ಸುತ್ತಾಟ | ಸಾರಮತಿಯ ಹಾದಿಯಲ್ಲಿ ಜೀವನ ಪಾಠ!

Date:

Advertisements

ಪರವಶಗೊಳ್ಳುವ ಪ್ರಕೃತಿ, ಬೆರಗು ಮೂಡಿಸುವ ಪರ್ವತ, ಮತ್ತು ಮನಸ್ಸಿನಲ್ಲಿ ಉಳಿಯುವ ಅನುಭವ! ಸಾರಮತಿ ಹೆಸರು ಎಷ್ಟು ಅಪರೂಪವೋ, ಅನುಭವ ಕೂಡ ಅಷ್ಟೇ ನವೀನ! ನಾನು ಹಲವಾರು ಪರ್ವತಗಳ ಪಯಣ, ಚಾರಣ ಮಾಡಿದ್ದರೂ, ಈ ಪರ್ವತದ ಹೆಸರು, ಅದರ ವೈಶಿಷ್ಟ್ಯ, ಅಥವಾ ಅದರ ಗಂಭೀರ ಸೌಂದರ್ಯದ ಬಗ್ಗೆ ನಾನು ಅಂದಿನವರೆಗೆ ಕೇಳಿರಲಿಲ್ಲ. ನಾಗಾಲ್ಯಾಂಡ್‌ನಲ್ಲಿಯೇ ಇಂತಹ ಪರ್ವತವಿದೆ ಎಂಬ ಅರಿವು ನನಗೆ ಇರಲಿಲ್ಲ!

ದೇಶ ಸುತ್ತಬೇಕು, ಕೋಶ ಓದಬೇಕು” ಇವೆರಡೂ ಜೀವನದ ಅಚ್ಚುಮೆಚ್ಚಿನ ಪಾಠಶಾಲೆ ಎನ್ನಬಹುದು. ಈ ಅವಕಾಶ ಎಲ್ಲರಿಗೂ ಸಿಗುವುದು ಅಪರೂಪ. ದೇಶ ಸುತ್ತಲು ಹಣ, ಅವಕಾಶ ಬೇಕಾಗುತ್ತದೆ; ಕೋಶ ಓದಲು ಮಾತ್ರವಲ್ಲ, ಅವಲೋಕನಕ್ಕೂ ಸಮಯ ಮತ್ತು ಸವಲತ್ತಿನ ಅವಶ್ಯಕತೆ ಇದೆ. ಅನೇಕರಿಗೆ ಇವೆರಡೂ ಅಪೂರ್ಣ ಕನಸುಗಳಂತೆಯೂ ಕಾಣಬಹುದು. ಈ ಸಾಧ್ಯತೆಗಳು ಕೆಲವರಿಗೆ “ಪ್ರೀವಿಲೇಜ್” ಎಂಬುದಾಗಿ ಅನಿಸಬಹುದು, ಈ ಸ್ಥಿತಿ ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ, ಇಡೀ ಜಗತ್ತಿನ ವಾಸ್ತವ. ಇರುವವರ, ಇಲ್ಲದವರ ನಡುವೆ ಒಂದು ನಿರ್ವಾಣವಿಲ್ಲದ ಕಂದಕ, ಇದು ಪ್ರಪಂಚದ ಕಟು ವಾಸ್ತವ.

ಆದರೂ, ಈ ಅವಕಾಶ ಯಾರಿಗೆ ಸಿಕ್ಕಿದರೂ, ಅವರು ಅದನ್ನು ಮನಸಾರೆ ಸವಿಯಬೇಕು. ಕೆಲವೊಮ್ಮೆ ದೇಶ ಸುತ್ತಿ ಗಳಿಸಿದ ಅನುಭವ ಪುಸ್ತಕಗಳ ಪುಟಗಳು ತಿಳಿಸಿ ಕೊಡುತ್ತವೆ; ಹಲವೊಮ್ಮೆ ಕೋಶ ಓದಿದರೆ ನಮ್ಮ ಸುತ್ತಮುತ್ತಲಿನ ಒಳಗಣ, ಹೊರಗಣವನ್ನು ಅರಿಯಬಹುದು. ಇದರಲ್ಲಿ ಒಂದು ಹೆಚ್ಚು ಒಂದು ಕಡಿಮೆ ಎಂಬುದಿಲ್ಲ. ಅದು ವ್ಯಕ್ತಿ ನಿಷ್ಠವೇ ಹೊರತು ವಸ್ತು ನಿಷ್ಠ ಅಲ್ಲ. ಹಾಗಾಗಿ ಇಲ್ಲಿನ ಬರಹ ವೈಯಕ್ತಿಕ ಅನುಭವ, ಅಭಿಪ್ರಾಯ. ಈ ಬರಹ, ಈ ನಿಟ್ಟಿನಲ್ಲಿ ನನ್ನ ಚಿಕ್ಕ ಪ್ರಯತ್ನ.

Advertisements

‘ನಾಗಾಲ್ಯಾಂಡ್’ ಅದೊಂದು ಪುಟ್ಟ ರಾಜ್ಯ, ಬಹು ನಿರ್ಲಕ್ಷಿತ ರಾಜ್ಯವೆಂದೇ ಹೇಳಬಹುದು. ಈ ನಿರ್ಲಕ್ಷ್ಯ ಇಂದಿನದ್ದಲ್ಲ, ಹಿಂದಿನಿಂದಲೂ ಬಂದಿದ್ದು. ಆದರೂ ಈ ರಾಜ್ಯ ತನ್ನದೇ ಸೊಗಡನ್ನು, ಸೌಂದರ್ಯವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಈ ಪುಟ್ಟ ರಾಜ್ಯದಲ್ಲಿನ ಸಂಸ್ಕೃತಿ ಎಷ್ಟು ವರ್ಣಮಯವೋ ಪ್ರಕೃತಿಯು ಕೂಡಾ ಅಷ್ಟೇ ವರ್ಣಮಯ. ಹಾಗಿದ್ದೂ ಕೂಡ ತುಂಬಾ ಪ್ರವಾಸಿಗರನ್ನು, vloggers /influencer ಗಳು ತಲುಪದ ನಾಡು ಕೂಡ.

