ಭಾರತದ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯು ಶ್ರೀಲಂಕಾದಲ್ಲಿನ ತನ್ನ ಪವನ ಶಕ್ತಿ ಯೋಜನೆ ಮತ್ತು ಎರಡು ಪ್ರಸರಣ ಯೋಜನೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.
ವನ್ಯಜೀವಿ, ಪ್ರಕೃತಿ ಸಂರಕ್ಷಣಾ ಸೊಸೈಟಿ ಮತ್ತು ಪರಿಸರ ಪ್ರತಿಷ್ಠಾನ ಸೇರಿದಂತ ಹಲವಾರು ಪರಿಸರ ಸಂಘಟನೆಗಳು ಪವನ ಶಕ್ತಿ ಯೋಜನೆಯನ್ನು ತೀವ್ರವಾಗಿ ಆಕ್ಷೇಪಿಸಿದ್ದವು. ಈ ಯೋಜನೆಯಿಂದ ವಲಸೆ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಸಮರ್ಪಕ ಪರಿಸರ ಪರಿಣಾಮ ಮೌಲ್ಯಮಾಪನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಮನ್ನಾರ್‌ನ ಬಿಷಪ್ ನೇತೃತ್ವದ ಸ್ಥಳೀಯ ಸಮುದಾಯಗಳು ಸಹ ಯೋಜನೆಯನ್ನು ಪ್ರತಿಭಟಿಸಿ, ಯೋಜನೆಯು ಕೈಗಾರಿಕೆಗಳನ್ನು ಅಡ್ಡಿಪಡಿಸಲಿದ್ದು, ಜನರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದರು.
ಅದಲ್ಲದೆ ಈ ಹಿಂದಿನ ಸರ್ಕಾರವು ಯೋಜನೆಗಳಿಗೆ ಹೇಗೆ ಅನುಮೋದನೆ ನೀಡಿತು ಎಂಬ ವಿಚಾರದಲ್ಲಿ ಹೆಚ್ಚಿದ ಪರಿಶೀಲನೆಯ ನಂತರ ಅದಾನಿ ಸಂಸ್ಥೆಯು ಶ್ರೀಲಂಕಾದಲ್ಲಿನ ತನ್ನ ಯೋಜನೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ತೀವ್ರ ಪ್ರತಿಭಟನೆ ಹಿನ್ನಲೆ ಈ ಕ್ರಮವನ್ನು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರಿಗೆ ರಾಜಕೀಯ ವಿಜಯವೆಂದು ಪರಿಗಣಿಸಲಾಗಿದ್ದು, ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ಶ್ರೀಲಂಕಾದ ಮನ್ನಾರ್ ಮತ್ತು ಪೂನೆರಿನ್ ಕರಾವಳಿ ಪ್ರದೇಶಗಳಲ್ಲಿ 484 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜಿಸಲಾದ ಪವನ ವಿದ್ಯುತ್ ಯೋಜನೆಗೆ ಮೇ 2024 ರಲ್ಲಿ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಆಡಳಿತದಲ್ಲಿ ಸಹಿ ಹಾಕಲಾಗಿತ್ತು. ಈ ಒಪ್ಪಂದವು ಪ್ರತಿ ಕಿಲೋವ್ಯಾಟ್‌ಗೆ 0.0826 ಡಾಲರ್ ವಿದ್ಯುತ್ ಖರೀದಿ ದರವನ್ನು ನಿಗದಿಪಡಿಸಿತು. ಈ ದರವು ಸ್ಥಳೀಯ ಬಿಡ್ಡರ್‌ಗಳು ನೀಡುವ ದರಗಳಿಗಿಂತ ಭಾರಿ ಹೆಚ್ಚಿನ ದರವಾಗಿದೆ. ಈ ಬೆಲೆ ವ್ಯತ್ಯಾಸವು ಸ್ಥಳೀಯ ಬಿಡ್ಡರುಗಳು ಮತ್ತು ಜನರಿಂದ ಭಾರಿ ಟೀಕೆ ಮತ್ತು ಪ್ರತಿರೋಧ ಉಂಟಾಗಿತ್ತು.
