ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಮನೆಗಳಲ್ಲಿ ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಕಳ್ಳರ ಹಾವಳಿಯನ್ನು ತಡೆಯಲು, ಕಳ್ಳರನ್ನು ಹಿಡಿಯಲು ಮಹಿಳೆಯರೇ ಮುಂದಾಗಿದ್ದಾರೆ. ಮುಧೋಳದ ಜಯನಗರ ಬಡಾವಣೆಯ ಮಹಿಳೆಯರು ದೊಣ್ಣೆ ಹಿಡಿದು, ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ.
ಮಹಿಳೆಯರ ಜೊತೆಗೆ ಪುರುಷರೂ ಕೈಜೋಡಿಸಿದ್ದಾರೆ. ದಿನನಿತ್ಯ ಮಧ್ಯರಾತ್ರಿ 12.30ರಿಂದ ಬೆಳಗಿನ ಜಾವ 4 ಗಂಟೆವರೆಗೆ ಗುಂಪುಗಳಾಗಿ ಗಸ್ತು ತಿರುಗುತ್ತಿದ್ದಾರೆ. ಪಟ್ಟಣದ ಜಯನಗರ, ಕೊಡಗ ಪ್ಲಾಟ್, ಸದಾಶಿವ ಕಾಲೊನಿ, ಯಡಹಳ್ಳಿ ಹಳೇ ಬೈ ಪಾಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಪುರಷರು ಗಸ್ತು ತಿರುಗುತ್ತಿದ್ದಾರೆ. ಕಳ್ಳರನ್ನು ಹಿಡಿಯಲು ಪೊಲೀಸರಿಗೆ ನೆರವು ನೀಡುತ್ತಿದ್ದಾರೆ.
ಗಸ್ತು ನಡೆಸುವುದಾಗಿಯೇ ಮುಧೋಳ ನಿವಾಸಿಗಳು ವಾಟ್ಸ್‌ಆ್ಯಪ್ ಗುಂಪನ್ನು ರಚಿಸಿದ್ದಾರೆ. ಆ ಗುಂಪಿನಲ್ಲಿ ಯಾರು ಯಾವ ಭಾಗದಲ್ಲಿ ಗಸ್ತಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಚರ್ಚಿಸಿಕೊಂಡು, ಒಗ್ಗಟ್ಟಾಗಿ ರಸ್ತೆಗೆ ಇಳಿಯುತ್ತಿದ್ದಾರೆ. ಸಾರ್ವಜನಿಕರೇ ಗಸ್ತು ನಡೆಸುತ್ತಿದ್ದು, ಪಟ್ಟಣದ ನಿವಾಸಿಗಳು ಆತಂಕವಿಲ್ಲದೆ ಜೀವಿಸುವ ವಾತಾವರಣ ಸೃಷ್ಟಿಯಾಗಿದೆ.
ಪೊಲೀಸರು ಕೂಡ ‘ರಾತ್ರಿ ಗಸ್ತು’ ತಿರುವುದನ್ನು ಹೆಚ್ಚಿಸಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಳ್ಳರ ಹಾವಳಿಗೆ ಬ್ರೇಕ್ ಹಾಕಲು ಮುಧೋಳ ಮಾದರಿಯಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.