ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಜಗತಿನ ಅಗತ್ಯತೆಯನ್ನು ಅರ್ಥಮಾಡಿಕೊಂಡ ಅದ್ಭುತ ಅರ್ಥಶಾಸ್ತ್ರಜ್ಞ ಮತ್ತು ಉತ್ತಮ ರಾಜಕೀಯ ನಾಯಕ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಬಣ್ಣಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ಶಾಂತಿನಿಕೇತನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂಗ್ ಅವರು ಗೌತಮ ಬುದ್ಧನ ‘ವಜ್ರಚ್ಛೇದಿಕ ಪ್ರಜ್ಞಾಪರಮಿತಾ’ ಸೂತ್ರ ಅಥವಾ ‘ವಜ್ರ ಸೂತ್ರ’ದಲ್ಲಿ ಮನುಷ್ಯರ ವಿಭಿನ್ನ ನಂಬಿಕೆಗಳ ಅಸ್ತಿತ್ವವನ್ನು ಗುರುತಿಸುವುದು ಮುಖ್ಯ ಎಂಬ ಸಂದೇಶವನ್ನು ಅರ್ಥಮಾಡಿಕೊಂಡಿದ್ದರು.
ಅವರಿಗೆ ‘ವಜ್ರ ಸೂತ್ರ’ದಲ್ಲಿ ವಿವರಿಸಲಾದ ಗೌತಮ ಬುದ್ಧನ ಸಂದೇಶ ಚೆನ್ನಾಗಿ ತಿಳಿದಿತ್ತು ಎಂದು ನಾನು ಭಾವಿಸುತ್ತೇನೆ. ನಾವು ಒಟ್ಟಿಗೆ ವಿದ್ಯಾರ್ಥಿಗಳಾಗಿದ್ದಾಗ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಹೋದ್ಯೋಗಿಗಳಾಗಿದ್ದಾಗ ನಾನು ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ ಎಂದು ಅಮರ್ತ್ಯ ಸೇನ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಮನಮೋಹನ ಸಿಂಗ್ ಮತ್ತು ನಾನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ವ್ಯಾಸಂಗ ಮಾಡುವುದರ ಜತೆಗೆ ಉತ್ತಮ ಸ್ನೇಹಿತರಾಗಿದ್ದೆವು. ಬುದ್ಧಿವಂತಿಕೆಯ ಪರಿಪೂರ್ಣತೆ ಸೂತ್ರದಲ್ಲಿ ಗೌತಮ ಬುದ್ಧ ವಿವರಿಸಿದ ಸಂದೇಶದ ಸಾರವನ್ನು ಮನಮೋಹನ ಸಿಂಗ್ ಅಳವಡಿಸಿಕೊಂಡಿದ್ದರು. ಹಾಗಾಗಿ ಭಾರತದ ನೆಲದಲ್ಲಿ ಪಾಕಿಸ್ತಾನದ ಭಯೋತ್ಪಾದನೆಯ ಪುರಾವೆಗಳು ಕಂಡುಬಂದಾಗ ಪ್ರಜ್ಞಾಪೂರ್ವಕವಾಗಿ ಹೀಗೆ ಪ್ರತಿಕ್ರಿಯಿಸಬೇಕು ಎಂಬುದು ಅವರಿಗೆ ತಿಳಿದಿತ್ತು ಎಂದು ಸೇನ್ ವಿವರಿಸಿದ್ದಾರೆ.
ಮನಮೋಹನ ಅವರು ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಹ ಗೌತಮ ಬುದ್ಧನ ಸಂದೇಶವನ್ನು ಇತರ ಧರ್ಮಗಳು ಮತ್ತು ಸಮುದಾಯಗಳ ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ನಾನು, ಮನಮೋಹನ ಸಿಂಗ್ ಅವರನ್ನು ತುಂಬಾ ಇಷ್ಟಪಟ್ಟಿದ್ದೇನೆ. ಸ್ನೇಹಿತ ಎಂಬ ಕಾರಣಕ್ಕಾಗಿ ಅಲ್ಲ ಎಂದು ಸೇನ್ ಪ್ರತಿಪಾದಿಸಿದ್ದಾರೆ.