ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಸ್ವಾಭಿಮಾನದ ಬದುಕಿಗೆ ನೆರವಾಗುತ್ತಿದೆ. ಹಲವಾರು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು, ಬೋರ್‌ವೆಲ್ ಕೊರೆಸಿರುವುದು, ಹೊಲಿಗೆ ಯಂತ್ರ ಖರೀದಿಸಿರುವುದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯಯಿಸುತ್ತಿರುವ ವರದಿಗಳು ಕೇಳಿಬಂದಿವೆ. ಇದೆಲ್ಲದರ ನಡುವೆ, ಆಶಾ ಕಾರ್ಯಕರ್ತೆಯೊಬ್ಬರು ತಮಗೆ ಬರುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು, ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಕೊಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಲಗುಬಿಗಿ ಎಂಬವರು ಒಂದು ವರ್ಷದಿಂದ ಪ್ರತಿ ತಿಂಗಳು ಬಂದ ಗೃಹಲಕ್ಷ್ಮೀ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. 12 ತಿಂಗಳಲ್ಲಿ ಬಂದ ಒಟ್ಟು 24 ಸಾವಿರ ರೂ. ಹಣವನ್ನು ತಮ್ಮ ಊರಿನ ಶಾಲೆಗೆ ನೀಡಿದ್ದಾರೆ.
ಐರಣಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಯಿದ್ದು, ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ಶಾಲೆಯಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಗೃಹಲಕ್ಷ್ಮೀ ಹಣವನ್ನು ಕೊಟ್ಟಿದ್ದಾರೆ. ಅವರು ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಜೊತೆಗೆ, ಸಮೀಕ್ಷೆಗಳು ಸೇರಿದಂತೆ ಸರ್ಕಾರದ ನಾನಾ ರೀತಯ ಕೆಲಸಗಳನ್ನೂ ಮಾಡುತ್ತಿದ್ದಾರೆ. ಆದರೂ, ಅವರಿಗೆ ಅತ್ಯಂತ ಕಡಿಮೆ ಗೌರವ ಧನ ನೀಡಲಾಗುತ್ತಿದೆ. ಹೀಗಾಗಿ, ತಮಗೆ ನೀಡಲಾಗುವ ಗೌರವಧನವನ್ನು 12,000 ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಲ್ಕು ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಅವರ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ, ಗೌರವಧನವನ್ನು 8,000 ರೂ.ಗಳಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ.
ಕಡಿಮೆ ಗೌರವಧನಕ್ಕೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಿದ್ದರೂ, ಗಂಗಮ್ಮ ಅವರು ತಮ್ಮ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಶಾಲೆಗೆ ನೀಡಿರುವುದು ಪ್ರಶಂಸನೀಯ.