ಪಕ್ಷಾಂತರದಲ್ಲೂ ಹೆಸರು ಮಾಡಿರುವ ಮಂಡ್ಯದ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಇದೀಗ, ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಶಿವರಾಮೇಗೌಡ ಜೊತೆಗೆ ಅವರ ಪುತ್ರ ಮಂಜೇಗೌಡ,ಎಎಪಿಯಲ್ಲಿದ್ದ ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್ ಚೇತನ್ ಗೌಡ ಹಾಗೂ ಹಲವಾರು ಬೆಂಬಲಿಗರು ಕೂಡ ಕಾಂಗ್ರೆಸ್ ಸೇರಿದ್ದಾರೆ.
ಹಲವು ದಿನಗಳಿಂದ ಶಿವರಾಮೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜೊತೆಗೆ ಮತ್ತೆ ಮಾತುಕತೆ ನಡೆಸುತ್ತಿದ್ದರು. ಚನ್ನಪಟ್ಟಣ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರು. ಆಗಲೇ ಅವರು ಕಾಂಗ್ರೆಸ್‌ಗೆ ಮರಳುತ್ತಾರೆಂದು ಹೇಳಲಾಗಿತ್ತು. ಈಗ, ಕಾಂಗ್ರೆಸ್‌ಗೆ ಸೇರಿದ್ದಾರೆ.
ಶಿವರಾಮೆಗೌಡರ ಪಕ್ಷಾಂತರ ಪರ್ವ ಹೊಸತೇನಲ್ಲ. 1996ರಲ್ಲಿ ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದ ಅವರು, 1999ರಲ್ಲಿ ಕಾಂಗ್ರೆಸ್ ಸೇರಿದ್ದರು. ಬಳಿಕ, 2009ರಲ್ಲಿ ಬಿಜೆಪಿ ಸೇರಿದ್ದರು. ಆನಂತರ, 2010ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. ಆದಾಗ್ಯೂ, 2018ರಲ್ಲಿ ಜೆಡಿಎಸ್‌ಗೆ ವಲಸೆ ಹೋಗಿದ್ದರು. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟು, ಆಕ್ರೋಶಕ್ಕೆ ಗುರಿಯಾಗಿದ್ದರು.
ಅಲ್ಲದೆ, 2023ರಲ್ಲಿ ಮಾಜಿ ಸಂಸದ ಜಿ ಮಾದೇಗೌಡರ ವಿರುದ್ಧ ಲಘುವಾಗಿ ಮಾತನಾಡಿದ್ದರು. ಆ ಕಾರಣಕ್ಕೆ, 2023ರಲ್ಲಿ ಅವರನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಾಗಿತ್ತು. ಬಳಿಕ ಅವರು ಬಿಜೆಪಿ ಸೇರಿದ್ದರು. ಈಗ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.