ಗ್ರಾಮೀಣ ಭಾಗದ ಹಿಂದುಳಿದ ಎಲ್ಲಾ ಸಮುದಾಯಗಳ ಜನತೆಗೆ ವರ್ಷಕ್ಕೆ ಕನಿಷ್ಟ ನೂರು ದಿನಗಳ ಕೆಲಸ ಒದಗಿಸಿಕೊಡುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿರುವ ನರೇಗಾ ಯೋಜನೆ ಒಂದು ರೀತಿಯ ವರದಾನವಾಗಿದೆ ಎಂದು ಸಿಂದಗಿ ವಿಜಯಪುರ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಮು ಅಭಿಪ್ರಾಯಪಟ್ಟರು.
ಸಿಂದಗಿ ತಾಲೂಕು ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನರೇಗಾ ದಿನ ಆಚರಣೆ ಹಾಗೂ ಜನ ವೇದಿಕೆ ನಾಯಕರಿಗೆ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂಗಮ ಸಂಸ್ಥೆಯು ಎಲ್ಲಾ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವ ಮೂಲಕ ಸಾಮಾಜಿಕವಾಗಿ ಹಿಂದುಳಿದ ಜನರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿಯೂ ಸಬಲರಾಗಲು ಅನುಕೂಲ ಮಾಡಿಕೊಟ್ಟಿದೆ.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಡಿ ಮೇಲ್ಲೋ ಮಾತನಾಡಿ, “ಗ್ರಾಮೀಣ ಜನರಿಗೆ 100 ದಿನ ಉದ್ಯೋಗ ಖಾತ್ರಿ ಅಡಿಯಲ್ಲಿ ಮಾನವ ಕೂಲಿ ಕೆಲಸ ಸಿಗುತ್ತಿಲ್ಲ ಆದ್ದರಿಂದ ಜನ ವೇದಿಕೆಯ ಮನವಿಗೆ ಸ್ಪಂದಿಸಬೇಕು. ಜನರಿಗೆ ಕೆಲಸ ಸಿಗುವ ಹಾಗೆ ಮಾಡಿಕೊಡಬೇಕು ಮತ್ತು ಅಂಗನವಾಡಿ, ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯಗಳನ್ನು ಮಾಡಬೇಕೆಂದು” ಮನವಿ ಮಾಡಿದರು.

ರಾಜಕುಮಾರ ಹೊಸಮನಿ ಮಾತನಾಡಿ, “ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಯನ್ನು ತ್ಯಜಿಸಿ ಸಾವಯವ ಗೊಬ್ಬರವನ್ನು ಬಳಸಿ ಅಧಿಕ ಇಳುವರಿ ಜತೆಗೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಳ್ಳಿ. ಭೂಮಿಯಷ್ಟೇ ಅಲ್ಲದೆ ಮನುಷ್ಯರೂ ಕೂಡ ಪೌಷ್ಟಿಕಯುಕ್ತ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಬಹುದು” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ; ಪಟ್ಟು ಬಿಡದ ಗ್ರಾಮ ಆಡಳಿತಾಧಿಕಾರಿಗಳು
ಈ ವೇಳೆ ಮಲ್ಕಪ್ಪ ಶಿವಲಿಂಗಪ್ಪ ಹುಲಗಿ, ಬಸವರಾಜ ಬಿಸನಾಳ, ಮಹೇಶ ಚೌಹಾಣ ಹಾಗೂ ಜನವರಿಕೆ ನಾಯಕರು ಮತ್ತು ಕಟ್ಟಡ ಕಾರ್ಮಿಕರು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
