ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಸೇವೆ ಹಾಗೂ ಸಾಧನೆ ಮಾಡಿದ ಎಲ್ಲಾ ಮುಖ್ಯಮಂತ್ರಿಗಳ ಕೊಡುಗೆ ಕೇಂದ್ರೀಕರಿಸುವ ಕೆಲಸವಾಗಬೇಕು ಎಂದು ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನ ದಿ ಇನ್ಸ್‌ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಹಾಲ್ ನಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ “ಧ್ವನಿ ಕೊಟ್ಟ ಧಣಿ” ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, “ಸಂಶೋಧನ ಕೇಂದ್ರ ಸ್ಥಾಪನೆಯಾಗಬೇಕು. ವಿಧಾನ ಪರಿಷತ್ ಸದಸ್ಯ ಡಾ ತಿಮ್ಮಯ್ಯ ಅಧ್ಯಕ್ಷರಾಗಿರುವ ಅರಸು ಚಾರಿಟಬಲ್ ಟ್ರಸ್ಟ್ ಗೆ ಸರ್ಕಾರದಿಂದ 10 ಎಕರೆ ಸಂಶೋಧನಾ ಕೇಂದ್ರ ತೆರೆಯಲು ಸರ್ಕಾರ ಜಾಗ ನೀಡಬೇಕು. ಡಿ ದೇವರಾಜ ಅರಸು, ಹೆಚ್ ಡಿ ದೇವೇಗೌಡ, ಕೆಂಗಲ್ ಹನುಂತಯ್ಯ, ವೀರೇಂದ್ರ ಪಾಟೀಲ್, ವೀರಪ್ಪಮೊಯಿಲಿ, ಬಂಗಾರಪ್ಪ ಈಗಿನ ಸಿದ್ದರಾಮಯ್ಯವರೆಗಿನ ಎಲ್ಲಾ ಮುಖ್ಯಮಂತ್ರಿಗಳು ರಾಜ್ಯಕ್ಕೆ ನೀಡಿರುವ ಭಾಗ್ಯ ಹಾಗೂ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ. ಮಾತ್ರವಲ್ಲದೆ, ಈ ಬಗ್ಗೆ ರಾಜಕೀಯ ಚರ್ಚೆ, ವಿಮರ್ಶೆ ನಡೆಸುವ ಕೆಲಸವನ್ನು ಪಕ್ಷಾತೀತವಾಗಿ ನಡೆಸುವ ಮೂಲಕ ಹಿಂದಿನ ಚಿಂತನೆಗೆ ಮರುಹುಟ್ಟು ಕೊಡುವ ಕೆಲಸ ಆಗಬೇಕಿದೆ” ಎಂದರು.
“ನಮ್ಮನ್ನಾಳಿದ ನಾಯಕರು ಉಳುವವನೇ ಭೂಮಿ ಒಡೆಯ, ರಾಜಕೀಯ ಮೀಸಲಾತಿ ಸೇರಿದಂತೆ ಅನೇಕ ಭಾಗ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಕೊಡುಗೆಗಳನ್ನು ಶಾಶ್ವತವಾಗಿ ಸ್ಮರಿಸಬೇಕಿದೆ. ಅರಸು ಚಾರಿಟಬಲ್ ಟ್ರಸ್ಟ್ ಮೂಲಕ ಅರಸು ಅವರ ಸಾಮಾಜಿಕ ಚಿಂತನೆಗಳು ನಿರಂತರವಾಗಿ ಚರ್ಚೆಯಾಗಬೇಕು. ಮುಂದೆ ಯಾವುದೇ ಸರ್ಕಾರ ಇದ್ದರೂ ಸಹ ಜನಸಾಮಾನ್ಯರಿಗೆ ಯಾವ ರೀತಿ ಆಡಳಿತ ನೀಡಬೇಕೆಂಬುದು ಸಹ ಇಲ್ಲೇ ಚರ್ಚೆ ಆಗಬೇಕು. ರಾಜಕೀಯ ಮುಖಂಡರು, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಇನ್ನಿತರ ಬುದ್ದಿ ಜೀವಿಗಳೊಂದಿಗೆ ಮುಕ್ತ ಸಂವಾದದ ಚರ್ಚೆ ಆಗಬೇಕು” ಎಂದು ಸಲಹೆ ನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂರಜ್ ಹೆಗಡೆ ಮಾತನಾಡಿ, “ರಾಜಕೀಯದಲ್ಲಿ ಪ್ರಾಮಾಣಿಕರು, ಉತ್ತಮರು ಬರಬೇಕಿದೆ. ಅರಸು ಮೊಮ್ಮಗನಾಗಿ ನಾನು ಅವರ ಬಗ್ಗೆ ಮಾತನಾಡುವುದು ಸರಿಯಿಲ್ಲ. ಅವರು ನಿಧನರಾದ ಬಳಿಕ ಜನರೆ ಅವರ ಕುರಿತು ಮಾತನಾಡುತ್ತಿರುವುದು ಸಂತಸ ತಂದಿದೆ” ಎಂದರು.
ಕಂಠೀರವ ಪ್ರಾಧಿಕಾರ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಮಾತನಾಡಿ, “ದೇವರಾಜ ಅರಸು ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಆದರೆ, ಅವರು ಸಾವನ್ನಪ್ಪಿದ ಬಳಿಕ ಅವರ ಪತ್ನಿ ಮಕ್ಕಳಿಗಾಗಿ ಎರಡು ನಿವೇಶನವನ್ನಾದರೂ ಮಾಡಿ ಎಂದು ಕೇಳಿಕೊಂಡಿದ್ದರು. ಆದರೆ, ಅರಸರು ಅದೂ ಸಹ ಮಾಡಿರಲಿಲ್ಲ. ಆಗ ಅವರ ಪ್ರಾಮಾಣಿಕತೆ ಎಲ್ಲರ ಅರಿವಿಗೆ ಬಂತು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ
ಕಾರ್ಯಕ್ರಮದಲ್ಲಿ ಪತ್ರಕರ್ತ ಟಿ ಗುರುರಾಜ್, ರಮೇಶ್ ಸುರ್ಖೆ, ಹಿರೆನೆಲ್ಲೂರು ಶಿವನ್, ಮಾಲತೇಶ್ ಅರಸ್, ಅಖಿಲ ಭಾರತ ಅಂಚೆ ನೌಕರರ ಸಂಘದ ಅಧ್ಯಕ್ಷ ಎನ್ ಕೃಷ್ಣ, ಯೋಗ ಶಿಕ್ಷಕಿ ಪ್ರೇಮಾ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸೇವಾ ಟ್ರಸ್ಟ್ ಅಧ್ಯಕ್ಷ ಡಾ ಎಂ ಜಿ ಆರ್ ಅರಸ್, ಉಪಾಧ್ಯಕ್ಷ ಎಚ್ ಎಂ ಟಿ ಲಿಂಗರಾಜ ಅರಸ್, ಸಂಸ್ಥಾಪಕ ಅಧ್ಯಕ್ಷ ಅಮರನಾಥ ಅರಸ್ ಇನ್ನಿತರರು ಇದ್ದರು.
