ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ – ಉನ್ನತ ಶಿಕ್ಷಣದ ಅಧೋಗತಿ

Date:

Advertisements
 ಉನ್ನತ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಅನುದಾನವು ಬಜೆಟ್‌ನ 0.2% ಮಾತ್ರ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ತಮ ಉನ್ನತ ಶಿಕ್ಷಣ ನೀಡಲು ಸಾಧ್ಯವೇ ಇಲ್ಲ ಎಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದಾರೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅಧಿಕಾರಿಗಳೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ

ರಾಜ್ಯ ಸಚಿವ ಸಂಪುಟದ ಉಪಸಮಿತಿಯು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನಿಸಿದೆ. ಉಪಸಮಿತಿಯ ನಿರ್ಧಾರಕ್ಕೆ ಸಚಿವ ಸಂಪುಟ ಅನುಮೋದನೆ ನೀಡದರೆ, ಪಟ್ಟಿ ಮಾಡಲಾದ 9 ವಿಶ್ವವಿದ್ಯಾಲಯಗಳ ಬಾಗಿಲು ಮುಚ್ಚಲಿದೆ.

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು 10 ಹೊಸ ವಿಶ್ವವಿದ್ಯಾಲಯಗಳನ್ನು ತೆರೆದಿತ್ತು. ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೀದರ್, ಮಹಾರಾಣಿ ಕ್ಲಸ್ಟರ್ ಹಾಗೂ ನೃಪತುಂಗ ವಿಶ್ವವಿದ್ಯಾಲಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸ್ವಿತ್ವಕ್ಕೆ ಬಂದಿದ್ದವು. ಆದರೆ, ಈಗ ಕಾಂಗ್ರೆಸ್‌ ಸರ್ಕಾರವು ಬೀದರ್ ವಿಶ್ವವಿದ್ಯಾಲಯವನ್ನು ಹೊರತುಪಡಿಸಿ, ಉಳಿದೆಲ್ಲ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮತ್ತು ಹಿಂದೆ ಇದ್ದ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ನೀಡಲು ತೀರ್ಮಾನಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಮಾತು ಮಾತಿಗೆ ಹೊಸ-ಹೊಸ ವಿಶ್ವವಿದ್ಯಾಲಯಗಳನ್ನು ನಿರ್ಮಿಸುವ ಪರಿಪಾಠ ಹೆಚ್ಚಾಗಿದೆ. ಜಿಲ್ಲೆಗೊಂದು, ತಾಲೂಕಿಗೊಂದು ವಿಶ್ವವಿದ್ಯಾಲಯಗಳು ರಚನೆಯಾಗುತ್ತಿವೆ. ಹಳೆಯ ಕಾಲೇಜುಗಳನ್ನೇ ವಿಶ್ವವಿದ್ಯಾಲಯಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಆದಾಗ್ಯೂ, ವಿಶ್ವವಿದ್ಯಾಲಯಗಳ ರಚನೆಯಿಂದ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಿವೆ ಎಂದು ಭಾವಿಸಲಾಗದು. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣದ ಗುಣಮಟ್ಟ ಕಳಪೆಯಾಗುತ್ತ ನಡೆದಿದೆ. ವಿಶೇಷವಾಗಿ ಉನ್ನತ ಶಿಕ್ಷಣದ ಗುಣಮಟ್ಟವಂತೂ ಕುಸಿದುಹೋಗಿದೆ.

Advertisements

ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು, ಹಲವು ಮಾನದಂಡಗಳಿವೆ. ನಿರ್ದಿಷ್ಟ ವಿಶ್ವವಿದ್ಯಾಲಯಗಳ ಅಡಿಯಲ್ಲಿ ನಿರ್ದಿಷ್ಟ ಸಂಖ್ಯೆಯ ಕಾಲೇಜುಗಳು ಇರಬೇಕು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಹೊಂದಿರಬೇಕು. ಮುಖ್ಯವಾಗಿ, ಕಾಯಂ ಉಪನ್ಯಾಸಕರು, ಪ್ರೊಫೆಸರ್‌ಗಳು ಇರಬೇಕು. ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತಿದೆ.