ನಾನಿವತ್ತು ಹೇಳಲು ಹೊರಟದ್ದು: ನಾಗಾಲ್ಯಾಂಡ್ ರಾಜ್ಯದಲ್ಲಿರುವ ಸಾರಾಮತಿಯ ಕಥೆ. ಈ ಜಾಗ ತುಂಬಾ ಕಡಿಮೆ ಪ್ರವಾಸಿಗರನ್ನು ಕಾಣಲು ಕಾರಣವೂ ಹಲವಾರು ಇರಬಹುದು. ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು, ಮಾಹಿತಿಯ ಕೊರತೆ, ಟೂರಿಸಂ ಬಗ್ಗೆ ನಾಗಾಲ್ಯಾಂಡ್ ರಾಜ್ಯ ಅಷ್ಟೊಂದು ಪ್ರಾಮುಖ್ಯತೆ ನೀಡದೇ ಇರುವುದು, ಹಾಗೂ ನಾಗಾಲ್ಯಾಂಡ್ ಬಗ್ಗೆ ಇನ್ನೂ ಬಹುತೇಕರ ಮನದಲ್ಲಿರುವ ಊಹಾಪೋಹಗಳು. ನಾಗಾಲ್ಯಾಂಡಿನಳ್ಳಿ ಇನ್ನೂ ಕೂಡ ನರಭಕ್ಷಕತೆ/ನರಹಂತಕ (Cannibalism/Headhunters) ಇದೆ ಅಂತ ಅಪಪ್ರಚಾರ. ಭಾರತ ಸರ್ಕಾರವು 1960ರಲ್ಲಿಯೇ ನಾಗಾಲ್ಯಾಂಡಿನಲ್ಲಿ ಪ್ರಚಲಿತದಲ್ಲಿದ್ದ Headhunting ಅನ್ನು ನಿಷೇಧಿಸಿತ್ತು. ಆದರೂ ಕೂಡ ನಾಗಾಲ್ಯಾಂಡ್‌ನ ಕೆಲವು ಭಾಗಗಳಲ್ಲಿ ಈ ಸಂಪ್ರದಾಯವು ಇನ್ನೂ ಕೆಲವು ವರ್ಷಗಳವರೆಗೆ ಮುಂದುವರೆಯಿತು. ಆದರೆ ಇತ್ತೀಚಿನ ಹಲವು ದಶಕಗಳಿಂದ ಈ ಸಂಪ್ರದಾಯ ಸಂಪೂರ್ಣವಾಗಿ ಕೊನೆಗೊಂಡಿದೆ.

ಸಾರಮತಿಯ ಕಥೆ

ಪರವಶಗೊಳ್ಳುವ ಪ್ರಕೃತಿ, ಬೆರಗು ಮೂಡಿಸುವ ಪರ್ವತ, ಮತ್ತು ಮನಸ್ಸಿನಲ್ಲಿ ಉಳಿಯುವ ಅನುಭವ! ಸಾರಮತಿ ಹೆಸರು ಎಷ್ಟು ಅಪರೂಪವೋ, ಅನುಭವ ಕೂಡ ಅಷ್ಟೇ ನವೀನ! ನಾನು ಹಲವಾರು ಪರ್ವತಗಳ ಪಯಣ, ಚಾರಣ ಮಾಡಿದ್ದರೂ, ಈ ಪರ್ವತದ ಹೆಸರು, ಅದರ ವೈಶಿಷ್ಟ್ಯ, ಅಥವಾ ಅದರ ಗಂಭೀರ ಸೌಂದರ್ಯದ ಬಗ್ಗೆ ನಾನು ಅಂದಿನವರೆಗೆ ಕೇಳಿರಲಿಲ್ಲ. ನಾಗಾಲ್ಯಾಂಡ್‌ನಲ್ಲಿಯೇ ಇಂತಹ ಪರ್ವತವಿದೆ ಎಂಬ ಅರಿವು ನನಗೇ ಇರಲಿಲ್ಲ!

saramathi 1

ಈ ಪರ್ವತ ನನ್ನ ಮನಸ್ಸಿಗೆ ಬಂದಿದ್ದೇ ನಾಗಾಲ್ಯಾಂಡಿನ ಹಾರ್ನ್‌ಬಿಲ್ ಉತ್ಸವಕ್ಕೆ ಹೋಗಲು ಟ್ರಾವೆಲ್ ಪ್ಲಾನ್ ಮಾಡುತ್ತಿದ್ದಾಗ! ವಿಶ್ವ ಪ್ರಸಿದ್ಧ ಹಾರ್ನ್ ಬಿಲ್ ಬಗ್ಗೆ ಮಾಹಿತಿ ಹುಡುಕಾಡುತ್ತಿದ್ದಾಗ ಆಕಸ್ಮಿಕವಾಗಿ ಸಾರಮತಿ ಪರ್ವತ ಎಂಬ ಹೆಸರು ಬಂತು. ನೋಡಿದ ಕ್ಷಣ, ಓದಿದ ಕ್ಷಣ, ತಕ್ಷಣವೇ ನನ್ನ ಒಳಗೇನೋ ಕಿವಿಯಲ್ಲಿ ಗುಂಗು ಸೃಷ್ಟಿಯಾದಂತೆ! ಇದನ್ನು ಹೇಗೆ ತಲುಪಬಹುದು, ಇಲ್ಲಿಗೆ ಹೋಗಲು ಏನು ಮಾಡಬೇಕು, ಯಾರನ್ನು ಕೇಳುವುದು, ಎಲ್ಲಿ ಮಾಹಿತಿ ಸಿಗಬಹುದು, ಹೀಗೆ ನೂರಾರು ಪ್ರಶ್ನೆಗಳು.

ನಾನು ಎಲ್ಲೆಲ್ಲಿಂದಲೋ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆ. ಆದರೆ, ಈ ಪರ್ವತಕ್ಕೆ ಹೋಗುವ ಸರಿಯಾದ ಮಾರ್ಗ, ತಯಾರಿಗಳು, ಅಗತ್ಯ ಪರವಾನಗಿಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿಲ್ಲ. ಹಲವರನ್ನು ಕೇಳಿದರೂ ಸ್ಪಷ್ಟ ಚಿತ್ರಣ ಸಿಗಲಿಲ್ಲ. ಕೊನೆಗೆ, ಇನ್‌ಸ್ಟಾಗ್ರಾಂನಲ್ಲಿ ನಾಗಾಲ್ಯಾಂಡಿನ ಒಬ್ಬ ಟ್ರೆಕ್ಕೆರ್ ಅನ್ನು ಸಂಪರ್ಕಿಸಿ, ಈ ಪರ್ವತ ಚಾರಣದ ಬಗ್ಗೆ ಸ್ವಲ್ಪ ಸ್ಪಷ್ಟ ಮಾಹಿತಿ, ಹೋಗುವ ದಾರಿ, ಎಲ್ಲಿಂದ ಚಾರಣ ಶುರು ಮಾಡಬೇಕು ಹೀಗೆ ಹಲವಾರು ಮಾಹಿತಿ ಪಡೆದುಕೊಂಡೆ.

