ಮಕ್ಕಳು ಮತ್ತು ಗರ್ಭಿಣಿಯರ ದತ್ತಾಂಶ ಸಂಗ್ರಹಿಸಲು ನಡೆಸುತ್ತಿರುವ ಮೊಬೈಲ್ ಆ್ಯಪ್ ಆಧಾರಿತ ‘ಹೆಲ್ತ್ ಅಂಡ್ ನ್ಯೂಟ್ರಿಷನ್ ಸರ್ವೇ’ (ಎಚ್ಎನ್ಎಸ್)ಯನ್ನು ಕೈಬಿಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಒತ್ತಾಯಿಸಿದೆ.
ಮಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಘದ ಕಾರ್ಯಕರ್ತತೆ ಭೇಟಿ ಮಾಡಿ, ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ, “ಪಿಎಚ್‌ಸಿ ಮತ್ತು ಸಿಎಚ್‌ಸಿ ಅಧಿಕಾರಿಗಳ ಸಮನ್ವಯದೊಂದಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಒಗ್ಗೂಡಿ ಸಮೀಕ್ಷೆ ನಡೆಸಬೇಕಾಗಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸದ ಕಾರಣ ಆಶಾ ಕಾರ್ಯಕರ್ತೆಯರ ಮೇಲಿನ ಹೊರೆ ಹೆಚ್ಚಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಆಶಾ ಕಾರ್ಯಕರ್ತೆಯರು ಹೊಸದಾಗಿ ಸೇರ್ಪಡೆಯಾಗಿರುವ ಎಚ್ಎನ್ಎಸ್ ಜೊತೆಗೆ ಕುಷ್ಠರೋಗ, ಲಾರ್ವಾ ಮತ್ತು ರೋಗನಿರೋಧಕತೆಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.
“ಒಂದು ಮನೆಯನ್ನು ಕವರ್ ಮಾಡಲು ಕನಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳುವ ಸಮೀಕ್ಷೆಯ ಸಮಯದಲ್ಲಿ ಆಶಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅನೇಕ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್‌ಗಳ ಬಳಕೆಯ ಪರಿಚಯವಿಲ್ಲ. ಹಾಗಾಗಿ ಡೇಟಾವನ್ನು ಅಪ್‌ಲೋಡ್ ಮಾಡಲು ಕಷ್ಟಪಡುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಸರ್ಕಾರದ ಶಿಫಾರಸ್ಸಿನಂತೆ ವಿದ್ಯುತ್ ದರ ಹೆಚ್ಚಳವಾಗಿದೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
“ಇಂಟರ್ನೆಟ್ ಡೇಟಾ ಪ್ಯಾಕ್‌ಗಳನ್ನು ಖರೀದಿಸಲು ಆಶಾ ಕಾರ್ಯಕರ್ತೆಯರಿಗೆ ಯಾವುದೇ ಪ್ರತ್ಯೇಕ ಭತ್ಯೆ ನೀಡುವುದಿಲ್ಲ. ಅಲ್ಲದೆ, ರೋಗಿಗಳು ಮತ್ತು ವೈದ್ಯರ ನಡುವೆ ಇ-ಸಂಜೀವಿನಿ ಟೆಲಿ ಸಮಾಲೋಚನೆಗೆ ಅನುಕೂಲವಾಗುವಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕಾರ್ಯವನ್ನೂ ನೀಡಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.