- ಮೀನುಗಾರಿಕೆ ಹಾಗೂ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಸಭೆ
- ವಿಧಾನಸೌಧದಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ
ಮಂಗಾರು ಸಂದರ್ಭದಲ್ಲಾಗುವ ಕಡಲ ಕೊರೆತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.
ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಂದರು ಪ್ರದೇಶಗಳಲ್ಲಿ ಕಡಲ ಕೊರೆತ ಹೆಚ್ಚಾಗುತ್ತಿದೆ. ಆ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಇಂದು (ಜೂನ್ 12) ಮೀನುಗಾರಿಕೆ ಮತ್ತು ಬಂದರು ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ಇಲಾಖೆ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಮುಂದೆ ಮೀನುಗಾರರು ಹಾಗೂ ಸಮಸ್ಯೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳುತ್ತೇವೆ” ಎಂದರು.
“ಮೀನುಗಾರರ ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುತ್ತೇವೆ. ರಾಜ್ಯದಲ್ಲಿ 300 ಕಿ.ಮೀ ದೂರ ಕಡಲ ತೀರ ವಿಸ್ತರಿಸಿದೆ. ಎಲ್ಲೆಲ್ಲಿ ಹೆಚ್ಚು ಕಡಲ ಕೊರೆತ ಇದೆಯೋ ಆ ಜಾಗಗಳನ್ನು ಗುರುತಿಸುವ ಕೆಲಸವಾಗುತ್ತಿದೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಸಣ್ಣ ನೀರಾವರಿ ಇಲಾಖೆಯಲ್ಲಿ ಅಕ್ರಮದ ಆರೋಪ; ವರದಿ ಕೇಳಿದ ಸಚಿವ ಬೋಸರಾಜು
“ಕಾರವಾರ, ಮಲ್ಪೆ, ಬಂದರಿನ ಕಾರ್ಯ ಅರ್ಧಕ್ಕೆ ನಿಂತಿದೆ. ಹೀಗೆ ಪೂರ್ತಿ ಆಗದೆ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ” ಎಂದ ಅವರು, ಕಡಲ ತಡಿಗಳಲ್ಲಿ ಪ್ರವಾಸಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಇನ್ನು ಈ ಬಾರಿ ತಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದ ಸಚಿವರು, 500 ಕೋಟಿ ತಮ್ಮ ಇಲಾಖೆಗೆ ಬರಬಹುದು ಎಂದು ಅಂದಾಜಿಸಿದರು. ಮುಂದುವರೆದು ಮಾತನಾಡಿದ ಅವರು, “ಉತ್ತರ ಕನ್ನಡದಲ್ಲಿ ಮೊದಲ ಸಭೆ ಮಾಡಿದ್ದೇನೆ. ಇಲ್ಲಿನ ಜನರ ಬೇಡಿಕೆಯಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡುತ್ತೇವೆ” ಎಂದು ಹೇಳಿದರು.