ಸಾರಮತಿ—ಮೂಡಣ ಏಷ್ಯಾದ ಹಿರಿಮೆಯ ಶಿಖರ

ಭಾರತದ ನಾಗಾಲ್ಯಾಂಡ್‌ ಮತ್ತು ಬರ್ಮಾದ (ಇಂದಿನ ಮ್ಯಾನ್ಮಾರ್) ಗಡಿಯಲ್ಲಿನ ಶಿಖರಗಳ ಮೇಲೆ ಇರುವ ಒಂದು ಪರ್ವತ. ನಾಗಾಲ್ಯಾಂಡ್‌ನ ಕಿಫಿರೆ ಜಿಲ್ಲೆಯ ಥಾನಮಿರ್ ಗ್ರಾಮದ ಬಳಿಯಿಂದ ತಲುಪಬಹುದಾದ ಪರ್ವತ ಇದು. ಇದರ ಎತ್ತರ : 3,826 ಮೀಟರ್ (12,552 ಅಡಿ) ಮತ್ತು ಇದರ ಪ್ರಾಮುಖ್ಯತೆ: 2,885 ಮೀಟರ್ (9,465 ಅಡಿ). ಭಾರತ ಮತ್ತು ಮ್ಯಾನ್ಮಾರ್ ನಡುವೆ ನೈಸರ್ಗಿಕ ಬೌಂಡರಿ ಆಗಿ ಇರುವ ಈ ಶಿಖರ ಆಗ್ನೇಯ ಏಷ್ಯಾದ ಅತಿ-ಪ್ರಮುಖ ಶಿಖರಗಳಲ್ಲಿ ಒಂದಾಗಿದೆ.

ಒಂದಿಷ್ಟು ಕಿವಿಮಾತು : ನಿಮಗೆ ಚಾರಣ ಮಾಡಿದ ಅನುಭವ ಇಲ್ಲದೆ ಹೋದರೆ ಇದನ್ನು ಪ್ರಯತ್ನಿಸಬೇಡಿ. ಇದಕ್ಕೆ ಒಂದಿಷ್ಟು ತರಬೇತಿ, ಫಿಟ್ನೆಸ್, ಪೂರ್ವ ತಯಾರಿ ಬೇಕೇಬೇಕು. ನಾಗಾಲ್ಯಾಂಡ್ ತನ್ನ ಅನನ್ಯ ಸೌಂದರ್ಯ, ವೈವಿಧ್ಯಮಯ ಪರಿಸರ, ಬುಡಕಟ್ಟು ಸಂಸ್ಕೃತಿಗಳಿಂದ ತುಂಬಿದ ಒಂದು ರಾಜ್ಯ. ಆದರೆ, ಇಲ್ಲಿನ ಪರ್ವತ, ಚಾರಣ ಹಾದಿಗಳು ಇನ್ನೂ ಸಹ ಬಹಳ ಜನಪ್ರಿಯವಾಗಿಲ್ಲ. ಅಲ್ಲದೆ, ನಾಗಾಲ್ಯಾಂಡ್ ಆಡಳಿತ ಮಂಡಳಿಯ ನಿರ್ಬಂಧಗಳ ಕಾರಣ ಈ ಪರ್ವತ ಹತ್ತಲು ಪ್ರತ್ಯೇಕ ಅನುಮತಿ ಅಗತ್ಯ. ತಾನಾಮೀರ್ ಪಂಚಾಯತ್ ಅವರ ಅನುಮತಿ ಮತ್ತು ಸ್ಥಳೀಯ ಗೈಡುಗಳ ಸಹಾಯವಿಲ್ಲದೆ ಈ ಪರ್ವತ ಏರುವ ಅವಕಾಶವಿಲ್ಲ. ಜೊತೆಗೆ ಈ ತಾನಾಮೀರ್ ಪಂಚಾಯತಿಯಿಂದ ಇಬ್ಬರು ಗೈಡ್ ಮತ್ತೊಬ್ಬರನ್ನು ಜೊತೆಗೆ ಕರೆದೊಯ್ಯಲೇಬೇಕು (ಇದು ಈ ಪರ್ವತ ಚಾರಣದ ನಿಯಾಮಾವಳಿ).

ಇದು ಎರಡು ದಿನದ ಚಾರಣ, ಆದುದರಿಂದ ಎರಡು ದಿನಕ್ಕೆ ಬೇಕಾದ ತಯಾರಿ ಮಾಡಿಕೊಂಡೆ ಹೊರಡಬೇಕು. ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ ಸುಮಾರು 400-450 ಕಿಮೀ ದೂರ ಈ ಜಾಗ. ಈ ಅಂತರ ನೋಡಿಯೇ ಹೋಗಬೇಕೋ ಬೇಡವೋ ಎನ್ನುವ ಪ್ರಶ್ನೆ ಕಾಡುವುದು ಸಹಜ. ಆ ದಾರಿಯೋ, ದಾರಿಯೇ ಇಲ್ಲವಲ್ಲಿ. ಎಷ್ಟು ದಶಕಗಳಾಗಿತ್ತೋ ಏನೋ ಆ ರೋಡುಗಳು ಡಾಂಬರೀಕರಣವನ್ನು ಕಂಡು. ಹದಗೆಟ್ಟ ರಸ್ತೆಗಳ ಸುತ್ತ ಮುತ್ತ ದಟ್ಟ ಕಾನನ, ಹಚ್ಚ ಹಸುರಿನ ಬೆಟ್ಟ ಗುಡ್ಡಗಳು! ದಶಕಗಳಾದರೂ ಈ ದಾರಿಗಳು ಸರಿಯಾಗಿ ಡಾಂಬರೀಕರಣಗೊಂಡಿರುವುದಿಲ್ಲ. ಆದರೂ ಏನೋ ಹುಚ್ಚು ಹಂಬಲ ಕೂಡ. ಚಾರಣದ ಹುಚ್ಚು ಆಸೆಯಲ್ಲಿ 400-450 ಕಿಲೋಮೀಟರು ಪ್ರಯಾಣಿಸಿದ ಮೇಲೆ ತಾನಾಮೀರ್ ಹಳ್ಳಿ ತಲುಪಿದೆವು. ಆ ರಾತ್ರಿ ನಮ್ಮ ಗೂಡು ಅದೇ ತಾನಾಮೀರ್ ಹಳ್ಳಿ. ಅಲ್ಲಿ ಪ್ರತಿಯೊಂದು ಹಳ್ಳಿಗೂ ಒಬ್ಬ ಮುಖ್ಯಸ್ಥ. ಅವರ ಮನೆಯಲ್ಲೇ ನಮ್ಮ ತಾತ್ಕಾಲಿಕ ಆಶ್ರಯ. ಈ ಹಳ್ಳಿ ನಾಗ ಜನಾಂಗದ ವಿಶಿಷ್ಟ ಗ್ರಾಮ. ಇಲ್ಲಿಯ ಜನರ ಜೀವನ ಕ್ರಮ, ಸಂಸ್ಕೃತಿಯ ಸರಳತೆ ಹೊರಗಿನ ಪ್ರಪಂಚವನ್ನು ವಿಸ್ಮಯಗೊಳಿಸಿದರೆ ಆಶ್ಚರ್ಯವೇನಿಲ್ಲ. ಅವತ್ತು ಅಲ್ಲೇ ಊಟ ಕೂಡ (ಸ್ಥಳೀಯ ನಾಗ ಜನರ ಊಟ). ಮರುದಿನ ಅಲ್ಲೇ ಬೆಳಗ್ಗಿನ ಉಪಹಾರ. ನಮ್ಮನ್ನು ಚಾರಣಕ್ಕೆ ಬೀಳ್ಕೊಡಲು, ಆ ಗ್ರಾಮದ ಮುಖ್ಯಸ್ಥರು, ಅಲ್ಲಿನ ನೆರೆಹೊರೆಯವರು ಎಲ್ಲರೂ ಬಂದಿದ್ದರು.

