ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಭಾಲ್ಕಿ ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ನಾಳೆ (ಫೆ.16) ಬೆಳಿಗ್ಗೆ 9 ಗಂಟೆಗೆ 6ನೇ ತರಗತಿಗೆ ಉಚಿತ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ 30 ವಿದ್ಯಾರ್ಥಿಗಳಿಗೆ 6 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಜತೆಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಆಡಳಿತಾಧಿಕಾರಿ ಮೋಹನ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಫೆ.16 ಮತ್ತು 23 ರಂದು ಎರಡು ದಿನ ಪರೀಕ್ಷೆ ನಡೆಯಲಿವೆ. ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ ಕುರಿತು ಪರೀಕ್ಷೆ ಒಳಗೊಂಡಿರುತ್ತದೆ.
ʼಶ್ರೀ ಚನ್ನಬಸವೇಶ್ವರ ಗುರುಕುಲ ಪ್ರಾಥಮಿಕ ಶಾಲೆ ಕರಡ್ಯಾಳ ಸುಮಾರು 33 ವರ್ಷಗಳಿಂದ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುತ್ತ ಬರುತ್ತಿದ್ದು, ಇದೀಗ ವಿಶೇಷವಾಗಿ ಬಡ ಮತ್ತು ಪ್ರತಿಭಾವಂತ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಪರೀಕ್ಷೆ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಸಾಬೀತು ಪಡಿಸಬೇಕುʼ ಎಂದು ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಲು ಆನ್‌ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʼಕನ್ನಡ ಮಾಧ್ಯಮದ ಕಲಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸುವ ಸದುದ್ದೇಶದಿಂದ ಬಡ, ಪ್ರತಿಭಾವಂತ 30 ಮಕ್ಕಳಿಗೆ 6 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ, ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿದ್ದೇವೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಈ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕುʼ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.