ವೈದ್ಯರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ಸರಕಾರದ ಕರ್ನಾಟಕ ಜೀವವೈವಿದ್ಯ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಹಾಗೂ ಬೀದರ್ ಜಿಲ್ಲಾಡಳಿತ ಸಹಯೋಗದಲ್ಲಿ ಮಾರ್ಚ್ 2, 3 ಮತ್ತು 4 ರಂದು ಬೀದರನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಹಾಗಾಗಿ ವೈದ್ಯರಿಗೆ ಕರ್ನಾಟಕ ರಾಜ್ಯ ವೈದ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಐದು ಜನ ಪಾರಂಪರಿಕ ವೈದ್ಯರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಕನಿಷ್ಠ 20 ವರ್ಷ ಪಾರಂಪರಿಕ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಪಾರಂಪರಿಕ ವೈದ್ಯರು ತಮ್ಮ ಹೆಸರು, ಪೂರ್ಣ ವಿಳಾಸ, ಪಾರಂಪರಿಕ ಗುರುವಿನಲ್ಲಿ ಅಭ್ಯಾಸ, ಗಮನಾರ್ಹ ಸೇವೆ ಹಾಗೂ ಸಾಧನೆಗಳ ಕುರಿತು ಸಮಗ್ರ ದಾಖಲಾತಿಗಳ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ಸಮಿತಿ, ಅಧ್ಯಕ್ಷರು, ಸಾಮಾಜಿಕ ಅರಣ್ಯ ವಿಭಾಗ, ಕೆಇಬಿ ರಸ್ತೆ, ಐಎಂಎ ಹಾಲ್ ಎದುರುಗಡೆ ಬೀದರ್, ಈ ವಿಳಾಸಕ್ಕೆ ತಲುಪಿಸಬೇಕಿದೆ. ಅರ್ಜಿಯು ಫೆ.22 ರ ಒಳಗೆ ಸಲ್ಲಿಸಲು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.