ಗದಗ-ಬೆಟಗೇರಿ ನಗರಸಭೆ ಮಾಲಿಕತ್ವದ 54 ವಕಾರ ಸಾಲುಗಳ ಆಸ್ತಿಯನ್ನು ಕಾನೂನು ಬಾಹಿರವಾಗಿ ಗುತ್ತಿಗೆ ನೀಡಲು ನಕಲಿ ದಾಖಲೆ ಸೃಷ್ಟಿಸಿ, ಅದಕ್ಕೆ ಅಂದಿನ ಪೌರಾಯುಕ್ತರ ಹೆಸರಲ್ಲಿ ನಕಲಿ ಸಹಿ ಮಾಡಿದ ಆರೋಪ ಪ್ರಕರಣಕ್ಕೆ ಬಿಜೆಪಿ ಮೂರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಗದಗ – ಬೆಟಗೇರಿ ಅವಳಿ ನಗರಸಭೆ ಹಿಂದಿನ ಅಧ್ಯಕ್ಷೆ ಉಷಾ ದಾಸರ, ಸದಸ್ಯ ಅನೀಲ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.
ಗದಗ-ಬೆಟಗೇರಿ ಮಾಲೀಕತ್ವದ ಸಾವಿರಾರು ಕೋಟಿ ರೂ. ಮೌಲ್ಯದ 54 ವಕಾರಸಾಲುಗಳನ್ನು ಕಾನೂನು ಬಾಹಿರವಾಗಿ ದೀರ್ಘ ಅವಧಿಗೆ ಒಪ್ಪಂದ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ನಗರಸಭೆ ಮಾಜಿ ಪ್ರಭಾರ ಪೌರಾಯಕ್ತ ಪ್ರಶಾಂತ ವರಗಪ್ಪನವರ ಅವರು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ 2024ರ ಆ.15ರಂದು ದೂರು ದಾಖಲಿಸಿದ್ದರು.
‘2024ರ ಫೆಬ್ರವರಿ 9ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ದಾಖಲೆ ಪಾಸಾಗಿದೆ’ ಎಂದು ನಕಲಿ ದಾಖಲೆ ಸೃಷ್ಟಿಸಿ ‘2024ರ ಜುಲೈ 22ರಂದು ವಕಾರಸಾಲಿನ ಎಲ್ಲ ಅನುಭೋಗದಾರರಿಗೆ ಕಬ್ಜಾ ನೀಡಲಾಗಿದೆ’ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡೂ ದಾಖಲೆಗಳಿಗೆ ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಗದಗ-ಬೆಟಗೇರಿ ನಗರಸಭೆಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ ಆರೋಪದಡಿ ದೂರು ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮಾಂಗಲ್ಯ ಸರಗಳ್ಳ ಪೊಲೀಸರ ವಶ
ಆರೋಪ ಎದುರಿಸುತ್ತಿದ್ದ ಸದಸ್ಯರಿಗೆ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಅವರು ಖುದ್ದು ಹಾಜರಾಗಲು ನೋಟೀಸ್ ನೀಡಿ, ಫೆ.13 ರಂದು ವಿಚಾರಣೆ ನಡೆಸಿ, ಈ ವೇಳೆ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿರುವುದನ್ನು ಒಪ್ಪಿಕೊಂಡಿದ್ದರು.
