡಿದ ವಿಡಿಯೋಗಳಿಂದ ಗುರುತಿಸಲಾಗಿದೆ. ದ್ವೇಷದ ಭಾಷಣದ ವಿರುದ್ಧ ಸಾಮಾಜಿಕ ಮಾಧ್ಯಮಗಳು ‘ಕಮ್ಯುನಿಟಿ ಗೈಡ್‌ಲೈನ್ಸ್’ (ಸಮುದಾಯ ಮಾರ್ಗಸೂಚಿ) ಹೊಂದಿದ್ದರೂ, ಅವುಗಳು ದ್ವೇಷ ಭಾಷಣಗಳ ಪ್ರಸಾರವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದು ಐಎಚ್‌ಎಲ್ ವರದಿ ಹೇಳಿದೆ.
ದ್ವೇಷದ ಭಾಷಣವನ್ನು ಪ್ರಚೋದಿಸಲು ಮತ್ತು ಪ್ರಚಾರ ಮಾಡಲು ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಬಳಸಿಕೊಂಡಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ, ಬಿಜೆಪಿಯ ಹಿರಿಯ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಮಾಡಿರುವ 266 ದ್ವೇಷ ಭಾಷಣಗಳನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಬಿಜೆಪಿ ಲೈವ್ ಸ್ಟ್ರೀಮ್ ಮಾಡಿದೆ.
ಪಿತೂರಿ ಸಿದ್ಧಾಂತಗಳು ಮತ್ತು ಹಿಂಸೆಗೆ ಕರೆಗಳು
ದಾಖಲಾಗಿರುವ ದ್ವೇಷ ಭಾಷಣಗಳಲ್ಲಿ ಅರ್ಧದಷ್ಟು (581 ಘಟನೆಗಳು) ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ಹಾಗೂ ‘ವೋಟ್ ಜಿಹಾದ್’ ನಂತಹ ಪಿತೂರಿ ಸಿದ್ಧಾಂತಗಳನ್ನು ಒಳಗೊಂಡಿವೆ. ಇಂತಹ ಭಾಷಣಗಳಲ್ಲಿ 259 ಭಾಷಣಗಳು ಹಿಂಸಾಚಾರಕ್ಕೆ ನೇರವಾಗಿ ಕರೆಕೊಡುವಂತಿವೆ. 123 ಘಟನೆಗಳು ಸಶಸ್ತ್ರ ಸಜ್ಜುಗೊಳಿಸುವಿಕೆಯನ್ನು ಪ್ರತಿಪಾದಿಸಿವೆ ಹಾಗೂ 274 ಭಾಷಣಗಳು ಪೂಜಾ ಸ್ಥಳಗಳನ್ನು-ಹೆಚ್ಚಾಗಿ ಮಸೀದಿಗಳನ್ನು ಗುರಿಯಾಗಿಸಿಕೊಂಡಿವೆ ಎಂಬುದನ್ನು ವರದಿ ಪಟ್ಟಿ ಮಾಡಿದೆ.
ಒಟ್ಟು ಪ್ರಕರಣಗಳ ಪೈಕಿ 98.5% ಭಾಷಣಗಳು ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿವೆ. 115 ಭಾಷಣಗಳು ಮುಸ್ಲಿಮರೊಂದಿಗೆ ಕ್ರಿಶ್ಚಿಯನ್ನರನ್ನೂ ಗುರಿಯಾಗಿಸಿಕೊಂಡಿವೆ. ಇವುಗಳು ಕ್ರಿಸ್‌ಮಸ್ ಆಚರಣೆಯ ಸಮಯದಲ್ಲಿ ದಾಖಲಾಗಿವೆ.
ಚುನಾವಣಾ ಆಯೋಗದ ಮೌನ
ಲೋಕಸಭಾ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಹೆಚ್ಚು ದ್ವೇಷ ಭಾಷಣಗಳು ವರದಿಯಾಗಿವೆ. ಇಂತಹ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳವು ಅಧಿಕಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಇದೆ. ಆದರೂ, ನೋಟಿಸ್ ನೀಡುವುದನ್ನು ಮೀರಿ ಹೆಚ್ಚಿನ ಯಾವುದೇ ಕ್ರಮವನ್ನು ಆಯೋಗ ತೆಗೆದುಕೊಳ್ಳಲಿಲ್ಲ. ಚುನಾವಣಾ ಸಮಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ಪದೇ-ಪದೇ ಉಲ್ಲಂಘಿಸಿದ್ದರೂ, ಆಯೋಗ ಯಾವುದೇ ಕಟ್ಟುನಿಟ್ಟಿನ ಕ್ರಮ ಜರುಗಿಸಲಿಲ್ಲ. ಇದು, ಆಯೋಗದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಭಾರತೀಯ ರಾಜಕೀಯದಲ್ಲಿ ದ್ವೇಷದ ಭಾಷಣವು ಹೆಚ್ಚುತ್ತಲೇ ಇದೆ. ದ್ವೇಷ ಭಾಷಣವು ಚುನಾವಣಾ ಕಾರ್ಯತಂತ್ರಗಳ ಭಾಗವಾಗುತ್ತಿವೆ. ಇಂತಹ ಪ್ರವೃತ್ತಿಯನ್ನು ಗಮನಿಸಿಯೂ ಕಾನೂನು ಜಾರಿ ಸಂಸ್ಥೆಗಳು ನಿರುಮ್ಮಳ ಮೌನಕ್ಕೆ ಜಾರುತ್ತಿವೆ. ಪರಿಣಾಮ, ಮುಂದಿನ ದಿನಗಳಲ್ಲಿ ದ್ವೇಷ ಭಾಷಣಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಎಂದು ಐಎಚ್‌ಎಲ್ ವರದಿ ತೀರ್ಮಾನಿಸಿದೆ.