ಕಳೆದ ವರ್ಷ ನವೆಂಬರ್‌ನಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಏಳು ಜನರ ವಿರುದ್ಧ ಲಂಚದ ಆರೋಪದ ಮೇಲೆ ಅಮೆರಿಕದ ಇಲಾಖೆಯೊಂದು ದೋಷಾರೋಪಣೆ ಮಾಡಿತ್ತು. ಇದರ ನಂತರ, ಶ್ರೀಲಂಕಾದಲ್ಲಿ ಕಂಪನಿಯ ಕಾರ್ಯಾಚರಣೆಗಳನ್ನು ಪರಿಶೀಲಿಸಲಾಗುತ್ತಿತ್ತು. ಈ ವೇಳೆ ಅದಾನಿ ಸಮೂಹದ ಪವನ ಶಕ್ತಿ ಯೋಜನೆಯ ಭ್ರಷ್ಟಾಚಾರ ಹೊರಬಂದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಹದ್ದು ಮೀರಿದ ವರ್ತನೆ- ಗೆರೆ ಎಳೆಯುವುದೇ ಕಾಯ್ದಿರಿಸಿರುವ ಸುಪ್ರೀಮ್ ತೀರ್ಪು?
ಅಧ್ಯಕ್ಷ ಅನುರಾ ದಿಸ್ಸನಾಯಕೆ ಅವರು ತಮ್ಮ ಮೊದಲ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದರು. ಶ್ರೀಲಂಕಾದಲ್ಲಿ ಹೂಡಿಕೆ ಮಾಡಿರುವ ಯೋಜನೆಗಳ ಕುರಿತು ಹಣಕಾಸು ಹಾಗೂ ವಿದೇಶಾಂಗ ಸಚಿವರು ಪರಿಶೀಲನೆ ನಡೆಸಬೇಕು. ಅದಾನಿ ಹೂಡಿಕೆ ಕುರಿತು ಎರಡು ತನಿಖೆಗಳು ನಡೆಯಲಿವೆ. ಇವುಗಳು ನೀಡುವ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದರು.
ಇತ್ತೀಚಿಗೆ ಗೌತಮ್ ಅದಾನಿ ಅವರು ಭಾರತದಲ್ಲಿ ಕೈಗೊಳ್ಳಲು ಯೋಜಿಸಿರುವ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಅಧಿಕಾರಿಗಳಿಗೆ 2 ಸಾವಿರ ಕೋಟಿ ರೂನಷ್ಟು ಲಂಚ ನೀಡಿರುವುದು ಹಾಗೂ ಅಮೆರಿಕದ ಹೂಡಿಕೆದಾರರ ದಿಕ್ಕು ತಪ್ಪಿಸಲು ಸುಳ್ಳು ಹೇಳಿ ವಂಚಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕದ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. ಪವನ ವಿದ್ಯುತ್ ಯೋಜನೆಗಾಗಿ ಅದಾನಿ ಸಮೂಹವು ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ 44.2 ಕೋಟಿ ಅಮೆರಿಕನ್ ಡಾಲರ್‌ನಷ್ಟು ಹೂಡಿಕೆ ಮಾಡಿದೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜನೆ ಕೈಗೊಳ್ಳದಂತೆ ನ್ಯಾಯಾಲಯ ತಡೆ ನೀಡಿದೆ.
4 ರಾಷ್ಟ್ರಗಳಲ್ಲಿ ಅದಾನಿ ಯೋಜನೆ ಸ್ಥಗಿತ
ಇತ್ತೀಚಿನ ಕೆಲವು ತಿಂಗಳಿನಿಂದ ಶ್ರೀಲಂಕಾ ಸೇರಿ 4 ರಾಷ್ಟ್ರಗಳು ಅದಾನಿ ಸಮೂಹದ ಯೋಜನೆಗಳನ್ನು ರದ್ದುಗೊಳಿಸಿವೆ.
