ವಿಜಯಪುರ ಜಿಲ್ಲೆಯ ಇಂಡಿ ನಿಂಬೆ ನಾಡಿಗೆ ಆಗಮಿಸುತ್ತಿರುವ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ನಿಗಮದ ಅಧ್ಶಕ್ಷೆ ಪಲ್ಲವಿ ಜಿ. ಅವರ ಎದುರು ಕಪ್ಪು ಪಟ್ಟಿ ಪ್ರದರ್ಶನ ಮಾಡಲು ಅಲೆಮಾರಿ ಸಮುದಾಯಗಳ ಒಕ್ಕೂಟ ನಿರ್ಧರಿಸಿದೆ.
ಕಳೆದ ಒಂದು ವರ್ಷಗಳಿಂದ ಉತ್ತರ ಕರ್ನಾಟಕ ಅಲೆಮಾರಿಗಳ ಅಭಿವೃದ್ಧಿಗೆ ಬಿಡುಗಡೆ ಮಾಡಬೇಕಾದ ಅನುದಾನದಲ್ಲಿ ತಾರತಮ್ಯ ಎಸಗಿದ್ದು, ಈ ಧೋರಣೆ ಖಂಡಿಸಿ ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗುವುದು ಹಾಗೂ ಇಂಡಿ ಮತಕ್ಷೇತ್ರಕ್ಕೆ ಪ್ರವೇಶ ಮಾಡದಂತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಒಕ್ಕೂಟದ ಜಿಲ್ಲಾ ಮುಖಂಡ ಪ್ರೀತು ದಶವಂತ ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.
“ಪಲ್ಲವಿ ಜಿ ಅವರು ಸರ್ವಾಧಿಕಾರಿ ಧೋರಣೆ ಎಸಗುತ್ತಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪೋಟೋ ಪ್ರದರ್ಶನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಲ್ಲಿಗೆ ಮಾತ್ರ ಸೀಮಿತವಾಗಿವೆ. ಅವರು ಸರ್ಕಾರದಿಂದ ಯಾವುದೇ ಅನುದಾನವನ್ನು ತರದೇ ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ. ನಿಗಮದಲ್ಲಿ ಕೇವಲ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಭೂ ಒಡೆತನ ಯೋಜನೆಯಡಿ ಶೇ.20ರಷ್ಟು ಕಮಿಷನ್ ಧಂದೆ ಮಾಡುತ್ತಾ ರಾಯಚೂರು ಜಿಲ್ಲೆಯೊಂದಕ್ಕೆ ಸುಮಾರು 8 ಕೋಟಿ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದ್ದಾರೆ” ಎಂದು ಆರೋಪಿಸಿದರು.
“ನಿಗಮದ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿರುವ ಆನಂದ್ ಕುಮಾರ್, ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಜಿಲ್ಲಾಧಿಕರಿಗಳಿಗೆ ಮತ್ತು ಅಧಿಕಾರಿಗಳಿಗೆ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಿಗಮದ ಅಧ್ಯಕ್ಷರ ಸರಿಸಮಾನವಾಗಿ ಕುಳಿತುಕೊಂಡು ಸಭೆಯ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದಾರೆ. ಹೀಗೆ ತಮ್ಮ ಅಧಿಕಾರ ವ್ಯಾಪ್ತಿಮೀರಿ ಅಧ್ಯಕ್ಷರ ಅಧಿಕಾರವನ್ನು ಸ್ವಯಂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕಿ ಹಫ್ತಾ ವಸೂಲಿ ದಂಧೆಯ ಜತೆಗೆ ಅಲೆಮಾರಿಗಳ ಸಮಗ್ರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಕೇಲವ ಭೂ ಒಡೆತನ ಯೋಜನೆಗೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲೆಮಾರಿ ನಿವೇಶನ, ಲೇಔಟ್ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯಕ್ಕೆ ಯಾವುದೇ ಯೋಜನೆಗೆ ಅನುದಾನವನ್ನು ಮೀಸಲಿಡದೇ ಕೇವಲ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಭೂ ಒಡೆತನ ಯೋಜನೆಯಡಿ ಅನುದಾನ ಮಂಜೂರು ಮಾಡಿಕೊಂಡು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.
“ರಾಜ್ಯ ಎಸ್‌ಸಿ ಮತ್ತು ಎಸ್‌ಟಿ ಅಲೆಮಾರಿ ಜನರಿಗೆ ಯಾಮಾರಿಸಿಕೊಂಡು ನಿಗಮದಲ್ಲಿ ಲೂಟಿ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ಧಮ್ಕಿ ಹಾಕುವುದು ಹಾಗೂ ಅಧಿಕಾರಿಗಳ ಮುಖಾಂತರ ಬೆದರಿಕೆ ಹಾಕುವುದು ಮಾಡುತ್ತಾರೆ. ನಿಗಮದಲ್ಲಿ ಕೆಲಸ ಮಾಡಲು ಸಾರ್ವಜನಿಕರಿಂದ ಹಣ ಪೀಕುತ್ತಾರೆ. ಹೀಗೆ ಅಲೆಮಾರಿ ನಿಗಮದ ಅಧ್ಯಕ್ಷೆಯ ಹೆಸರಿನಲ್ಲಿ ಆಪ್ತಕಾರ್ಯದರ್ಶಿ ಆನಂದ್ ಕುಮಾರ್, ಅಧ್ಯಕ್ಷರ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಹಗಲು ವೇಷದ ಮುಖವಾಡ ಧರಿಸಿಕೊಂಡು ಅಧಿಕಾರಿಗಳಿಗೆ ಹಾಗೂ ಅಲೆಮಾರಿ ಸಮುದಾಯಗಳ ಜನರ ಹೊಟ್ಟೆ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
ಇಂತಹ ಬೇಜವಾಬ್ದಾರಿ ಅಧ್ಶಕ್ಷೆ ಹಾಗೂ ಅವರ ಕಡು ಭ್ರಷ್ಟ ಆಪ್ತ ಸಹಾಯಕ ಆನಂದ ಕುಮಾರ ಇಬ್ಬರೂ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಬರದಂತೆ ತಡೆದು ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಸಂಘಟನೆಗಳ ಮುಖಂಡರು ಸಭೆ ಸೇರಿ ಪ್ರತಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಮತ್ತು ನಿಗಮದ ಅಧ್ಯಕ್ಷರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.