ಬಿಜೆಪಿ ಸರ್ಕಾರ ರಚಿಸಿದ 10 ವಿಶ್ವವಿದ್ಯಾಲಯಗಳು ಈ ಹಿಂದೆ, ಪಿಜಿ ಸೆಂಟರ್‌ಗಳಾಗಿದ್ದವು. ಅವುಗಳನ್ನು ವಿಶ್ವವಿದ್ಯಾಲಯಗಳಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರ ನಿರ್ಧರಿಸಿತು. ವಿಶ್ವವಿದ್ಯಾಲಯಗಳಾಗಿ ರೂಪಿಸುವುದು ಎಂದರೆ, ಕೇವಲ ಒಂದೆಡೆರಡು ಕಟ್ಟಡಗಳನ್ನು ನಿರ್ಮಿಸುವುದು ಮಾತ್ರವಲ್ಲ. ನಾನಾ ಸೌಲಭ್ಯಗಳನ್ನು ಒದಗಿಸಬೇಕು. ‘ಸೆಂಟರ್ ಆಫ್ ಎಕ್ಸಲೆನ್ಸ್‌’ ಎಂಬಂತಹ ರೀತಿಯ ವಾತಾವರಣವನ್ನು ಸೃಷ್ಟಿಸಬೇಕು.

ಪ್ರಮುಖವಾಗಿ, ಪ್ರತಿಯೊಂದು ಹೊಸ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸರಿಸುಮಾರು 350 ಕೋಟಿ ರೂ. ಅನುದಾನ ಬೇಕು. 100 ರಿಂದ 200 ಎಕರೆ ಜಮೀನು ಬೇಕು. ಜೊತೆಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕ, ವೇತನ, ಸಲಕರಣೆ, ವಾಹನ, ಪೀಠೋಪಕರಣ ಸೇರಿದಂತೆ ಮೌಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಬೇಕು.

ಆದರೆ, ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದ ಹಿಂದಿನ ಸರ್ಕಾರ, ಏಕಾಏಕಿ ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸಿತು. ಆದರೆ, ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಿಲ್ಲ. ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿನ ಮೊತ್ತವನ್ನು ಹೆಚ್ಚಿಸಲೂ ಇಲ್ಲ.

ಹಾಗೆ ನೋಡಿದರೆ, ಈಗಾಗಲೇ ಹತ್ತಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದು ಬಿದ್ದಿದೆ. ಹಳೆಯ ವಿಶ್ವವಿದ್ಯಾಲಯಗಳಲ್ಲೇ ಕಾಯಂ ಪ್ರೊಫೆಸರ್‌ಗಳಿಲ್ಲ. 10 ವರ್ಷಗಳಿಗೂ ಹಿಂದೆ, ಕಾಲೇಜು-ಪಿಜಿ ಸೆಂಟರ್‌ಗಳಲ್ಲಿ ಕಾಯಂ ಉಪನ್ಯಾಸಕರ ಸಂಖ್ಯೆ ಹೆಚ್ಚಿತ್ತು. ಪ್ರತಿಯೊಂದು ವಿಭಾಗದಲ್ಲಿಯೂ ಒಬ್ಬರು ಅಥವಾ ಇಬ್ಬರು ಅತಿಥಿ ಉಪನ್ಯಾಸಕರು ಮಾತ್ರವೇ ಇರುತ್ತಿದ್ದರು. ಆದರೆ, ಈಗ ಎಲ್ಲ ವಿಶ್ವವಿದ್ಯಾಲಯ-ಕಾಲೇಜುಗಳಲ್ಲಿ ಬಹುತೇಕ 95% ಉಪನ್ಯಾಸಕರು ಅತಿಥಿ ಉಪನ್ಯಾಸಕರೇ ಆಗಿದ್ದಾರೆ.

