ನಾನಿನ್ನು ನಾಲ್ಕೈದು ವರ್ಷ ಬದುಕಿರುತ್ತೇನೆ. ಅಲ್ಲಿಯವರೆಗೂ ಮಹದಾನಿ ನದಿ ನೀರಿಗಾಗಿ ಶಕ್ತಿ ಮೀರಿ ಹೋರಾಟ ಮಾಡುತ್ತೇನೆ. ಮಹದಾಯಿ ನೀರಿಗಾಗಿ ಎಲ್ಲರೂ ಪಕ್ಷಭೇದ ಮರೆದು ಹೋರಾಟ ಮಾಡುವ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಮಹದಾಯಿ ನದಿ ನೀರಿನ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ – ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕದ ನಡುವೆ ವಿವಾದವಿದೆ. ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ, ಈ ವಿಚಾರದಲ್ಲಿ ಪ್ರಧಾನಿ ಮೋದಿ ಏನು ಮಾತನಾಡಲಾಗುತ್ತದೆ. ರಾಜ್ಯದವರು ನ್ಯಾಯಾಲಯದಲ್ಲಿ ಪ್ರಬಲವಾಗಿ ವಾದ ಮಂಡಿಸಬೇಕು” ಎಂದಿದ್ದಾರೆ.
“ಮಹದಾಯಿಯಿಂದ 25 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಕೊಡಬೇಕು. ಅದಕ್ಕಾಗಿ, ಕಳಸಾ ಬಂಡೂರಿಯಿಂದ 3.5 ಟಿಎಂಸಿ ನೀರು ಕೊಡಬೇಕು. ಆದರೆ, ಇದಕ್ಕೆ ಗೋವಾ ಆಕ್ಷೇಪಿಸುತ್ತಿದೆ. ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮಾಡುತ್ತಿದೆ. ಮಹದಾಯಿ ನೀರು ಬಿಡುಗಡೆಗಾಗಿ ಮೋದಿ ಅವರಲ್ಲಿ ಮನವಿ ಮಾಡಿದ್ದೆ. ಆದರೆ, ವಿವಾದ ಕೋರ್ಟ್‌ನಲ್ಲಿ ಇರುವ ಕಾರಣ, ತಾವೇನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ” ಎಂದು ದೇವೇಗೌಡ ತಿಳಿಸಿದ್ದಾರೆ.