ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೆಬ್ರಿ–ಆಗುಂಬೆ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಸೋಮೇಶ್ವರದ ಸೀತಾನದಿ ಎಂಬಲ್ಲಿ ಜೂ. 11ರ ಭಾನುವಾರ ಮಧ್ಯಾಹ್ನ 1.30ಕ್ಕೆ ಈ ಅಪಘಾತ ಸಂಭವಿಸಿದೆ.
ಖಾಸಗಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ಉಡುಪಿಯ ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಶಿಕ್ಷಕನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿಯಿಂದ ಆಗುಂಬೆಗೆ ಸಂಚರಿಸುತ್ತಿದ್ದಾಗ ಬಸ್ ಮತ್ತು ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿದ್ದ ಶಿಕ್ಷಕರ ಕಾರಿನ ನಡುವೆ ಅಪಘಾತ ನಡೆದಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಗಾಳಿಮಳೆಗೆ ಮನೆ ಮೇಲೆ ಉರುಳಿದ ಬೃಹತ್ ಮರ; ಮೂವರು ಪಾರು
ಅಪಘಾತದ ತೀವ್ರತೆಯಿಂದ ಬಸ್ಸಿನ ಕೆಳಗೆ ಸಿಲುಕಿದ್ದ ಕಾರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಆಂಬುಲೆನ್ಸ್ ಸಿಗದೆ ಯಾರೂ ಸಹಾಯಕ್ಕೆ ಬಾರದೆ ಇರುವುದನ್ನು ಗಮನಿಸಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಮೋದ್ ಎಂಬುವವರು ನಾಲ್ವರು ಗಾಯಾಳಗಳನ್ನು ತನ್ನ ಕಾರಿಗೆ ಹಾಕಿಕೊಂಡು ಬಂದು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ತುರ್ತು ಚಿಕಿತ್ಸೆ ಸಿಗದೆ ಇಬ್ಬರು ಮೃತಪಟ್ಟಿದ್ದಾರೆ.