ಕಾಯಂ ಉಪನ್ಯಾಸಕರ ನೇಮಕಾತಿಗಳೇ ನಡೆಯುತ್ತಿಲ್ಲ. ಹಿಂದೆ ಇದ್ದ ಕಾಯಂ ಉಪನ್ಯಾಸಕರು ನಿವೃತ್ತಿ ಹೊಂದಿದ ಬಳಿಕ, ಅವರಿಂದ ತೆರವಾದ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನೇ ತುಂಬಿಸಲಾಗುತ್ತಿದೆ.

ಮಾತ್ರವಲ್ಲದೆ, ಉನ್ನತ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಅನುದಾನವು ಬಜೆಟ್‌ನ 0.2% ಮಾತ್ರ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ತಮ ಉನ್ನತ ಶಿಕ್ಷಣ ನೀಡಲು ಸಾಧ್ಯವೇ ಇಲ್ಲ ಎಂದು ಶಿಕ್ಷಣ ತಜ್ಞರು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದಾರೆ. ಶಿಕ್ಷಣಕ್ಕೆ ನೀಡಲಾಗುವ ಅನುದಾನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಹೀಗಿದ್ದರೂ, ಸರ್ಕಾರಗಳು ಕಿವಿಗೊಟ್ಟಿಲ್ಲ.

ಹೀಗಾಗಿಯೇ, ಹೊಸ ವಿಶ್ವವಿದ್ಯಾಲಯಗಳ ರಚನೆಗೆ ಅಧಿಕಾರಿಗಳೂ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳ ಮಾತನ್ನು ಕೇಳುವ ವ್ಯವಧಾನ ಸರ್ಕಾರಕ್ಕೆ ಇರಲಿಲ್ಲ. ಪ್ರಸ್ತುತ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು ಎಂದರೆ, ಉನ್ನತ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹಾಳುಗೆಡವುವುದು ಎಂದೇ ಭಾವಿಸಲಾಗುತ್ತಿದೆ.

ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಯಾದಾಗ ಅವುಗಳು ಹಳೆಯ ವಿಶ್ವವಿದ್ಯಾಲಯಗಳಿಂದ ಪ್ರತ್ಯೇಕಗೊಳ್ಳುತ್ತವೆ. ಹಲವಾರು ಕಾಲೇಜುಗಳ ಆಡಳಿತ ನಿರ್ವಹಣೆಯೂ ಬದಲಾಗುತ್ತದೆ. ಇದರಿಂದ, ಅಗತ್ಯ ಸೌಲತ್ತುಗಳು ಸಿಗದೆ ಹೊಸ ವಿಶ್ವವಿದ್ಯಾಲಯಗಳ ಗುಣಮಟ್ಟವೂ, ತಮ್ಮಲ್ಲಿದ್ದ ಅಧಿಕಾರ, ನಿರ್ವಹಣೆಯನ್ನು ಕಿತ್ತು ಹೊಸ ವಿಶ್ವವಿದ್ಯಾಲಯಗಳಿಗೆ ನೀಡುವುದರಿಂದ ಹಳೆಯ ವಿಶ್ವವಿದ್ಯಾಲಯಗಳ ಗುಣಮಟ್ಟವೂ ನಾಶವಾಗುತ್ತದೆ. ಈ ಬೆಳವಣಿಗೆ ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ವರದಿ ಓದಿದ್ದೀರಾ?: ಹಾಜರಾತಿ ಕೊರತೆ ಕಾರಣಕ್ಕೆ ಶಿಕ್ಷಣದಿಂದ ಹೊರಗಿಡುವ ಸರ್ಕಾರದ ನೀತಿ: ಬಡವರ ಮಕ್ಕಳ ಭವಿಷ್ಯಕ್ಕೆ ಮಾರಕ

