ಬಿದ್ರಿ ಕಲಾವಿದ ಮುಹಮ್ಮದ್ ಅಬ್ದುಲ್ ರೌಫ್ (60) ಅವರು ಶನಿವಾರ (ಫೆ.15) ರಾತ್ರಿ ಹೃದಯಘಾತದಿಂದ ನಿಧನರಾದರು.
ಮೃತರಿಗೆ ಪತ್ನಿ, ನಾಲ್ವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ. ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.
ಕೇಂದ್ರ ಸರ್ಕಾರ ಜಾರಿ ತಂದಿರುವ ʼಗುರುಕುಲʼ ಯೋಜನೆಯ ಭಾಗವಾಗಿ 1,000ಕ್ಕೂ ಹೆಚ್ಚು ಯುವಕರಿಗೆ ಬಿದ್ರಿ ಕಲೆಯ ತರಬೇತಿ ನೀಡಿದರು. ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮಾ ಅವರು ಅಮೇರಿಕಾ ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ ವೇಳೆ ಅಪರೂಪದ ಉಡುಗೊರೆಗಳನ್ನು ನೀಡಲಾಗಿತ್ತು. ಅದರಲ್ಲಿ ಮುಹಮ್ಮದ್ ರೌಫ್ ಅವರು ಕೆತ್ತನೆ ಮಾಡಿದ ಬಿದ್ರಿ ಕಲಾಕೃತಿ ಕೂಡ ಇತ್ತು.

ಕಲಾವಿದ ಮುಹಮ್ಮದ್ ಅಬ್ದುಲ್ ರೌಫ್ ಅವರು ದೇಶದ ಇಬ್ಬರು ರಾಷ್ಟ್ರಪತಿಗಳಿಂದ ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದರು. ಅಂದಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ರೌಫ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದರು. 2015ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರೌಫ್ ಅವರಿಗೆ ʼಶಿಲ್ಪಗುರುʼ ಪ್ರಶಸ್ತಿ ನೀಡಿ ಸತ್ಕರಿಸಿದ್ದರು.