ಯುವ ಮನಸ್ಸುಗಳನ್ನು ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ತಮ್ಮ ನಿರ್ದಿಗಂತ ತಂಡವು ನಿರ್ದಿಗಂತ ನಾಟಕೋತ್ಸವ ನಡೆಸುತ್ತಿದೆ. ಈ ಬಾರಿ, ಮಂಗಳೂರಿನಲ್ಲಿ ‘ಸೌಹಾರ್ದದ ಬಳಿ; ನಮ್ಮ ಕರಾವಳಿ’ ಎಂಬ ಶೀರ್ಷಿಕೆಯಡಿ ಫೆಬ್ರವರಿ 28ರಿಂದ ಮಾರ್ಚ್ 3ರವರೆಗೆ ನಾಟಕೋತ್ಸವ ನಡೆಯಲಿದೆ ಎಂದು ಖ್ಯಾತ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಾಟಕೋತ್ಸವ ನಡೆಯಲಿದೆ. ತುಳು, ಕೊಂಕಣಿ ಸೇರಿದಂತೆ ರಂಗಭೂಮಿ ನಿರ್ದೇಶಕರಿಂದ ರಚನೆಗೊಂಡಿರುವ 8 ನಾಟಕಗಳ ಪ್ರದರ್ಶನ ಇರಲಿದೆ. ಜೊತೆಗೆ, ವಿವಿಧ ರೀತಿಯ ಕಾರ್ಯಾಗಾರ, ವಿಚಾರಗೋಷ್ಠಿ, ಬೀದಿನಾಟಕಗಳನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.
“ನಾಟಕೋತ್ಸವವನ್ನು ಸಂತ ಅಲೋಶಿಯಸ್ ಕಾಲೇಜಿನ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಶಯ ಭಾಷಣ ಮಾಡಲಿದ್ದಾರೆ” ಎಂದು ತಿಳಿಸಿದ್ದಾರೆ.
ನಾಟಕೋತ್ಸವದಲ್ಲಿ ಬಿಜಾಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ತಂಡ ಪ್ರಸ್ತುತಪಡಿಸಲಿರುವ ‘ಫಾರ್ ಎ ಬೈಟ್ ಆಫ್ ಫುಡ್’, ಮಂಗಳೂರು ಯಕ್ಷಮಿತ್ರರು ತಂಡದಿಂದ ‘ಕೋಟಿ ಚೆನ್ನಯ’ ಯಕ್ಷಗಾನ, ಧಾರವಾಡದ ಆಟಮಾಟ ತಂಡ ಹಾಗೂ ಮಹದೇವ ಹಡಪದ ನಿರ್ದೇಶನದ ‘ಗುಡಿಯ ನೋಡಿರಣ್ಣ’, ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ತಂಡದಿಂದ ‘ಹ್ಯಾಂಗಾನ್’ ಕೊಂಕಣಿ ನಾಟಕ, ಕೇರಳದ ಲಿಟಲ್ ಅರ್ತ್ ಸ್ಕೂಲ್ ಆಫ್ ಥಿಯೇಟರ್ ತಂಡದಿಂದ ‘ಕುಹೂ: ಆಂತಾಲಜಿ ಆನ್ ದ ರೈಲ್ಸ್’, ನಿರ್ದಿಗಂತ ತಂಡದಿಂದ ‘ರಸೀದಿ ಟಿಕೇಟ್’, ಹಾಗೂ ‘ತಿಂಡಿಗೆ ಬಂದ ತುಂಡೇರಾಯ’ ನಾಟಕಗಳು ಪ್ರದರ್ಶನಗೊಳ್ಳಲಿವೆ” ಎಂದು ಪ್ರಕಾಶ್ ವಿವರಿಸಿದ್ದಾರೆ.
ಅಲ್ಲದೆ, ಡಾ. ಗಣನಾಥ ಎಕ್ಕಾರು ಅವರಿಂದ ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜು ತಂಡದಿಂದ ಕಾಲೇಜ್ ಬ್ಯಾಂಡ್ ಜ್ಯಾಮಿಂಗ್ ನಡೆಯಲಿದೆ. ಡಾ. ಮೋಹನ್ ಕುಂಟಾರ್ ಅವರು ‘ಕರಾವಳಿಯ ಭಾಷಾ ಸಂಬಂಧದ ಕೊಡುಕೊಳ್ವೆಯ ಸ್ವರೂಪ’ ವಿಷಯದಲ್ಲಿ ಮಾತನಾಡಲಿದ್ದಾರೆ. ಶಾರದಾ ಜಿ. ಬಂಗೇರ ಅವರು ಪಾಡ್ದನ ಹಾಡಲಿದ್ದು, ಐರಿನ್ ರೆಬಲ್ಲೋ ಮತ್ತು ತಂಡದಿಂದ ವೊವಿಯೊ ಕೊಂಕಣಿ ಹಾಡು ಹಾಗೂ ಪೂಜ್ಯ ಸೇಸು ಗೌಡ ಕಲಾ ಟ್ರಸ್ಟ್‌ನಿಂದ ಕುಡುಬಿ ಹಾಡುಗಳು ಪ್ರಸ್ತುತಗೊಳ್ಳಲಿವೆ. ವೆಂಕಟರಮಣ ಐತಾಳ್‌ರವರು ‘ಸ್ಥಳೀಯ ಚರಿತ್ರೆಗಳು ಮತ್ತು ಕುಸಿಯುತ್ತಿರುವ ಬಹುತ್ವದ ನೆಲೆ’ ವಿಷಯದ ಕುರಿತು ಮಾತನಾಡಲಿದ್ದಾರೆ. ಅಲ್ಲದೆ, ಕರಗ ಡೋಲು, ಕಾವ್ಯ ವಾಚನ ಸೇಋಇದಂತೆ ಹಲವಾರು ರೀತಿಯ ಕಾರ್ಯಕ್ರಮಗಳು ನಡೆಯಲಿವೆ” ಎಂದು ತಿಳಿಸಿದ್ದಾರೆ.
“ನಾಟಕೋತ್ಸವ ಸಮಾರೋಪವು ಮಾರ್ಚ್ 3ರ ಸಂಜೆ ನಡೆಯಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಭಾವಹಿಸಲಿದ್ದಾರೆ. ಅಂದು, ನಿರ್ದಿಗಂತ ತಂಡದಿಂದ ಅಮಿತ್ ರೆಡ್ಡಿ ನಿರ್ದೇಶನದ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ” ಎಂದು ಹೇಳಿದ್ದಾರೆ.