saramathi 2

ಬೆಳಗಿನ ಜಾವ, ನಮ್ಮ ಬ್ಯಾಕ್‌ಪ್ಯಾಕ್ ಹೊತ್ತು, ಮೂರು ಕೋವಿ ಹಿಡಿದುಕೊಂಡ ನಾಗ ಗೈಡುಗಳು ಜೊತೆಗೆ ಚಾರಣಕ್ಕೆ ಶುರು ಮಾಡಿದೆವು. ನಾಗ ಜನರು ಬೆಟ್ಟ ಗುಡ್ಡಗಳಲ್ಲಿ ಓಡಾಡುವಾಗ ಕೋವಿ ಹಿಡಿದುಕೊಂಡು ಓಡಾಡುವುದು ಸಾಮಾನ್ಯ ದೃಶ್ಯ. ಇದಕ್ಕೆ ಕಾರಣವೂ ಇದೆ—ಇಲ್ಲಿ ಕಾಡುಪ್ರಾಣಿಗಳ ಭೀತಿ ಮಾತ್ರವಲ್ಲ, ಈ ಶ್ರೇಣಿಯು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಇರುವುದರಿಂದ ಸುರಕ್ಷತಾ ಕಾಳಜಿಯೂ ಇದೆ. ಅರಣ್ಯದೊಳಗೆ ಹಾದುಹೋಗುತ್ತಿದ್ದಂತೆ, ಅಲ್ಲಿ ಅರಳಿದ ಬೇಲಿಯ ಹುಲ್ಲು, ಸೊಂಪಾದ ಹೂವಿನ ಮರಗಳು, ನಿಗೂಢ ಹಸಿರು ಕಾನನ, ಹಿಮ್ಮಡಿಯ ನೀರಿನ ಹಳ್ಳಗಳು—ಎಲ್ಲವೂ ಎನೋ ಬೇರೆ ಜಗತ್ತಿನಂತೆ! ನಾಗಾಲ್ಯಾಂಡಿನ ಪ್ರಕೃತಿ ದಕ್ಷಿಣ ಭಾರತದ ಪರ್ವತ ಶ್ರೇಣಿಗಳಿಗೆ ಸಂಪೂರ್ಣ ಭಿನ್ನ! ಇಂತಹ ಮರಗಿಡಗಳ, ಪ್ರಪಾತಗಳ ಹಾದಿ ಕಣ್ಣಿಗೆ ಮುದ ನೀಡುವ ದೃಶ್ಯ .

ನಾಗಾಲ್ಯಾಂಡಿನ ಪ್ರಕೃತಿ ಬಹು ವರ್ಣಮಯ, ಬಹುಶ, ನಮ್ಮ ದಕ್ಷಿಣದ ಪರ್ವತ ಶ್ರೇಣಿಗಳಲ್ಲಿ ಎಲ್ಲೂ ಕಾಣ ಸಿಗದ ವಿಭಿನ್ನ ಮರಗಿಡಗಳು, ವನ ರಾಶಿ, ಚಿಗುರು ಬಳ್ಳಿಗಳು. ಕಣ್ಣು ಹಾಯಿಸುವಷ್ಟು ಜಾಗಗಳಲ್ಲಿ ಎಲ್ಲೆಲ್ಲೂ ಬೆಟ್ಟ ಗುಡ್ಡ, ಪೊದೆ, ಹಳ್ಳ, ಜರಿ, ಪಕ್ಷಿಗಳ ಇಂಚರ. ನಾನು ಎಣಿಸಿಯೇ ಇರದ ಸೊಬಗಿನ ನಾಡದು. ನಾಗಾಲ್ಯಾಂಡಿನ ಬಗ್ಗೆ ಎಷ್ಟೇ ಓದಿದ್ದರೂ, ಇಂಟರ್ನೆಟ್ನಲ್ಲಿ ರಿಸರ್ಚ್ ಮಾಡಿದ್ದರೂ ಕೂಡ, ಇಷ್ಟು ವಿಭಿನ್ನ, ಚಿತ್ರ ವಿಚಿತ್ರ, ವರ್ಣ ರಂಜಿತ , ಅಪೂರ್ವ ಪ್ರಕೃತಿಯನ್ನು ಪ್ರತ್ಯಕ್ಷ ನೋಡುವುದೇ ಆನಂದ. ನಮ್ಮ ಕಣ್ಣ ಮುಂದಿದ್ದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಅಲ್ಲಲ್ಲಿ ಸಿಕ್ಕಿದ ಜರಿಯಲ್ಲಿನ ನೀರನ್ನು ಸೇವಿಸುತ್ತಾ, ನಮ್ಮೊಡನೆ ಬಂದಿರುವ ಗೈಡುಗಳ ಬಳಿ ಬರಿಯ ಕಣ್ಣು, ಬಾಯಿ, ಕೈ ಸನ್ನೆಯಲ್ಲೇ ಸಂವಾದ ಮಾಡುತ್ತಾ,(ಅವರಿಗೆ ಬರುತ್ತಿದ್ದದ್ದು nagamese/ನಾಗ ಭಾಷೆ ಮಾತ್ರ, ಅದು ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಆದರೆ ಹೆಚ್ಚಿನ ಪಟ್ಟಣವಾಸಿಗಳು ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ. ಒಂದಿಷ್ಟು ಜನರು ಹಿಂದಿ ಕೂಡ ಮಾತನಾಡುತ್ತಾರೆ) ನಡಿಗೆ ಸಾಗಿದ್ದೇ ತಿಳಿಯಲಿಲ್ಲ . ಅವತ್ತಿನ ದಿನ ಕಳೆದ ಅರಿವಾದದ್ದು ಬೆಟ್ಟದಂಚಿನಲ್ಲಿ ಸೂರ್ಯ ಕೆಂಪಾಗುತ್ತ ಬಂದಾಗಲೇ. ಅವರಿಗೆ ಬರುತ್ತಿದ್ದದ್ದು ನಾಗ ಭಾಷೆ ಮಾತ್ರ, ಅದು ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಆದರೆ ಹೆಚ್ಚಿನ ಜನರು ಪಟ್ಟಣವಾಸಿಗಳು, ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ. ಒಂದಿಷ್ಟು ಜನರು ಹಿಂದಿ ಕೂಡ ಮಾತನಾಡುತ್ತಾರೆ.

