ಪೊಲೀಸ್ ಠಾಣೆಯಲ್ಲೇ ದಲಿತ ಯುವಕನ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನ್ಯಾಯಕ್ಕಾಗಿ ದಲಿತ ಯುವಕ ಆಗ್ರಹಿಸಿದ್ದಾರೆ.
ತೆಲಂಗಾಣದ ಖಮ್ಮಮ್ ಜಿಲ್ಲೆಯ ಚಿಂತಕಣಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚಿಂತಕಣಿ ಸಮೀಪದ ಬೋನಕಲ್ ನಿವಾಸಿ, ದಲಿತ ಯುವಕ ಬುಡಲ ಮನೋಜ್ ಎಂಬವರು ಕಾಂಗ್ರೆಸ್ ಮುಖಂಡ ಉಮ್ಮಿನೇನಿ ರಮೇಶ್ ಎಂಬವರ ವಿರುದ್ಧ ಜಾತಿ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಚಿಂತಕಣಿ ಬಳಿಯ ನಾಗುಲವಂಚದಲ್ಲಿ ತನ್ನ ವಾಹನಕ್ಕೆ ಪೆಟ್ರೀಲ್ ತುಂಬಿಸಲು ಪ್ರೆಟ್ರೋಲ್ ಬಂಕ್‌ಗೆ ಮನೋಜ್ ತೆರಳಿದ್ದರು. ಈ ವೇಳೆ, ಕೆಲವು ಯುವಕರು ಪೆಟ್ರೋಲ್ ಬಂಕ್ ಸಿಬ್ಬಂದಿಯ ಜೊತೆ ಗಲಾಟೆ ಮಾಡುತ್ತಿದ್ದರು. ಜಗಳವನ್ನು ತಡೆಯಲು ಮನೋಜ್ ಪ್ರಯತ್ನಿಸಿದ್ದಾರೆ. ಆ ಬಳಿಕ, ಗಲಾಟೆ ಮಾಡಿದ ಯುವಕರ ವಿರುದ್ಧ ಪೆಟ್ರೋಲ್ ಬಂಕ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ವಿಚಾರಣೆಗಾಗಿ ಮನೋಜ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ. ಅದರಂತೆ, ಎಸ್‌ಐ ನಾಗುಲ್ ಮೀರಾ ಅವರೊಂದಿಗೆ ಮಾತನಾಡಲು ಪೊಲೀಸ್ ಠಾಣೆಗೆ ಮನೋಜ್ ತೆರಳಿದ್ದಾರೆ. ಈ ವೇಳೆ, ಮನೋಜ್ ಮೇಲೆ ಕಾಂಗ್ರೆಸ್ ನಾಯಕ ಉಮ್ಮಿನೇನಿ ರಮೇಶ್ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಮಾಡಿದ್ದಾರೆ ಎಂದು ವರದಿಯಾಗಿದೆ.
ತಾವು ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಅವರ ಅನುಯಾಯಿಗಳೆಂದು ಹೇಳಿಕೊಂಡಿದ್ದು, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮನೋಜ್ ಅವರು ಚಿಂತಕಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.