ತಾತನ ಪುಣ್ಯ ಕಾರ್ಯಕ್ಕೆ ಬಂದಿದ್ದ ಮೊಮ್ಮಗಳು ಮತ್ತು ಸಂಬಂಧಿ ಮಹಿಳೆ ನದಿಯಲ್ಲಿ ಸ್ನಾನ ಮಾಡುವಾಗ ನೀರು ಪಾಲಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.
ತಾಲೂಕಿನ ಗಾಣಾಳು ಸಮೀಪದ ಭೋವಿ ಕಾಲೊನಿಯ ಶೋಭಾ(19) ಮತ್ತು ನದಿಯಾ(18) ಮೃತಪಟ್ಟ ದುರ್ದೈವಿಗಳು.
ಕನಕಪುರ ತಾಲೂಕಿನ ಕಸಬಾ ಹೋಬಳಿ ಗಾಣಾಳು ಸಮೀಪದ ಭೋವಿ ಕಾಲೊನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಮೇಸ್ತ್ರಿ ಮಾದಯ್ಯ ಅವರ ಪುಣ್ಯ ಕಾರ್ಯವನ್ನು ಮುತ್ತತ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾದಯ್ಯನ ಮೊಮ್ಮಗಳು ನದಿಯಾ ಮತ್ತು ಸಂಬಂಧಿ ಮಹಿಳೆ ಶೋಭಾ ಹಾಗೂ ಇತರೆ ಸಂಬಂಧಿಕರು ಮುತ್ತತ್ತಿಯಲ್ಲಿ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಬಂದಿದ್ದರು. ಮುತ್ತತ್ತಿಯಲ್ಲಿ ನೀರಿಗಿಳದು ಸ್ನಾನ ಮಾಡುವಾಗ ಶೋಭಾ ಹಾಗೂ ನದಿಯಾ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎನ್‌ಎಸ್ಎಸ್ ಪಾತ್ರ ಅಪಾರ: ಕುಲಪತಿ ಶಾಂತಾದೇವಿ ಟಿ
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹಗಳನ್ನು ನದಿಯಿಂದ ಹೊರತೆಗೆಸಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.