ನಾಗಾಲ್ಯಾಂಡಿನಲ್ಲಿ ಕತ್ತಲಾಗುವುದು ಬೇಗ. ಸಂಜೆ 4 ರ ವೇಳೆಗೆ ಸೂರ್ಯಾಸ್ತ. ಅದಕ್ಕೆ ಭಾರತದ ಈಶಾನ್ಯ ರಾಜ್ಯಗಳು ತಮಗೆ ಬೇರೆಯೇ ಟೈಮ್ -ಷೆಡ್ಯೂಲ್ ಬೇಕೆಂದು ಹಲವಾರು ಬಾರಿ ಕೇಳಿಕೊಂಡಿವೆ. ಅಮೆರಿಕದಂತಹ ದೇಶದಲ್ಲಿಯೂ ಕೂಡ 3 time-ಷೆಡ್ಯೂಲ್ ಗಳಿವೆ. ಸೂರ್ಯಾಸ್ತ ಬೇಗ ಆಗುವ Utah, ಅರಿಜೋನಾ ರಾಜ್ಯಗಳಲ್ಲಿ ಮೌಂಟೈನ್ ಟೈಮ್ ಅಂತ ಪ್ರಸ್ತುತದಲ್ಲಿದೆ.

ಆ ರಾತ್ರಿ ಅಲ್ಲೇ ಬೆಟ್ಟದ ಮದ್ಯೆ ನಮ್ಮ ಉಳಿಯುವಿಕೆ. ಅಲ್ಲೊಂದು ಹುಲ್ಲಿನ ಗುಡಿಸಲಿನ ತರಹದ ವ್ಯವಸ್ಥೆ (ಮರದ ತರಗೆಲೆಯಿಂದ ಮಾಡಿದ್ದು), ಅದರಲ್ಲಿಯೇ ನಮ್ಮ sleeping ಬ್ಯಾಗನ್ನು ಹಾಸಿಕೊಂಡು ವಿರಾಮ. ನಮ್ಮ ಗೈಡುಗಳು ಕೂಡ ನಮ್ಮ ಜೊತೆಯೇ ಅದೇ ತೀರಾ ಕ್ಷೀಣಿಸಿ ಹೋಗಿದ್ದ ತರಗೆಲೆಯ ಗುಡಿಸಲಲ್ಲಿ ಮದ್ಯೆ ಒಂದಿಷ್ಟು ಬೆಂಕಿ ಹಾಕಿಕೊಂಡು ಅಲ್ಲಿಯ ಕೊರೆಯುವ ಚಳಿಯಿಂದ ತಮ್ಮನ್ನು, ನಮ್ಮನ್ನು ಕಾಪಾಡಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟು ಅಲ್ಲ.

ಶಿಖರ ತಲುಪಿದ ಕ್ಷಣ—ಮರೆಯಲಾಗದ ನೆನಪು!

ಮರುದಿನ ಏಳುತ್ತಲೇ, ಹಾಕಿದ್ದ ಬೆಂಕಿಯಲ್ಲಿ ಒಂದಿಷ್ಟು ಕಾಫಿ, ಬಿಸಿನೀರು ಮಾಡಿ, ಅದನ್ನು ಕುಡಿದು, ಕಟ್ಟಿ ತಂದಿದ್ದ ಆಹಾರ ಪದಾರ್ಥವನ್ನು ಸೇವಿಸಿ, ನಮ್ಮ ಆಹಾರದ ಡಬ್ಬಗಳನ್ನು ಕಟ್ಟಿಕೊಂಡು, ಅಲ್ಲಿಂದ ಮತ್ತೆ ಮುಂದಿನ ಪ್ರಯಾಣ. ಅವತ್ತು ಬೆಳಗ್ಗಿನ ಜಾವದಲ್ಲಿಯೇ ಚಾರಣ ಶುರು ಮಾಡಿಬಿಡಬೇಕಿತ್ತು, ನಡೆದಷ್ಟೂ ದಾರಿ, ಈ ದಾರಿ ಮುಗಿಯುವುದೇ ಇಲ್ಲವೇನೋ ಅನ್ನುವಷ್ಟು ದೂರ, ಎಲ್ಲಿ ನೋಡಿದರೂ ನಮ್ಮ ಪರ್ವತದ ತಪ್ಪಲು ಕಾಣದು. ಹಸಿವು ಬೇರೆ. ಇದ್ದ ಬದ್ದ ಎಲ್ಲವನ್ನೂ ತಿಂದು, ನಮ್ಮಲ್ಲಿ ಉಳಿದದ್ದು ಒಂದಿಷ್ಟು ಡ್ರೈ ಫ್ರುಟ್ಸ್. ಅದನ್ನೇ ಎಲ್ಲರೂ ಹಂಚಿಕೊಂಡು ತಿಂದದ್ದಾಯಿತು.