ಹತ್ತಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಅನೇಕ ವಿಶ್ವವಿದ್ಯಾಲಯ ಮತ್ತು ಅವುಗಳ ಅಡಿಯಲ್ಲಿರುವ ಕಾಲೇಜುಗಳಲ್ಲಿ ಬೋಧಕರ ಕೊರತೆ ಹೆಚ್ಚಾಗಿದೆ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿರುವ ವಿಜ್ಞಾನ ವಿಭಾಗದಲ್ಲಿ ನಾಲ್ಕೈದು ಕೋರ್ಸ್‌ಗಳಿವೆ. ಆದರೆ, ಪ್ರತಿಯೊಂದು ಕೋರ್ಸ್‌ಗೂ ಒಬ್ಬರು ಎಚ್‌ಒಡಿ ಇರಬೇಕು. ಅವರು ಕಾಯಂ ಉಪನ್ಯಾಸಕರೇ ಆಗಿರಬೇಕು. ಆದರೆ, ಇಡೀ ವಿಜ್ಞಾನ ವಿಭಾಗದಲ್ಲಿ ಒಬ್ಬರು ಮಾತ್ರವೇ ಕಾಯಂ ಬೋಧಕರಿದ್ದು, ಅವರೇ ಎಲ್ಲ ವಿಭಾಗಗಳ ಎಚ್‌ಒಡಿ ಆಗಿದ್ದಾರೆ.

ಅಂತೆಯೇ, ಮೈಸೂರು ವಿಶ್ವವಿದ್ಯಾಲಯದ ಮಾಸನ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಸಮಾಜಶಾಸ್ತ್ರ ವಿಭಾಗದಲ್ಲಿ ಒಬ್ಬರೂ ಕಾಯಂ ಪ್ರೊಫೆಸರ್‌ಗಳಿಲ್ಲ. ಇಡೀ ವಿಭಾಗ ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದೆ.

ಇಂತಹ ಹಲವಾರು ನಿದರ್ಶನಗಳು ರಾಜ್ಯಾದ್ಯಂತ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ಕಂಡುಬರುತ್ತದೆ. ಹೀಗಾಗಿ, ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವುದರಿಂದ ಯಾವುದೇ ಸಮಸ್ಯೆಯಿಲ್ಲ. ಬದಲಾಗಿ, ಇರುವ ಹಳೆಯ ವಿಶ್ವವಿದ್ಯಾಲಯಗಳಿಗೆ ಅನುದಾನ ಹೆಚ್ಚಿಸಬೇಕು. ಕಾಯಂ ಉಪನ್ಯಾಸಕರು ಮತ್ತು ಪ್ರೊಫೆಸರ್‌ಗಳನ್ನು ನೇಮಿಸಬೇಕು. ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಕುಸಿದು ಹೋಗಿರುವ ಉನ್ನತ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಬೇಕು.

ಒಂಬತ್ತು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ಕಾಂಗ್ರೆಸ್‌ ಸರ್ಕಾರ, ಮತ್ತೊಂದು ಕೃಷಿ ವಿಶ್ವವಿದ್ಯಾಲಯವನ್ನು ತೆರೆಯಲು ನಿರ್ಧರಿಸಿದೆ. ಈ ತೀರ್ಮಾನಕ್ಕೂ ಆಧಾರಗಳಿಲ್ಲ. ಕೃಷಿ ವಿಶ್ವವಿದ್ಯಾಲಯ ತೆರೆಯುವ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ. ಯಾಕಾಗಿ ಕೃಷಿ ವಿಶ್ವವಿದ್ಯಾಲಯ ತೆರೆಯಬೇಕು ಎಂಬುದಕ್ಕೆ ಸರ್ಕಾರದ ಬಳಿ ನಿರ್ದಿಷ್ಟ ಕಾರಣಗಳಿಲ್ಲ. ಇದೂ ಕೂಡ ರಾಜಕೀಯ ತೀರ್ಮಾನವಾಗಿಯೇ ತೋರುತ್ತಿದೆ.

ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆ ಮಹತ್ವವು ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರಲ್ಲಿ ಇದೆಯೇ ಹೊರತು, ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಅಲ್ಲ ಎಂಬುದನ್ನು ಸರ್ಕಾರಗಳು ಅರಿತುಕೊಳ್ಳಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

ಚಿತ್ರದುರ್ಗ | ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಸಬಲೀಕರಣ; ಸಚಿವ ಡಿ.ಸುಧಾಕರ್ ಅಭಿಮತ

"ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ...

Download Eedina App Android / iOS

X