ಕೆಪಿಎಸ್‌ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿನ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ಮತ್ತೆ ತಪ್ಪುಗಳಾಗಿದ್ದು, ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅಭ್ಯರ್ಥಿಗಳ ನ್ಯಾಯ ದೊರಕಿಸಲು ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ಪ್ರಶ್ನೆಪತ್ರಿಕೆಗಳಲ್ಲಿ ಮತ್ತೆ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಫೆಬ್ರವರಿ 18ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ ತಿಳಿಸಿದ್ದಾರೆ.
ಪ್ರತಿಭಟನೆಯ ಪೂರ್ವಭಾವಿಯಾಗಿ ನಡೆದ ‘ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. “ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ತೊಂದರೆ ಆದಾಗ ಅದನ್ನ ಸರಿ ಪಡಿಸಬೇಕೆಂದು ಕರವೇ ಹೋರಾಟ ಮಾಡಿತ್ತು. ‘ಈ ದೇಶದಲ್ಲಿ ಎನೇ ಪಡಿಬೇಕು ಎಂದರೂ ಹೋರಾಟದ ಮೂಲಕವೇ ಆಗಬೇಕೆಂದು ಅಂಬೇಡ್ಕರ್’ ಹೇಳಿದ್ದರು. ಅದು ಇಂದಿಗೂ ಅದೇ ಪರಿಸ್ಥಿತಿ ಇದೆ. ಕೆಪಿಎಸ್‌ಸಿ ಈ ಹಿಂದೆ, 2024ರ ಆಗಸ್ಟ್‌ನಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ 57 ಪ್ರಶ್ನೆಗಳು ತಪ್ಪಾಗಿದ್ದವು. ಆ ಬಳಿಕ, 2024ರ ಡಿಸೆಂಬರ್‌ನಲ್ಲಿ ಮರುಪರೀಕ್ಷೆ ನಡೆಸಿತ್ತು. ಆ ಪರೀಕ್ಷೆಯಲ್ಲಿಯೂ 36 ಪ್ರಶ್ನೆಗಳು ತಪ್ಪಾಗಿವೆ. ಪದೇ-ಪದೇ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕೆಪಿಎಸ್‌ಸಿಯ ತಪ್ಪನ್ನು ತಿದ್ದಿ-ತೀಡಬೇಕಾದ್ದು ಸರ್ಕಾರ. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆಗಸ್ಟ್‌ನಲ್ಲಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳಾಗಿದ್ದಾಗಲೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸಿದ್ದೆವು. ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದರು. ಆದರೂ, ತಪ್ಪುಗಳು ಪುನರಾವರ್ತನೆಯಾಗಿವೆ. ಆದರೆ, ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗಿಲ್ಲ. ಈ ಸರ್ಕಾರ ಮತ್ತು ಕೆಪಿಎಸ್‌ಸಿ ಯಾರಿಗೋಸ್ಕರ ಕೆಲಸ ಮಾಡುತ್ತಿವೆ” ಎಂದು ಪ್ರಶ್ನಿಸಿದರು.
“ಆಗಸ್ಟ್‌ನಲ್ಲಿ ಪರೀಕ್ಷೆ ಬರೆದವರಿಗಿಂತ ಡಿಸೆಂಬರ್‌ನಲ್ಲಿ ಮರುಪರೀಕ್ಷೆ ಬರೆದು ಪಾಸ್ ಆದವರ ಸಂಖ್ಯೆ ಹೆಚ್ಚಾಗಿದೆಯೆಂದು ಹೇಳುತ್ತಾರೆ. ಕೆಪಿಎಸ್‌ಸಿ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮುಂದೊಂದು ದಿನ ಕೆಪಿಎಸ್‌ಸಿ ಭ್ರಷ್ಟಾಚಾರದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವ ಪರಿಸ್ಥಿತಿ ಬರುತ್ತದೆ. ಅಲ್ಲಿ ಇರುವ ಎಲ್ಲರೂ ಜೈಲಿಗೆ ಹೋಗಿ ಮುದ್ದೆ ಮುರಿಯುವ ಪರಿಸ್ಥಿತಿ ಬರುತ್ತದೆ. ಕರ್ನಾಟಕದ ಮಕ್ಕಳಿಗೆ ಆಗಿರುವ ಅನ್ಯಾಯ ಸರಿಪಡಿಸಲೇಬೇಕು” ಎಂದು ಆಗ್ರಹಿಸಿದ್ದಾರೆ.
“ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಕನ್ನಡರಾಮಯ್ಯ ಎಂಬುದನ್ನು ಸಾಬೀತುಪಡಿಸಬೇಕು. ಕೆಪಿಎಸ್‌ಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಫಲಿತಾಂಶ ತಡೆ ಹಿಡಿದು ಮರುಪರೀಕ್ಷೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
”ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿ ತೇಜಸ್ ಮಾತನಾಡಿ, “ಈ ಹಿಂದೆ ಟ್ರಾನ್ಸ್‌ಲೇಷನ್ ಎರರ್ ಎಂಬ ಕಾರಣ ನೀಡಲಾಗಿತ್ತು. ಮರು ಪರೀಕ್ಷೆಗೆ ಮುಖ್ಯಮಂತ್ರಿ ಆದೇಶಿಸಿದ್ದರು. ಆದರೆ, ಈಗಲೂ ಕೂಡ ಟ್ರಾನ್ಸ್‌ಲೇಷನ್ ಎರರ್ ಆಗಿದೆ. ಇಂಗ್ಲಿಷ್ ಪ್ರಶ್ನೆಯನ್ನು ಅತ್ಯಂತ ಕೆಟ್ಟದಾಗಿ ಕನ್ನಡಕ್ಕೆ ಟ್ರಾನ್ಸ್‌ಲೇಟ್ ಮಾಡಲಾಗುತ್ತದೆ. ಈ ವಿಚಾರವನ್ನ ಜಡ್ಜ್ ಮುಂದೆ ತೆಗೆದುಕೊಂಡು ಹೋದಾಗ, ಅವರು ಕೂಡ ನೋಡಿ ನಕ್ಕರು. ಕನ್ನಡ ಪ್ರಶ್ನೆಗಳಲ್ಲಾಗುತ್ತಿರುವ ತಪ್ಪುಗಳ ಬಗ್ಗೆ ಪುರುಷೋತ್ತನ ಬಿಳಿಮಲೆ, ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ವಿದ್ಯಾರ್ಥಿಗಳು ಒಪ್ಪಿಕೊಳ್ಳುವ ವರೆಗೂ ಫಲಿತಾಂಶ ಪ್ರಕಟಿಸಬಾರದು” ಎಂದು ಆಗ್ರಹಿಸಿದರು.
“ಕೆಪಿಎಸ್‌ಸಿ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಕೆಪಿಎಸ್‌ಸಿ ಉತ್ತರ ನೀಡುವುದಿಲ್ಲ. ತಮಗೆ ಬೇಕಿರುವ ವಿಚಾರಗಳ ಬಗ್ಗೆ ಮಾತ್ರವೇ ಉತ್ತರಿಸುತ್ತಾರೆ. ರಾತ್ರೋರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಅದರಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿಗಳ ಸಹಿಯೂ ಇರುವುದಿಲ್ಲ. ನಾನು ಇಂಗ್ಲಿಷ್ ಕಲಿತಿದ್ದೇನೆ. ಇಂಗ್ಲಿಷ್ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು, ಕನ್ನಡದಲ್ಲಿ ಉತ್ತರಿಸಿದ್ದೇನೆ. ಪಾಸ್ ಆಗಿದ್ದೇನೆ. ನಮ್ಮ ಕನ್ನಡವನ್ನು ನಾವು ಬೆಳೆಸಬೇಕು. ಕರ್ನಾಟಕದಲ್ಲಿ ಇಂಗ್ಲಿಷ್ ಅಂತಿಮವಲ್ಲ. ಕರ್ನಾಟಕದಲ್ಲಿ ಕನ್ನಡವೇ ಅಂತಿಮವಾಗಬೇಕು. ಎಕ್ಸಾಮೀನೇಷನ್ ಜ್ಣಾನೇಂದ್ರ ಕುಮಾರ್ ಅವರನ್ನು ಅಮಾನತು ಮಾಡಿ, ದಕ್ಷ ಅಧಿಕಾರಿಯನ್ನು ನೇಮಿಸಬೇಕು” ಎಂದರು.