WhatsApp Image 2025 02 14 at 4.58.14 PM

ಅಂತೂ ಇಂತೂ ಮಧ್ಯಾಹ್ನ 12 ಗಂಟೆಯಷ್ಟು ಹೊತ್ತಿಗೆ ನಮ್ಮ ಸಮ್ಮಿಟ್ (ಪರ್ವತದ ತಪ್ಪಲು) ಬಂದೆ ಬಿಟ್ಟಿತು. ಎಲ್ಲೆಲ್ಲೂ ರಭಸದಲ್ಲಿ ಬೀಸುವ ಗಾಳಿ ಒಂದೆಡೆ ಆದರೆ, ಇನ್ನೊಂದೆಡೆ ಅಬ್ಬರದಲ್ಲಿ ಚಲಿಸುವ ಮೋಡಗಳು. ಮಧ್ಯೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದು, ಒಬ್ಬರ ಮುಖ ಇನ್ನೊಬ್ಬರಿಗೆ ಸ್ಪಷ್ಟವಾಗಿ ಕಾಣಿಸದು, ಮಟ ಮಟ ಮಧ್ಯಾಹ್ನದಲ್ಲೂ ಕೊರೆಯುವ ಚಳಿ. ಆ ಚಲಿಸುವ ಮೋಡ ಒಂದಿಷ್ಟು ಎಡೆ ಮಾಡಿ ಕೊಟ್ಟಾಗ ಕಂಡಂತಹ ವಿಹಂಗಮ ದೃಶ್ಯ. ಇಡೀ ಗಡಿ ಭಾಗ ಬರಿಯ ಹಸಿರಿನ ಜೋಕಾಲೆ ಮಾಲೆಯಂತಿತ್ತು. ಇನ್ನೇನು, ಇಲ್ಲಿಂದ ಒಂದಿಷ್ಟು ತೇಲಾಡಿದರೆ ಮ್ಯಾನ್ಮಾರ್ ತೆಕ್ಕೆಗೆ ಹೋಗಿ ಬೀಳಬಹುದು ಅನ್ನುವಷ್ಟು ಹತ್ತಿರದಲ್ಲಿ ಮ್ಯಾನ್ಮಾರ್ ಬಾರ್ಡರ್.

ನಾವೇ ಅಲ್ಲವೇ ಈ ಗಡಿ, ಬಾರ್ಡರ್ ಎಲ್ಲವನ್ನು ಮಾಡಿಕೊಂಡಿದ್ದು. ಅದೇ ಪ್ರಕೃತಿಗೆ ಅದರ ಗೋಚರವೇ ಇಲ್ಲದಂತೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಅಬ್ಬರದ ಮೋಡಗಳು ಪೈಪೋಟಿಯಲ್ಲಿ ಚಲಿಸುತ್ತಿದ್ದವು. ಆ ಕೊರೆಯುವ ಚಳಿಯೂ ಮರೆತು ಮೈಮನ ಇದನ್ನು ನೋಡುವುದರಲ್ಲೇ ತಲ್ಲೀನ. ಎರಡು ದಿನದ ಆ ಶ್ರಮ ಸಾರ್ಥಕ ಎಂದೆನಿಸಿತ್ತು.

ಆ ಶ್ರಮ, ಆ ನಡೆದಾಟ, ಆ ಅನುಭವ… ಎಲ್ಲಾ ಅರ್ಥಪೂರ್ಣ ಎನಿಸಿತು!

ನಾಗಾಲ್ಯಾಂಡ್ ಇನ್ನೂ ಕೂಡ ಹೊರಪ್ರಪಂಚಕ್ಕೆ ಅಷ್ಟೇನೂ ಪರಿಚಿತವಲ್ಲದ ರಾಜ್ಯ. ಆದುದರಿಂದ ಈ ಪರ್ವತ, ಈ ಹಳ್ಳಿ ಇನ್ನೂ ಕೂಡ ತನ್ನದೇ ಮುಗ್ದತೆಯನ್ನು ಉಳಿಸಿಕೊಂಡಿದೆ. ನಾಗಾಲ್ಯಾಂಡ್ ರಾಜ್ಯ ಬಹಳ ಸ್ವಚ್ಛ ರಾಜ್ಯವೂ ಕೂಡ ಹೌದು. ಆದರಿಂದಲೇ ಈ ತಾನಾಮೀರ್ ಹಳ್ಳಿಯಲ್ಲಿ ಆಗಲಿ, ಅಥವಾ ಸಾರಮತಿ ಪರ್ವತ ಶ್ರೇಣಿಯಲ್ಲಿ ಆಗಲಿ ಕಸ, ಮನುಷ್ಯರು ಬಿಟ್ಟು ಹೋಗಿರುವ ಕುರುಹುಗಳು ಇಲ್ಲವೇ ಇಲ್ಲ ಎನ್ನಬಹುದು. ಭಾರತದ ಎಲ್ಲ ಪ್ರವಾಸಿ ತಾಣ, ಚಾರಣ ದಾರಿಯಲ್ಲಿ ಪ್ಲಾಸ್ಟಿಕ್ ಲಕೋಟೆಗಳು, ಪೇಪರ್ ಪ್ಲೇಟ್ಗಳು, ಪ್ಲಾಸ್ಟಿಕ್ ಬಾಟಲಿಗಳು, lays /kurkure ಪ್ಯಾಕೆಟ್ಗಳು, ಈರುಳ್ಳಿ ಸಿಪ್ಪೆಗಳನ್ನು ನೋಡಿ ನೋಡಿ ಬೇಸತ್ತಿದ್ದ ಮನಸಿಗೆ ಇಲ್ಲಿನ ಸ್ವಚ್ಛ ಪರ್ವತ, ಸ್ವಚ್ಛ ಗಾಳಿ, ಸ್ವಚ್ಛ ಹಳ್ಳಿಯನ್ನು ನೋಡುವುದೇ luxury ಎಂದೆನಿಸಿತ್ತು.

