ಕೊಲೆ ಯತ್ನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕಾಗಿ, ವಿಚಲಿತಗೊಂಡ ಅಪರಾಧಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಇದೇ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮೇಲೆ ಹಲ್ಲೆಗೆ ಯತ್ನಿಸಿರುವ ಎರಡನೇ ಘಟನೆ ಇದಾಗಿದೆ.
ಕೊಲೆ ಯತ್ನ ಪ್ರಕರಣದ ಅಪರಾಧಿ ಸರ್ದಾರ್ ಶ್ಯಾಮ್ ಕುರ್ತಿ ಅಲಿಯಾಸ್ ಕಾಮ್ ಸಿಂಗ್ ಎಂಬಾತ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ.
ಪ್ರಕರಣದ ವಿಚಾರಣೆ ನಡೆದು, ಅಂತಿಮ ತೀರ್ಪು ಪ್ರಕಟಿಸುವಾಗ ಅಪರಾಧಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಅಪರಾಧಿ ಶ್ಯಾಮ್ ಕುರ್ತಿ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ತನಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಕೋಮಗೊಂಡ ಶ್ಯಾಮ್ ಕುರ್ತಿ, ಏಕಾಏಕಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ.
ಘಟನೆಯಿಂದಾಗಿ ನ್ಯಾಯಾಲಯದ ಆವರಣದಲ್ಲಿ ಗದ್ದಲ ಉಂಟಾಗಿತ್ತು. ಅಪರಾಧಿಯನ್ನು ತಕ್ಷಣವೇ ಹಿಡಿದ ಪೊಲೀಸರು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಜಗದ್ಗಿರಿಗುಟ್ಟ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ, ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಅಪರಾಧಿ ಕರಣ್ ಸಿಂಗ್ ಎಂಬಾತ ಕೂಡ ತನಗೆ ಜೀವಾವಧಿ ಶಿಕ್ಷೆಗೆ ವಿಧಿಸಿದ್ದಕ್ಕಾಗಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದರು.