ಬಿಜೆಪಿ ವರಿಷ್ಠರು ನನಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ಬಂದರೂ ನಾನು ಅದಕ್ಕೆ ಉತ್ತರಿಸುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಅವರು, “ಬಿಜೆಪಿ ವರಿಷ್ಠರು ನನಗೆ ನೋಟಿಸ್ ನೀಡಿಲ್ಲ. ಅಷ್ಟಕ್ಕೂ, ಇಂತಹ ನೂರಾರು ನೋಟಿಸ್‌ಗಳು ನನಗೆ ಬರುತ್ತವೆ. ಅವುಗಳಿಗೆಲ್ಲ ಉತ್ತರ ಕೊಡಲು ಆಗುವುದಿಲ್ಲ. ಇದಕ್ಕೆಲ್ಲ ಹೆದರುವ ಮಗ ನಾನಲ್ಲ”ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವುದಕ್ಕೆ ಯತ್ನಾಳರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕಳೆದ ಸೋಮವಾರ ಮತ್ತೆ ನೋಟಿಸ್ ನೀಡಿದೆ. ನೋಟಿಸ್‌ಗೆ 72 ಗಂಟೆಗಳಲ್ಲೇ ಉತ್ತರಿಸುವಂತೆ ಸೂಚಿಸಿದ್ದು, ಒಂದು ವೇಳೆ ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಮೂರು ದಿನಗಳ ಗಡುವು ಗುರುವಾರ ಮುಗಿಯಲಿದೆ. ಹೀಗಾಗಿ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.