WhatsApp Image 2025 02 14 at 5.09.18 PM

ಪ್ರತೀ ಚಾರಣ ಮಾಡುವಾಗಲೂ ಇದೆ ಪ್ರಶ್ನೆ. “ಆ ನಿದ್ದೆ ಕೆಟ್ಟು, ಊಟ ಬಿಟ್ಟು, ಶ್ರಮ ಪಟ್ಟು ಇಲ್ಲೆಲ್ಲಾ ಹೋಗಬೇಕೆ? ಮನೆಯಲ್ಲಿ ಆರಾಮವಾಗಿ ಹೊದ್ದು ಮಲಗಬಾರದೇ?” ಆದರೆ ಇಂತಹ ಅನುಭವ ಅನುಭವಿಸಿದವರಿಗೆ ಮಾತ್ರ ಅದರ ಸತ್ವ, ಅದರ ಸಂತೋಷ, ಅದರ ಉಲ್ಲಾಸ ಗೊತ್ತಿದೆ. ಅದನ್ನು ಹೇಳಲು ಅಸಾಧ್ಯ. ನಾನು ಈ ಚಾರಣದೊಂದಿಗೆ ಕೇವಲ ಒಂದು ಪರ್ವತವನ್ನು ಮಾತ್ರ ಏರಲಿಲ್ಲ… ಬದಲಿಗೆ ಪ್ರಕೃತಿಯ ಹೊಸ ಪಾಠವನ್ನೂ ಕಲಿತು ಬಂದುಬಿಟ್ಟೆ!

ದೇಹ ದಣಿದಿದ್ದರೂ ಮನಸು ಕುಣಿದಾಡುತಿತ್ತು. ಇನ್ನಷ್ಟು, ಮತ್ತಷ್ಟು ಇಲ್ಲೇ ಇರಬೇಕು ಎಂಬ ಹಂಬಲ. ಆದರೆ ಗೈಡುಗಳು ಬಿಡಬೇಕಲ್ಲ? ಹೊತ್ತು ಕಳೆದರೆ ದಾರಿ ಕಾಣುವುದಿಲ್ಲ, ಆಮೇಲೆ ಕೆಳಕ್ಕೆ ಇಳಿಯುವುದು ಕಷ್ಟ, ಆದರಿಂದ ಈಗಲೇ ಹೊರಡಬೇಕು ಎಂದು ಕೈ ಬಾಯಿ ಸನ್ನೆ ಆಯಿತು. ಅವರು ಅಷ್ಟು ಅಂದಿದ್ದೆ ತಡ, ಒಂದಿಷ್ಟು ಹನಿಗಳು ಕೂಡ ಬೀಳಲು ಆರಂಭಿಸಿತು. ಇನ್ನು ಮಳೆಯಲ್ಲಿ ನೆನೆಯುವುದು ಬೇಡವೆನ್ನುತ್ತ, ಮನಕ್ಕೆ ತಣಿಯುವಷ್ಟು ಫೋಟೋ ತೆಗೆದುಕೊಂಡು, ನಮ್ಮ ಇಳಿವು ಆರಂಭವಾಯಿತು. ಮತ್ತದೇ ಬೆಟ್ಟ, ದಿಣ್ಣೆ, ಜರಿ, ಕಾಲು ದಾರಿ, ದಟ್ಟ ಅರಣ್ಯ ದಾಟುತ್ತ ನಡೆದಂತೆ, ಸೂರ್ಯ ಮರೆಯಾದನು.

ಸರಿ ಸುಮಾರು 15 ಕಿಲೋಮೀಟರ್ ಕತ್ತಲಿನಲ್ಲಿಯೇ ನಮ್ಮ ಹೆಡ್ ಲ್ಯಾಂಪ್ ಮತ್ತು ಗೈಡುಗಳ ಬಳಿ ಇದ್ದ ದೊಡ್ಡ ಟಾರ್ಚ್ ಜೊತೆಯೇ ನಡೆಯಬೇಕಾಗಿ ಬಂತು. 15 ಕಿಲೋಮೀಟರು ಕಳೆದ ಮೇಲೆ ಎಲ್ಲೋ ಕಣಿವೆಯಲ್ಲಿ ಒಂದಿಷ್ಟು ಬೆಳಕು ಕಾಣಿಸಲು ಆರಂಭಿಸಿತು. ಅದು ನಾವು ತಲುಪಬೇಕಾದ ಹಳ್ಳಿ. ಅಂತೂ ಇಂತೂ ರಾತ್ರಿ 9ರ ವೇಳೆಗೆ ಹಳ್ಳಿ ತಲುಪಿ ಆಯಿತು. ನಮ್ಮನ್ನು ಬರ ಮಾಡಿಕೊಳ್ಳಲು ಇಡೀ ಹಳ್ಳಿಯೇ ಕಾಯುತ್ತಿದ್ದಂತೆ ಅನಿಸಿತು. ಎಲ್ಲರೂ ಹಳ್ಳಿಯ ಮುಖ್ಯಸ್ಥನ ಮನೆಯಲ್ಲಿ ನೆರೆದಿದ್ದರು. ನಮ್ಮ ಗೈಡುಗಳಿಗೆ ಎಲ್ಲಿಲ್ಲದ ಸಂತೋಷ. ಇಲ್ಲಿ ಚಾರಣ ಮಾಡಲು ಹೋಗುವವರ ಸಂಖ್ಯೆ ತುಂಬಾ ಕಡಿಮೆ, ಹಾಗೆ ತಮಗೆ ಸಿಕ್ಕಿದ ಈ ಅವಕಾಶ ಅವರಿಗೂ ಖುಷಿ ತಂದಿತ್ತು. ಹಳ್ಳಿಯ ಜೀವನ ಪಟ್ಟಣದವರಿಗೆ ಸೊಗಸು ಎಂದೆಣಿಸಿದರೂ, ಹಳ್ಳಿಯ ಜನಕ್ಕೇ ಗೊತ್ತು ಅವರ ಕಷ್ಟ. ಪ್ರತಿಯೊಂದಕ್ಕೂ ನೂರಾರು ಕಿಲೋಮೀಟರು ದೂರ ಇರುವ ಪಟ್ಟಣಕ್ಕೆ ಬರಬೇಕು. ಊರಿನಲ್ಲಿ ಆದಾಯವೂ ಇಲ್ಲ, ಉದ್ಯೋಗವೂ ಇಲ್ಲ. ಹಾಗೆ ಸಿಕ್ಕಿದ ಆದಾಯದ ಬಗ್ಗೆ ಅವರಲ್ಲಿ ಕೃತಜ್ಞತೆ ಇತ್ತು. ನಮಗೆ ಹೊಸದೊಂದು ಪರ್ವತವನ್ನು ನೋಡಿ, ಸವಿದು, ಆನಂದಿಸಿದ ಸಂಭ್ರಮ, ಅದರ ಜೊತೆ ಜೊತೆಗೆ ಹಳ್ಳಿಯವರ ಮುಗ್ದ ನಗುವಿನ ಆದರದ ಆತಿಥ್ಯ. ಅವತ್ತು ಹಳ್ಳಿಯ ಮುಖ್ಯಸ್ಥರು ನಮಗೆ ಅವರ ಬುಡಕಟ್ಟಿನ ಶಾಲು ತಂದು ಹೊದಿಸಿದರು.

