ಭಾರತೀಯರಿಗೆ ಕೈಕೋಳ ತೊಡಿಸಿ ಅಮೆರಿಕ ಗಡಿಪಾರು ಮಾಡಿದ ವಿಚಾರದಲ್ಲಿ ಮೌನವಾಗಿರುವ ಪ್ರಧಾನಿ ಮೋದಿ ಅವರನ್ನು ವ್ಯಂಗ್ಯಾತ್ಮಕವಾಗಿ ಚಿತ್ರಿಸಿ, ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದ ತಮಿಳುನಾಡಿನ ಡಿಜಿಟಲ್ ಸುದ್ದಿ ಮಾಧ್ಯಮ ‘ವಿಕಟನ್’ ವೆಬ್ಸೈಟ್ಅನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಸ್ವತಃ ‘ವಿಕಟನ್’ ತಂಡ ಮಾಹಿತಿ ಹಂಚಿಕೊಂಡಿದ್ದು, “ನಮ್ಮ ವೆಬ್‌ಸೈಟ್‌ಅನ್ನು ಹಲವೆಡೆ ಹಲವರು ತೆರೆಯಲಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಬಳಿಕ, ಪರಿಶೀಲಿಸಿದಾಗ, ನಮ್ಮ ವೆಬ್‌ಸೈಟ್‌ಅನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂಬುದು ಗೊತ್ತಾಯಿತು. ಆದರೆ, ಸರ್ಕಾರವು ನಮಗೆ ಯಾವುದೇ ಮಾಹಿತಿ ನೀಡಿಲ್ಲ” ಎಂದು ಹೇಳಿದೆ.
“ನಮ್ಮ ವೆಬ್‌ಸೈಟ್‌ಅನ್ನು ನಿರ್ಬಂಧಿಸುವುದಕ್ಕೂ ಮೊದಲು, ವಿಕಟನ್ ಆನ್‌ಲೈನ್ ನಿಯತಕಾಲಿಕೆ ‘ವಿಕಟನ್ ಪ್ಲಸ್’ನಲ್ಲಿ (ಫೆಬ್ರವರಿ 10) ‘ಭಾರತೀಯರನ್ನು ಅಮೆರಿಕದಿಂದ ಕೈಕೋಳ ಹಾಕಿ ವಾಪಸ್ ಕರೆತರಲಾಗುತ್ತಿದೆ ಮತ್ತು ಪ್ರಧಾನಿ ಮೋದಿ ಅದರ ಬಗ್ಗೆ ಮಾತನಾಡಿಲ್ಲ’ ಎಂಬ ಒಂದು ಕಾರ್ಟೂನ್ ಪ್ರಕಟಿಸಲಾಗಿತ್ತು. ಆ ಕಾರ್ಟೂನ್ ವಿರುದ್ಧ ಬಿಜೆಪಿಗರು ಸಿಟ್ಟಾಗಿದ್ದರು. ಬಿಜೆಪಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ ಅವರು ವಿಕಟನ್ ಕಂಪನಿಯ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಇದೀಗ, ಯಾವುದೇ ಮಾಹಿತಿಯನ್ನು ನೀಡದೆ, ವಿಕಟನ್ ವೆಬ್ಸೈಟ್ಅನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ” ಎಂದು ಆರೋಪಿಸಿದೆ.

“ವಿಕಟನ್ – ಒಂದು ಶತಮಾನದಿಂದ, ನಿರಂತರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ಮೂಲಕ ಕೆಲಸ ಮಾಡುತ್ತಿದೆ. ನಾವು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದಕ್ಕಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಆ ಕಾರ್ಟೂನ್ ಕಾರಣಕ್ಕಾಗಿ ಕೇಂದ್ರ ಸರ್ಕಾರವು ವೆಬ್‌ಸೈಟ್ ಅನ್ನು ನಿರ್ಬಂಧಿಸಿದ್ದರೆ, ನಾವು ಕಾನೂನು ಹೋರಾಟ ನಡೆಸುತ್ತೇವೆ” ಎಂದು ವಿಕಟನ್ ಸಂಸ್ಥೆ ಹೇಳಿದೆ.
We will stand strong in defense of freedom of expression…
— விகடன் (@vikatan) February 15, 2025
For nearly a century, Vikatan has stood firmly in support of freedom of expression. We have always operated with the principle of upholding free speech and will continue to do so. We are still trying to ascertain the… pic.twitter.com/cjiq1YNEOU
ವಿಕಟನ್ ವೆಬ್‌ಸೈಟ್‌ಅನ್ನು ನಿರ್ಬಂಧಿಸಿರುವ ಕೇಂದ್ರದ ನಡೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ. “ವಿಕಟನ್ ಸುಮಾರು ಒಂದು ಶನಮಾನದಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣಕ್ಕಾಗಿ ಮಾಧ್ಯಮಗಳನ್ನು ನಿರ್ಬಂಧಿಸುವುದು ಸೂಕ್ತವಲ್ಲ. ಇದು ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ಸ್ವಭಾವಕ್ಕೆ ಮತ್ತೊಂದು ಉದಾಹರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.