ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಮರಳು ತುಂಬಿದ ಟಿಪ್ಪರ್ ಲಾರಿಗಳು ಅತಿಯಾದ ವೇಗದಿಂದ ಸಂಚಾರ ಮಾಡುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಈ ಹಿಂದೆ ಅಪಘಾತ ಸಂಭವಿಸಿ ಓರ್ವರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಬಾಳೆಲೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಬಾಳೆಲೆ ಸಮೀಪ ಕೈನಟಿಯಲ್ಲಿ ಟಿಪ್ಪರ್ ಲಾರಿ ಹಾಗೂ ಮಾರುತಿ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳೀಯ ಉದ್ಯಮಿ ಅಡ್ಡೆಂಗಡ ಸಜನ್ ಎಂಬವರು ಸಾವನಪ್ಪಿದ್ದರು.
ತಾಲ್ಲೂಕಿನಲ್ಲಿ ಮರಳು ದಂಧೆ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ, ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ಲಾರಿಗಳು ಮರಳು ತುಂಬಿಸಿಕೊಂಡು ವೇಗವಾಗಿ ಓಡಾಡುತ್ತಿದ್ದರೂ ಇತ್ತ ಕಡೆ ಯಾವೊಬ್ಬ ಅಧಿಕಾರಿಗೂ ಗಮನ ಹರಿಸುತ್ತಿಲ್ಲ. ಮರಳು ದಂಧೆಗೆ ಕಡಿವಾಣ ಹಾಕಲು ತಹಶೀಲ್ದಾರ್, ಪೊಲೀಸ್ ಇಲಾಖೆ ವಿಫಲವಾಗಿದ್ದು ಟಿಪ್ಪರ್ ಲಾರಿಗಳ ಓಡಾಟಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಅತಿಯಾದ ವೇಗದಿಂದ ಓಡಾಡುವ ಲಾರಿಗಳಿಂದ ಸಾರ್ವಜನಿಕರು ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕಿರಿದಾದ ರಸ್ತೆಗಳು, ಅದರಲ್ಲೂ ಹೆಚ್ಚು ತಿರುವುಗಳು, ಇಳಿಜಾರು, ದಿಣ್ಣೆಯಂತಹ ರಸ್ತೆಗಳಲ್ಲಿ ಮನಬಂದಂತೆ ಲಾರಿ ಚಲಾಯಿಸುತ್ತಿದ್ದು ಬೇರೆ ವಾಹನಗಳಿಗೆ ಕಿರಿಕಿರಿ ಆಗುತ್ತಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಜಾಗೃತಿ ಅಗತ್ಯ: ಡಿಸಿ ಶಿಲ್ಪಾ ನಾಗ್
ಟಿಪ್ಪರ್ ಅಪಘಾತಕ್ಕೆ ಬಲಿಯಾದ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಕೂಡಲೇ ಇಲಾಖೆ, ತಾಲ್ಲೂಕು ಆಡಳಿತ ಟಿಪ್ಪರ್ ಲಾರಿ ಓಡಾಟ ಹಾಗೂ ಮರಳು ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
