ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಕೆರಳಿರುವ ಎಐಸಿಸಿ ವರಿಷ್ಠರು ರಾಜ್ಯದ ನಾಯಕರಿಗೆ ಖಡಕ್ ಸೂಚನೆ ನೀಡಿದ್ದರೂ ಸಚಿವರು ಪದೇಪದೆ ಉಲ್ಲಂಘಿಸಿ ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕಡೆಗಣಿಸಿ ಬೆಳಗಾವಿಯಲ್ಲಿ ಸೋಮವಾರ ಮಾತನಾಡಿ, “ಈಗಷ್ಟೇ ಅಲ್ಲ; ಮುಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಬಹುದು. ಇದರಲ್ಲಿ ತಪ್ಪೇನಿದೆ” ಎಂದು ಕೇಳಿದ್ದಾರೆ.
“ಸಿ.ಎಂ ವಿಚಾರ ನಾನು ಭವಿಷ್ಯ ನುಡಿಯುವಂಥದ್ದಲ್ಲ. ಸಿ.ಎಂ ಸ್ಥಾನದಲ್ಲಿ ಯಾರನ್ನು ಮುಂದುವರಿಸಬೇಕು ಮತ್ತು ಬದಲಿಸಬೇಕು ಎಂಬುದನ್ನು ಸಿಎಲ್‌ಪಿ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಪದೇಪದೆ ಚರ್ಚೆಯಾಗುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮದವರೇ ಪದೇಪದೆ ಪ್ರಶ್ನೆ ಕೇಳಿ ಚರ್ಚೆಯಾಗುತ್ತಿದೆ ಎನ್ನುತ್ತಿದ್ದೀರಿ” ಎಂದರು.
ಡಿಜಿಟಲ್ ತೂಕದ ಯಂತ್ರ
“ರಾಜ್ಯದಾದ್ಯಂತ ಒಟ್ಟು 72 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬಿನ ತೂಕ ಮಾಡಲು ಅನಲಾಗ್ ತೂಕದ ಯಂತ್ರಗಳನ್ನು ಬಳಸಲಾಗುತ್ತಿತ್ತು. ಈಗ ಡಿಜಿಟಲ್ ತೂಕದ ಯಂತ್ರ ಬಳಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದಲೇ ತೂಕದ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಎರಡು ಮೊಬೈಲ್ ತೂಕದ ಯಂತ್ರಗಳನ್ನು ಅಳವಡಿಸುತ್ತೇವೆ. ಸ್ಥಳಾವಕಾಶದ ಲಭ್ಯತೆ ಆಧರಿಸಿ ನಂತರದ ದಿನಗಳಲ್ಲಿ ಕಾರ್ಖಾನೆಗಳಲ್ಲಿ ಐದರಿಂದ ಆರು ಅಳವಡಿಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
“ಈ ವರ್ಷ ರಾಜ್ಯದಾದ್ಯಂತ ಕಬ್ಬು ನುರಿಸುವಿಕೆ ಪ್ರಮಾಣ, ಕಳೆದ ವರ್ಷಕ್ಕಿಂತ ಕಡಿಮೆ ಇರಲಿದೆ. ಈ ವರ್ಷ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆಯಿದೆ. ಹಿಂದಿನ ವರ್ಷ ಬರಗಾಲವಿದ್ದ ಕಾರಣ, ಇಳುವರಿ ಮತ್ತು ಕಬ್ಬು ನುರಿಸುವಿಕೆ ಮೇಲೆ ಪರಿಣಾಮ ಬೀರಿದೆ. ಮುಂದಿನ ವರ್ಷ ನಾವು ಕಬ್ಬು ನುರಿಸುವ ಪ್ರಮಾಣದಲ್ಲಿ ಗುರಿ ಮೀರುವ ನಿರೀಕ್ಷೆಯಿದೆ” ಎಂದು ಹೇಳಿದರು.
“ಕೆಲವು ಸಕ್ಕರೆ ಕಾರ್ಖಾನೆಗಳು ಶೇ 80ರಷ್ಟು ಕಬ್ಬಿನ್ ಬಿಲ್ ಪಾವತಿಸಿದ್ದರೆ, ಇನ್ನು ಕೆಲವು ಕಾರ್ಖಾನೆಗಳು ಶೇ 75ರವರೆಗೆ ಪಾವತಿಸಿವೆ. ಒಂದು ಭಾಗ ಮಾತ್ರ ಶೇ 55ರಿಂದ 60ರಷ್ಟು ಪಾವತಿಸಿದೆ. ರೈತರ ಎಲ್ಲ ಬಾಕಿ ಬಿಲ್‌ಗಳ ಶೀಘ್ರವೇ ಪಾವತಿಯಾಗಲಿವೆ ಎಂದು ಭಾವಿಸುತ್ತೇನೆ” ಎಂದರು.