saramathi 3

ನಾಗಾಲ್ಯಾಂಡಿನಲ್ಲಿ ಇಂದಿಗೂ ಕೂಡ 16 ಬುಡಕಟ್ಟು ಜನಾಂಗದವರು (Naga Tribal Communities) ಇದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ನಾಗಾಲ್ಯಾಂಡಿನ ಹಾರ್ನ್ ಬಿಲ್ ಹಬ್ಬ ಇದೇ 16 ಬುಡಕಟ್ಟು ಜನಾಂಗದವರ ವೈಶಿಷ್ಟ್ಯತೆಯನ್ನು ಹೊರಪ್ರಪಂಚಕ್ಕೆ ಬಿಂಬಿಸುವ ಹಬ್ಬ. ಪ್ರತೀ ಒಂದು ಸಮೂಹದ ಆಹಾರ, ಪದ್ಧತಿ, ಕಟ್ಟಳೆ, ಸಂಪ್ರದಾಯ, ಮನೆಯ ಶೈಲಿ, ಉಡುಗೆ ತೊಡುಗೆ, ಭಾಷೆ ವಿಭಿನ್ನ. ನಮಗೆ ತಂದು ಹೊದಿಸಿದ ಶಾಲು ಆ ಹಳ್ಳಿಯಲ್ಲಿ ಬಹು ಸಂಖ್ಯೆಯಲ್ಲಿ ವಾಸವಾಗಿದ್ದ ಇಂಚುಂಗ್ ಬುಡಕಟ್ಟಿನ (ಇಂಚುಂಗ್ Tribe) ಶಾಲು. ಅದರಲ್ಲೂ ಕೂಡ ಮಹಿಳೆ ಹಾಗೂ ಪುರುಷರು ತೊಡುವ ಶಾಲುಗಳು ಕೂಡ ವಿಭಿನ್ನ. ನಾನು ತಪ್ಪಾಗಿ ಯಾವುದೋ ಶಾಲನ್ನು ಹೊದ್ದುಕೊಂಡಾಗಲೇ ಗೊತ್ತಾಗಿದ್ದು, ಒಂದು ವೇಳೆ ಮಹಿಳೆ ಪುರುಷರು ತೊಡುವ ಶಾಲನ್ನು ಹೊದ್ದುಕೊಂಡರೆ ರೂ. 500 ದಂಡ ಕಟ್ಟಬೇಕಂತೆ. ಆಯಾಯ ಊರಿನಲ್ಲಿ ಅವರವರ ನಿಯಮಾವಳಿ.

ಅವತ್ತು ರಾತ್ರಿ ಮತ್ತೆ ನಾಗ ಊಟ. ಅತೀ ಕಡಿಮೆ ಎಣ್ಣೆ(ಇಲ್ಲವೇ ಎನ್ನುವಷ್ಟು), ಸಾಮಗ್ರಿ ಹಾಕಿ, ಹೆಚ್ಚಾಗಿ ಬರಿಯ ಹಸಿ ಮೆಣಸು ಮತ್ತು ಉಪ್ಪು ಹಾಕಿ ಬೇಯಿಸಿದ ಖಾದ್ಯಗಳೇ ಜಾಸ್ತಿ(ಉಪ್ಪಿನಲ್ಲಿ ಬೇಯಿಸಿದ ಸೀಮೆ ಬದನೆ, ಉಪ್ಪಿನಲ್ಲಿ ಬೇಯಿಸಿದ ಬೇಳೆ, ಕ್ಯಾಬೇಜ್, ಒಂದಿಷ್ಟು ಸೊಪ್ಪು ತರಕಾರಿ, ಅನ್ನ, ಒಣ ಮೀನು). ಆದರೂ ಅಲ್ಲಿಯ ವಾತಾವರಣಕ್ಕೆ ಅದೇ ಸೂಕ್ತ ಆಹಾರ. ನಮ್ಮ ಹಸಿದ ಹೊಟ್ಟೆಗೆ ಅದೇ ಔತಣವಾಗಿತ್ತು. ಸಾಧಾರಣ ಎಲ್ಲರೂ ಕೂಡ ಇದನ್ನೇ ಎರಡು ಅಥವಾ ಮೂರು ಬಾರಿ (ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ) ಸೇವಿಸುತ್ತಾರೆ. ಹೆಚ್ಚಿನವರು ಇಲ್ಲಿ ಎರಡೇ ಬಾರಿ ಊಟ ಮಾಡುವುದು. ಬೆಳೆಗ್ಗೆ ತಮ್ಮ ತಮ್ಮ ತೋಟಕ್ಕೆ ಹೋಗುವ ಮುನ್ನ. ಆಮೇಲೆ ರಾತ್ರಿ ತೋಟದ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ರಾತ್ರಿಯ ಊಟ. ಬೇರೆ ಪದಾರ್ಥಗಳು ಸಿಗುವುದು ಬಹಳ ವಿರಳ. ಎಲ್ಲವೂ ಕೂಡ ಅದೇ ಹಳ್ಳಿಯ ಜನರ ತೋಟದಲ್ಲಿ ಬೆಳೆದ ಪದಾರ್ಥಗಳು. ಈ ಹಳ್ಳಿಯ ಹೆಚ್ಚಿನವರಿಗೆ ಹತ್ತಿರವಿರುವ ದೊಡ್ಡ ಪಟ್ಟಣವೆಂದರೆ 400 ಕಿಲೋಮೀಟರು ದೂರದಲ್ಲಿನ ಕೊಹಿಮಾ.

ಮರುದಿನ ಮತ್ತೆ ನಾಗ breakfast ಮುಗಿಸಿ, ಆ ಹಳ್ಳಿಯ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತಾ, ನಮ್ಮ ಪ್ರಯಾಣವನ್ನು ಕೊಹಿಮಾದ ಹಾರ್ನ್ ಬಿಲ್ ಹಬ್ಬದ ಕಡೆ ಮುಂದುವರೆಸಿದೆವು.

ಸುಚಿತ್ರಾ
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X