ಕೆನ್ಯಾ
ಅಮೆರಿಕದಲ್ಲಿ ಅದಾನಿ ಸಮೂಹದ ವಿರುದ್ಧ ನಡೆಯುತ್ತಿರುವ ವಿಚಾರಣೆ ನಂತರ, ನೈರೋಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಒಳಗೊಂಡಂತೆ ಕೆನ್ಯಾದಲ್ಲೂ ಅದಾನಿ ಸಮೂಹ ಕೈಗೊಂಡಿರುವ 2.5 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ಅಲ್ಲಿನ ಸರ್ಕಾರ ರದ್ದುಪಡಿಸಿದೆ. ಅಧ್ಯಕ್ಷ ವಿಲಿಯಂ ರುಟೊ ಅವರು ವಿಮಾನ ನಿಲ್ದಾಣ ಯೋಜನೆ ರದ್ದುಪಡಿಸುವುದರ ಜೊತೆ 30 ವರ್ಷದ ಒಪ್ಪಂದದ 736 ಮಿಲಿಯನ್ ಡಾಲರ್ ವೆಚ್ಚದ ವಿದ್ಯುತ್ ವಿತರಣಾ ಮಾರ್ಗಗಳನ್ನು ರದ್ದುಗೊಳಿಸಿದ್ದರು. ಲಂಚದ ಆರೋಪದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಫ್ರಾನ್ಸ್
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನೊಂದಿಗೆ ಶೇ. 20 ಷೇರುಗಳನ್ನು ಹೊಂದಿರುವ ಫ್ರಾನ್ಸ್‌ನ ವಿದ್ಯುತ್ ಸಂಸ್ಥೆ ಟೋಟಲ್ ಎನರ್ಜೀಸ್ ಅದಾನಿ ಕಂಪನಿಯ ಜೊತೆ ಮುಂದಿನ ಯಾವುದೇ ಒಪ್ಪಂದಗಳನ್ನು ಮಾಡದಿರಲು ನಿರ್ಧರಿಸಿದೆ. ಆದಾನಿ ಸಂಸ್ಥೆ ತಮ್ಮ ಮೇಲೆ ಬಂದಿರುವಂತಹ ಆರೋಪಗಳನ್ನು ನಿರಾಧಾರ ಎಂದು ಸ್ಪಷ್ಟವಾಗಿ ಸಾಬೀತುಪಡಿಸುವವರೆಗೂ ಆ ಸಮೂಹದ ಕಂಪನಿಗಳ ಜೊತೆ ಯಾವುದೇ ನೂತನ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ತಿಳಿಸಿತ್ತು.
ಬಾಂಗ್ಲಾದೇಶ
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹಿಂದಿನ ಸರ್ಕಾರ ಅದಾನಿ ವಿದ್ಯುತ್ ಕಂಪನಿಯ ಜೊತೆ ಕೈಗೊಂಡಿದ್ದ ಒಪ್ಪಂದಗಳನ್ನು ರದ್ದುಗೊಳಿಸಲು ಪರಿಶೀಲನಾ ಸಮಿತಿಯನ್ನು ರಚಿಸಿತ್ತು. ಪರಿಶೀಲನಾ ಸಂಸ್ಥೆ ನೀಡಿದ ಶಿಫಾರಸ್ಸಿನಂತೆ ಅದಾನಿ ಸಂಸ್ಥೆಯ ಜೊತೆ ಕೈಗೊಂಡಿರುವ ಒಪ್ಪಂದಗಳು ಕಳವಳ ಮೂಡಿಸಿವಂತಹದ್ದಾಗಿದ್ದು, ಹಾಲಿ ಒಪ್ಪಂದಗಳನ್ನು ಪರಿಶೀಲನೆಗೊಳಪಡಿಸಲು ತನಿಖೆ ಹಾಗೂ ಕಾನೂನು ಕ್ರಮ ಅಗತ್ಯವೆಂದು ತಿಳಿಸಿತ್ತು.
ಗಡಿ ಭದ್ರತಾ ನಿಯಮಗಳನ್ನು ಸಡಿಲಿಸಿದ್ದ ಕೇಂದ್ರ ?
ಗುಜರಾತ್‌ನ ಕಚ್‌ನಲ್ಲಿ ಅದಾನಿ ಸಮೂಹದ ಸೌರ ವಿದ್ಯುತ್ ಸ್ಥಾವರ ಮತ್ತು ನವೀಕರಿಸಬಹುದಾದ ಇಂಧನ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರವು ಭಾರತ-ಪಾಕಿಸ್ತಾನ ಗಡಿ ಭದ್ರತಾ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅದಾನಿ ಸಮೂಹ ಪಾಕಿಸ್ತಾನದ ಗಡಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಕಚ್‌ನ ಖಾವ್ಡಾ ಪ್ರದೇಶದಲ್ಲಿ ಸೌರ ವಿದ್ಯುತ್ ಸ್ಥಾವರ ಮತ್ತು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಿಸುತ್ತಿದೆ.
ಈ ಹಿಂದಿನ ಗಡಿ ಭದ್ರತಾ ನಿಯಮಗಳ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಅವಕಾಶ ಇರಲಿಲ್ಲ. ಆದರೆ, ಗುಜರಾತ್ ಸರ್ಕಾರ 2023ರ ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ಪತ್ರವೊಂದನ್ನು ಬರೆದು, ಗಡಿ ಸಮೀಪದ ಜಾಗದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಅನುಮತಿ ಕೋರಿತ್ತು. ಕೇಂದ್ರ ಸರ್ಕಾರ ಕೂಡ ಗೌಪ್ಯಸಭೆ ಕರೆದು ಯೋಜನೆಗಳಿಗೆ ಅವಕಾಶ ನೀಡಲು ಕೇಂದ್ರವು ನಿಯಮಗಳನ್ನು ಬದಲಾಯಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
