ಬದುಕಿನಲ್ಲಿ ನಡೆ-ನುಡಿ ಒಂದಾಗಿಸಿಕೊಂಡು ಶರಣರ ವಚನ ಸಾಹಿತ್ಯದ ಮಾರ್ಗದಲ್ಲಿ ಮುನ್ನಡೆದರೆ ಯಶಸ್ವಿಯಾಗಲು ಸಾಧ್ಯವಿದೆ. ವಚನ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ ರೂಪುಗೊಳ್ಳುತ್ತದೆ. ಭಾರತ ಸಂವಿಧಾನದಲ್ಲಿ ಬಸವಾದಿ ಶರಣರ ವಚನಗಳು ಎದ್ದು ಕಾಣುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಶಿವಕುಮಾರ ವ್ಹಿ. ಉಪ್ಪೆ ಹೇಳಿದರು.
ಬೀದರ ನಗರದ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ನಡೆದ 171ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼದೇಶದಲ್ಲಿ ಪಾಶ್ಚಿಮಾತ್ಯ ಶಿಕ್ಷಣದ ಬೇರನ್ನು ಲಾರ್ಡ್ ಮೆಕಾಲೆರವರು ಬಿತ್ತಿದ್ದಾರೆ. ಇದರಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೇಲೆ ಕೆಟ್ಟಪರಿಣಾಮ ಬೀರಿದೆ. ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಮಹಾತ್ಮರ ಜೀವನ ಸೇರ್ಪಡೆಯಾದರೆ ಯುವ ಜನಾಂಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಮಕ್ಕಳಲ್ಲಿ ದೇಶಿ ಸಂಸ್ಕೃತಿ, ಪರಂಪರೆಯನ್ನು ಉಪದೇಶಿಸುವುದು ಔಚಿತ್ಯಪೂರ್ಣವಾದದ್ದುʼ ಎಂದರು.
ಸಾನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರು ʼಸದುವಿನಯವೇ ಸದಾಶಿವನೊಲುಮೆ’ ಎನ್ನುವಂತೆ ಸಕಲರಲ್ಲಿ ದೇವರನ್ನು ಕಂಡಿದರು. ಮನುಷ್ಯ ಅಹಂಕಾರ, ಸ್ವಾರ್ಥ ಬಿಟ್ಟು ವಿನಯಶೀಲತೆ ಬೆಳೆಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಕಾಯಕ, ದಾಸೋಹ ಮೈಗೂಡಿಸಿಕೊಂಡವರು ಶಿವನ ಒಲುಮೆಗೆ ಅರ್ಹರಾಗುತ್ತಾರೆʼ ಎಂದು ನುಡಿದರು.
ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಡಾ.ಸಿದ್ದಾರಾಮ ಬೆಲ್ದಾಳ ಶರಣರು ಮಾತನಾಡಿ, ʼಜಿಲ್ಲೆಯಲ್ಲಿ ಭಾಲ್ಕಿ ಹಿರೇಮಠದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಅನನ್ಯ. ತಾಂತ್ರಿಕ ಜಗತ್ತಿನಲ್ಲಿ ಮೊಬೈಲ್ ಸಂಸ್ಕೃತಿಯಿಂದ ಪುಸ್ತಕ ಅಧ್ಯಯನ ಕಡಿಮೆಯಾಗುತ್ತಿದೆ. ಮೊಬೈಲ್ ಸಂಸ್ಕೃತಿಗೆ ಮಕ್ಕಳು ಜೀವ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಶರಣರ ಮಾರ್ಗದಲ್ಲಿ ನಡೆಯುವಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕುʼ ಎಂದು ಪ್ರತಿಪಾದಿಸಿದರು.
ಬೆಂಗಳೂರಿನ ಯೋಗಗುರು ಮಾತನಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ರಾಧಿಕಾ ವಚನ ಚಿಂತನೆ ಮಂಡಿಸಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ.ಬಿರಾದರ್ ಅಧ್ಯಕ್ಷತೆ ವಹಿಸಿದರು. ಮಹಾಲಿಂಗ ಮಹಾಸ್ವಾಮೀಜಿ ಸಮ್ಮುಖ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ವಿಶ್ವವಿದ್ಯಾಲಯ, ಬ್ರಿಡ್ಜ್ ವಾಟರ್ ಸ್ಟೇಟ್ ವಿ.ವಿ. ನಡುವೆ ಒಪ್ಪಂದ
ಕಾರ್ಯಕ್ರಮದಲ್ಲಿ ದಾಸೋಹಿಗಳಾದ ಮಹಾನಂದಾ ಸಂಗಮೇಶ ಶೆಟಕಾರ ಗುರುಪೂಜೆ ನೆರೆವೇರಿಸಿದರು. ವಚನಶ್ರೀ ಹಾಗೂ ಚನ್ನಬಸಪ್ಪಾ ನೌಬಾದೆ ವಚನ ಗಾಯನ ನಡೆಸಿಕೊಟ್ಟರು. ಪ್ರಮುಖರಾದ ಉಮಾಕಾಂತ ಮೀಸೆ, ಸತ್ಯಕ್ಕ, ಜ್ಯೋತಿ, ಸಂಗ್ರಾಮಪ್ಪ ಬಿರಾದರ, ಸಂಗ್ರಾಮ ಎಂಗಳೆ, ಗುರುನಾಥ ಬಿರಾದರ, ಶ್ರೀಕಾಂತ ಬಿರಾದರ, ಅಪ್ಪಾರಾವ ನವಾಡೆ, ಲಕ್ಷ್ಮೀಬಾಯಿ ರಾಮಶೆಟ್ಟಿ ಮಾಳಗೆ, ಮೀನಾಕ್ಷಿ ಪಾಟೀಲ್, ಮಲ್ಲಿಕಾರ್ಜುನ ಹುಡಗೆ, ರಾಮನಗೌಡ, ರಜೀಯಾ ಬಳಬಟ್ಟಿ, ತೀರ್ಥಮ್ಮಾ, ಮಹಾದೇವಿ, ವೈಜಿನಾಥ ಬಿರಾದರ, ಶಿವಾನಿ, ರೂಪಾಲಿ ಹಾಗೂ ಅರ್ಪಿತಾ ಉಪಸ್ಥಿತರಿದರು.