ತೊಗರಿ ಖರೀದಿ ನೋಂದಣಿಯಲ್ಲಿ ಹಲವು ಸಮಸ್ಯೆಗಳಾಗುತ್ತಿದ್ದು, ಅದನ್ನು ಸರಳಗೊಳಿಸುವಂತೆ ಹಾಗೂ ಖರೀದಿ ಕೇಂದ್ರಗಳಲ್ಲೇ ತೊಗರಿಯನ್ನು ಖರೀದಿಸುವಂತೆ ಕ್ರಮ ಕೈಗೊಳ್ಳಲು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಹಾಗೂ ಎಐಕೆಕೆಎಂಎಸ್ ಸಂಘಟನೆಗಳು ಒತ್ತಾಯಿಸಿ ಲಿಂಗಸೂಗೂರು ಸಹಾಯಕ ಆಯುಕ್ತ ಶಿರಸ್ತೇದಾರ್ ಆದಪ್ಪ ಅವರಿಗೆ ಹಕ್ಕೊತ್ತಾಯ ಸಲ್ಲಿಸಲಾಯಿತು.
ರೈತರು ಹಲವಾರು ಸಂಕಷ್ಟಗಳ ಮಧ್ಯದಲ್ಲಿ ಈ ವರ್ಷದ ಕೃಷಿ ಹಂಗಾಮಿನಲ್ಲಿ ತೊಗರಿ ಬೆಳೆಯನ್ನು ಬೆಳೆದಿದ್ದಾರೆ. ಆದರೆ ತೊಗರಿ ಬೆಲೆ ಕುಸಿತದ ಪರಿಣಾಮದಿಂದಾಗಿ ಖರ್ಚು ಮಾಡಿದಷ್ಟು ಆದಾಯ ಸಿಗುತ್ತಿಲ್ಲ. ಇದರಿಂದ ರೈತರು ನೊಂದು ಆಘಾತಕ್ಕೆ ಗುರಿಯಾಗುತ್ತಿದ್ದಾರೆ ತಕ್ಷಣ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಗೆ ಅವಕಾಶ ನೀಡಬೇಕು ಎಂದು ಸಂಘಟನೆಯ ಮುಖಂಡರು ಮನವಿ ಮಾಡಿದರು.
“ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಕ್ವಿಂಟಲ್‌ಗೆ 7550 ರೂ ನಿಗದಿ ಮಾಡಿದೆ. ರಾಜ್ಯ ಸರ್ಕಾರವು ರೈತ ಸಂಘಟನೆಗಳ ಒತ್ತಡಕ್ಕೆ ಮಣಿದು ಪ್ರತಿ ಕ್ವಿಂಟಲ್‌ಗೆ 450 ರೂ ಪ್ರೋತ್ಸಾಹಧನ ನೀಡುವ ಆದೇಶ ಮಾಡಿದೆ. ಹೀಗಾಗಿ ಪ್ರತಿ ಕ್ವಿಂಟಲ್‌ಗೆ 8 ಸಾವಿರ ರೂಗಳಂತೆ ಖರೀದಿಗೆ ಆದೇಶ ಮಾಡಿದಂತಾಗಿದೆ. ಇದರಿಂದಾಗಿ ರೈತರು ಅಲ್ಪಸ್ವಲ್ಪ ನಿಟ್ಟಿಸಿರು ಬಿಡುವಂತಾಗಿದೆ. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗಾಗಿ ಜನವರಿ 2ನೇ ತಾರೀಕಿನಿಂದ ರೈತರಿಂದ ಅರ್ಜಿ ಸ್ವೀಕಾರ ಮಾಡಿ, ಖರೀದಿ ಆರಂಭಿಸುವುದಾಗಿ ಸಂಬಂಧಿಸಿದ ಇಲಾಖೆ ಪತ್ರಿಕೆಗಳಲ್ಲಿ ಪ್ರಕಟಿಸಿತ್ತು. ತಿಂಗಳು ಕಳೆದರೂ ಖರೀದಿ ಆರಂಭಿಸದೆ ಇರುವುದು ದುರದೃಷ್ಟಕರ. ಅಲ್ಲದೆ ರೈತರಿಂದ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಕೂಡ ಫೆಬ್ರವರಿ ಮೊದಲ ವಾರದಿಂದ ಆರಂಭ ಮಾಡಿದ್ದಾರೆ. ಅದು ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಳೆ ಅತ್ಯಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಸರಿಯಾದ ಬೆಲೆಗೆ ಮಾರಾಟ ಮಾಡಲು ಆಗದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ತೊಗರಿ ಬೆಳೆ ರಾಶಿಯಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಬೇಕು. ಬಡ, ಸಣ್ಣಪುಟ್ಟ ರೈತರಿಗೆ ಅನುಕೂಲವಾಗುವಂತೆ ತೊಗರಿ ಖರೀದಿ ನೋಂದಣಿಯನ್ನು ಸರಳಗೊಳಿಸಿ ರೈತರಿಗೆ ಅನುಕೂಲ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?:ರಾಯಚೂರು | ಪರಿಸರ ಹಾನಿಯಾಗದಂತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ: ಡಿಸಿ ನಿತೀಶ್
ಪ್ರತಿಭಟನೆಯಲ್ಲಿ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ, ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸೂಗುರು, ತಿರುಪತಿ ಗೋನವಾರ, ಶರಣಪ್ಪಗೌಡ ಹೊಸಮನಿ, ವೀರಬಧ್ರಪ್ಪ ಕವಿತಾಳ, ಬಸವರಾಜ ಕವಿತಾಳ, ಈರಣ್ಣ ಕಸಬಾ ಲಿಂಗಸೂಗೂರು, ಬಸನಗೌಡ ಎಂ ಹಳ್ಳಿ, ಬಾಲಜಿ ಗೋನವಾರ, ಚಂದ್ರಶೇಖರ ಸಾಹುಕರ, ಶರಣಪ್ಪ ಹೊಸಗೌಡ್ರ, ಶರಣಗೌಡ ಬಸಪುರ, ಬಸವರಾಜ ಅಂಗಡಿ, ಹಸನಸಾಬ ಗೋನವಾರ, ಗುಂಡಪ್ಪ ಗೋನವಾರ ಮುಂತಾದವರು ಇದ್ದರು.
