- ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ವಿರುದ್ಧ ಗೋಬ್ಯಾಕ್ ಚಳವಳಿ
- ರಾಯಚೂರಿಗೆ ಸಿಗಬೇಕಾದ ಏಮ್ಸ್ಅನ್ನು ಕಲಬುರಗಿಗೆ ಕೊಂಡೊಯ್ಯುತ್ತಾರೆಂಬ ಆರೋಪ
ಕಾಂಗ್ರೆಸ್ ನೃತೃತ್ವದ ರಾಜ್ಯ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ರಾಯಚೂರು ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ವಿರುದ್ಧ ರಾಯಚೂರು ನಾಗರಿಕ ವೇದಿಕೆಯ ಪದಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಗೋಬ್ಯಾಕ್ ಪ್ರತಿಭಟನೆ ನಡೆಸಿದ್ದಾರೆ.
ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಚಿವರಿಗೆ ಪ್ರತಿಭಟನಾಕಾರರು ಫೇರಾವ್ ಹಾಕಲು ಯತ್ನಿಸಿದ್ದು, ಅವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಗೆ ಚಾಲನೆ ನೀಡಲು ಶರಣಪ್ರಕಾಶ ಪಾಟೀಲ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಮುಂಚೆ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.

“ರಾಜ್ಯ ಸರ್ಕಾರವು ಜಿಲ್ಲೆಯ ಎನ್.ಎಸ್ ಬೋಸರಾಜು ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ನೀಡಿ ಕಲಬುರಗಿಯ ಶರಣಪ್ರಕಾಶ ಪಾಟೀಲ ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ನೀಡಿದೆ. ಇದು ಸರಿಯಾದ ನಡೆಯಲ್ಲ. ಜಿಲ್ಲೆಗೆ ಸಿಗಬೇಕಾದ ಏಮ್ಸ್ಅನ್ನು ಕಲಬುರಗಿಗೆ ಮಂಜೂರು ಮಾಡಲಾಗುವುದು ಎಂದು ಶರಣಪ್ರಕಾಶ ಪಾಟೀಲ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ನೀಡುವುದರಿಂದ ಜಿಲ್ಲೆಗೆ ಏಮ್ಸ್ ಕೈತಪ್ಪಲಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಸರ್ಕಾರದ ಶಿಫಾರಸ್ಸಿನಂತೆ ವಿದ್ಯುತ್ ದರ ಹೆಚ್ಚಳವಾಗಿದೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಸಚಿವ ಶರಣಪ್ರಕಾಶ ಪಾಟೀಲ ನಗರದ ಕ್ರೀಡಾಂಗಣ ಬಳಿ ರಾಯಚೂರು ಏಮ್ಸ್ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತನಾಡಿದರು. “ರಾಯಚೂರಿಗೆ ಏಮ್ಸ್ ಮಂಜೂರು ಮಾಡಲಾಗುವುದು, ಗೊಂದಲ ಬೇಡ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಮುಖ್ಯಮಂತ್ರಿ ಜೊತೆ ಮಾತನಾಡಿ ಏಮ್ಸ್ ಮಂಜೂರಾತಿಗೆ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಕೆಪಿಸಿಸಿ ಕಾರ್ಯದರ್ಶಿ ಎ. ವಸಂತಕುಮಾರ್, ಮುಖಂಡರಾದ ರಾಜಶೇಖರ ರಾಮಸ್ವಾಮಿ, ಹೋರಾಟಗಾರ ಅಶೋಕ ಕುಮಾರ್ ಜೈನ್, ಜಾನ್ ವೆಸ್ಲಿ, ನರಸಪ್ಪ ಬಾಡಿಯಾಲ್ ಇದ್ದರು.