ರೈತ ಸಂಘದ ಬ್ಯಾಂಕುಗಳ ಸಾಲ ಬಾಕಿ ತೀರಿಸುವ ವಿನೂತನ ಪ್ರಯೋಗವೊಂದು ಚಿತ್ರದುರ್ಗ ರೈತ ಸಂಘದ ವತಿಯಿಂದ ಹೊಳಲ್ಕೆರೆ ತಾಲೂಕಿನ ಶಿವಗಂಗ ಗ್ರಾಮೀಣ ಬ್ಯಾಂಕ್ ಘಟಕದಲ್ಲಿ ನಡೆದಿದ್ದು ರೈತರ ಬೇಡಿಕೆಯಾದ ಸಿ2ಪ್ಲಸ್50 ಬೆಲೆಯಲ್ಲಿ ಸಾಲುತೀರುವಳಿಗೆ ರೈತರು ಬೆಳೆದ ಬೆಳೆಯನ್ನು ಬ್ಯಾಂಕಿಗೆ ಪೂರೈಸಿ, ಸಾಲ ತಿಳುವಳಿ ಮಾಡಿಕೊಳ್ಳಲು ಆಗ್ರಹಿಸಿದೆ.
ಹಲವು ವರ್ಷಗಳಿಂದ ರೈತಸಂಘ, ರೈತ ಹೋರಾಟಗಾರರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆಯಾದ ಡಾ.ಸ್ವಾಮಿನಾಥನ್ ವರದಿಯಂತೆ ಸಿ2ಪ್ಲಸ್50 ಬೆಂಬಲ ಬೆಲೆಯನ್ನು ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರಗಳು ಇದನ್ನು ಜಾರಿ ಮಾಡುವ ಕಡೆಗೆ ಗಮನ ಹರಿಸಿಲ್ಲ. ಆದರೂ ಪಟ್ಟು ಬಿಡದೆ ಚಿತ್ರದುರ್ಗದ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಘಟಕ ರಾಜ್ಯ ಕಾರ್ಯಧ್ಯಕ್ಷ ಈಚಗಟ್ಟ ಸಿದ್ವೀರಪ್ಪನವರ ನೇತೃತ್ವದಲ್ಲಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ರೈತರ ಸಾಲಕ್ಕೆ ಬದಲಾಗಿ ಸಿ2ಪ್ಲಸ್50 ಬೆಳೆಯಲ್ಲಿ ಟಿ ಎಮ್ಮಿಗನೂರಿನ ರೈತ ರಾಮಲಿಂಗಪ್ಪ ಬೆಳೆದಿದ್ದ ಐದು ಕ್ವಿಂಟಲ್ ಮೆಕ್ಕೆಜೋಳವನ್ನು ಸುಮಾರು ಮೂವತ್ತೈದು ಸಾವಿರ ರೂಪಾಯಿ ಸಾಲಕ್ಕೆ ಬೆಳೆಯನ್ನು ಪೂರೈಸಿ ಎಲ್ಲಾ ಬ್ಯಾಂಕ್ ಗಳು ಇದೇ ರೀತಿ ರೈತರ ಬೆಳೆಗಳನ್ನು ಬೆಂಬಲ ಬೆಲೆಗೆ ಖರೀದಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ರಾಜ್ಯ ಕಾರ್ಯಧ್ಯಕ್ಷ ಈಚಗಟ್ಟದ ಸಿದ್ಧವೀರಪ್ಪ ಮಾತನಾಡಿ, “ಅತಿವೃಷ್ಟಿಯಿಂದಾಗಿ ಈ ಬಾರಿ ರೈತ ಬೆಳೆ ನಷ್ಟಕ್ಕೆ ಗುರಿಯಾಗಿದ್ದಾನೆ. ಈ ಸಮಯದಲ್ಲಿ ಸರ್ಕಾರ ಮತ್ತು ಬ್ಯಾಂಕುಗಳು ಅವನ ಸಹಾಯಕ್ಕೆ ನಿಲ್ಲಬೇಕು. ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿಸಬೇಕು. ರೈತರು ಸಾಲ ತೀರಿಸಲು ಸಿದ್ದರಿದ್ದೇವೆ. ಆದರೆ ಸರ್ಕಾರದ ವಿವೇಕಿ ನೀತಿಗಳಿಂದ ನಮಗೆ ಬೆಂಬಲ ಬೆಲೆ ದೊರೆಯದೆ ಕಾಲಕಾಲಕ್ಕೆ ಬೆಳೆಗಳ ಬೆಲೆ ಪರಿಷ್ಕರಣೆಯಾಗದೆ ನಷ್ಟಕ್ಕೆ ಗುರಿಯಾಗುತ್ತಿದ್ದಾನೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಮುಖಿಯಾಗಿ ಕಾಲಕ್ಕೆ ಪರಿಷ್ಕರಣೆಯಾಗುತ್ತಿವೆ. ಅದರ ರೈತನ ಬೆಳೆಗಳಿಗೆ ಮಾತ್ರ ಬೆಲೆಗಳು ಪರಿಷ್ಕರಣೆಯಾಗುತ್ತಿಲ್ಲ. ಇದರಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸರ್ಕಾರದ ಅವಿವೇಕಿ ನಿರ್ಧಾರಗಳು ಕಾರಣವಾಗಿದೆ. ಹಾಗಾಗಿ ಡಾ.ಸ್ವಾಮಿನಾಥನ್ ಬೆಂಬಲ ಆಯೋಗದ ಮತ್ತು ಸರ್ಕಾರವೇ ನೇಮಿಸಿದ್ದ ಪ್ರಕಾಶ್ ಕಮ್ಮರಡಿ ಆಯೋಗದ ಬೆಲೆ ನಿಗದಿಯಂತೆ ಬೆಳೆದ ಬೆಳೆಯನ್ನು ಗ್ರಾಮೀಣ ಬ್ಯಾಂಕ್ ಗೆ ಪೂರೈಸುತ್ತಿದ್ದೇವೆ. ಇದನ್ನು ಸಾಲಕ್ಕೆ ವಜಾ ಮಾಡಿಕೊಂಡು ತೀರುವಳಿ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಾಗ್ದಾನ ಮರೆತ ಪ್ರಧಾನಿ ಮೋದಿ, ಭದ್ರಾ ಮೇಲ್ದಂಡೆ ಹಣಬಿಡುಗಡೆ ಮಾಡಿಸಲು ಸಂಸದರಿಗೆ ರೈತಸಂಘ, ಡಿಎಸ್ಎಸ್ ಆಗ್ರಹ.
ಈ ವೇಳೆ ರೈತ ಸಂಘದ ಮುಖಂಡರಾದ ರಂಗಸ್ವಾಮಿ, ಸತೀಶ್, ರಾಮಲಿಂಗಪ್ಪ ಸೇರಿದಂತೆ ನೂರಾರು ರೈತರು ಪೊಲೀಸ್ ವೃತ್ತ ನಿರೀಕ್ಷಕರು, ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.
