ಬಗರ್ ಹುಕುಂ ಸಾಗುವಳಿದಾರರರಿಗೆ ಹಕ್ಕು ಪತ್ರ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.24ರಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʼಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಅರಣ್ಯ ಸಚಿವರ ಹಾಗೂ ಸಂಸದ ಸಾಗರ್ ಖಂಡ್ರೆ ಹಾಗೂ ಎಲ್ಲ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದುʼ ಎಂದು ಹೇಳಿದರು.
ಪ್ರತಿ ಕ್ವಿಂಟಲ್ ತೊಗರಿಗೆ ₹12,500 ಬೆಂಬಲ ಬೆಲೆಯನ್ನು ಕೊಡುವಂತೆ, ಅರಣ್ಯ ಭೂಮಿ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುತ್ತಿರುವುದನ್ನು ತಡೆಗಟ್ಟುವಂತೆ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಬೇಕು. ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆ ಸಮೀಕ್ಷೆ ಮಾಡಬೇಕು. ನೆಟೆ ರೋಗದಿಂದ ಒಣಗಿದ ತೊಗರಿಗೆ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು. ರಾಜ್ಯ ಸರ್ಕಾರ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸುತ್ತಿರುವ ಅಧಿವೇಶನದಲ್ಲಿ ₹30 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ತೊಗರಿ ಬೆಳಗಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಆಗ್ರಹಿಸಿದರು.
ʼಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳಿಂದ ಜಂಟಿಯಾಗಿ ಧರಣಿ ಹಮ್ಮಿಕೊಳ್ಳಲಾಗಿದೆ. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಬೀದರ್ ಜಿಲ್ಲೆಯಲ್ಲಿ ಬಡ ರೈತರಿಗೆ ಕೊಡುತ್ತಿರುವ ಕಿರುಕುಳ ತಡೆಯಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಎಟಿಎಂ ದರೋಡೆ ಪ್ರಕರಣ: ಆರೋಪಿಗಳ ಫೋಟೊ ಬಿಡುಗಡೆ; ಮಾಹಿತಿ ಕೊಟ್ಟವರಿಗೆ ₹5 ಲಕ್ಷ ಬಹುಮಾನ!
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಸೈಯದ್ ಇಸಾಮೊದ್ದಿನ್, ಜಿಲ್ಲಾ ಕಾರ್ಯದರ್ಶಿ ದೇವಾನಂದ್ ಗಾಯಕವಾಡ, ಸಂಘದ ಪ್ರಮುಖರಾದ ದಿಲೀಪ್ ನಾಗೂರೆ, ಸಂಗ್ರಾಮ ಖಾಜಾಮಿಯ್ಯಾ ಸೇರಿಕಾರ್, ಭುಜಂಗ್ ಔರಾದ್, ಆರ್.ಪಿ ರಾಜಾ, ಸಂತೋಷ ಬಿ. ಕೊರವಾ ಹಾಜರಿದ್ದರು