ಕೆಆರ್‌ಎಸ್‌ನಿಂದ ಸುಮಾರು 2 ಕಿಮೀ ಮೇಲ್ಭಾಗದಲ್ಲಿರುವ ಮೈಸೂರಿಗೆ ಶಾಶ್ವತವಾಗಿ ನೀರು ಪೂರೈಸುವ ಹಳೇ ಉಂಡವಾಡಿ ನೀರು ಸರಬರಾಜು ಯೋಜನೆ ಸ್ಥಾವರಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, “ಕೆಆರ್‌ಎಸ್ ಅಣೆಕಟ್ಟಿನ ಹಿನ್ನೀರು ಪ್ರದೇಶದಿಂದ ನೇರವಾಗಿ ಮೈಸೂರು ಹಾಗೂ 92 ಗ್ರಾಮಗಳಿಗೆ ನೀರು ಪೂರೈಸುವ ಉಂಡುವಾಡಿ ನೀರಾವರಿ ಯೋಜನೆ ಇದಾಗಿದೆ. ಈ ಪ್ರದೇಶದಾದ್ಯಂತ ಹೆಚ್ಚು ಪರಿಣಾಮಕಾರಿ ನೀರು ಸರಬರಾಜು ವಿತರಣೆಗಾಗಿ ಈ ಯೋಜನೆಗಳನ್ನು ಜೋಡಿಸಬೇಕು” ಎಂದು ನಿರ್ದೇಶನ ನೀಡಿದರು.
“ಕಬಿನಿ ಕುಡಿಯುವ ನೀರಿನ ಯೋಜನೆಯ 2ನೇ ಹಂತ ಶೇ.90ರಷ್ಟು ಪೂರ್ಣಗೊಂಡಿದೆ. ಪೂರ್ಣಗೊಂಡ ನಂತರ, ಇದು ಈ ವರ್ಷದ ಕೊನೆಯಲ್ಲಿ ದಿನಕ್ಕೆ ಹೆಚ್ಚುವರಿ 60 ಮಿಲಿಯನ್ ಲೀಟರ್(ಎಂಎಲ್‌ಡಿ) ಪೂರೈಸುತ್ತದೆ. ಕಬಿನಿ ನದಿಯಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ” ಎಂದರು.
ಮಹದೇವಪ್ಪ ಅವರು ಅಧಿಕಾರಿಗಳೊಂದಿಗೆ ಬಿದರಗೋಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಮಗಾರಿಯನ್ನು ಪರಿಶೀಲಿಸಿ, “ಇದು ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆಗಸ್ಟ್ ವೇಳೆಗೆ ನೀರು ವಿತರಣೆ ಪ್ರಾರಂಭವಾಗಲಿದೆ. ಈ ಯೋಜನೆಯನ್ನು ಮೊದಲು 2008ರಲ್ಲಿ ರೂಪಿಸಲಾಯಿತು. ಇದನ್ನು ಮೂರು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು 184 ಎಂಎಲ್‌ಡಿ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ, ನೀರು ಶುದ್ಧೀಕರಣ ಘಟಕಗಳ ನಿರ್ಮಾಣ ಮತ್ತು ಪಂಪಿಂಗ್ ಹಾಗೂ ವಿದ್ಯುತ್ ಉಪಕರಣಗಳ ಸ್ಥಾಪನೆಯ ಕೆಲಸ ನಡೆಯುತ್ತಿದೆ. ಈ ಯೋಜನೆಯು ನೀರು ಸರಬರಾಜು ಸಾಮರ್ಥ್ಯವನ್ನು 120 ಎಂಎಲ್‌ಡಿಗೆ ಹೆಚ್ಚಿಸುವ ನಿರೀಕ್ಷೆಯಿದ್ದು, ₹38 ಕೋಟಿ ವೆಚ್ಚದಲ್ಲಿ ಕಬಿನಿ ಯೋಜನೆಯ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ” ಎಂದು ಹೇಳಿದರು.
“ಕೆಆರ್‌ಎಸ್ ಅಣೆಕಟ್ಟಿನ ಹಿನ್ನೀರಿನಿಂದ ಮೈಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಸುತ್ತಮುತ್ತಲಿನ 92 ಗ್ರಾಮಗಳಿಗೆ ನೀರು ಒದಗಿಸುವ ಉದ್ದೇಶದ ಹಳೇ ಉಂಡುವಾಡಿ ಯೋಜನೆಯೂ ಸುಗಮವಾಗಿ ನಡೆಯುತ್ತಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಸಂಗ್ರಹಣಾ ಮಟ್ಟವು 50 ಅಡಿಗೆ ಇಳಿದರೂ ಅಣೆಕಟ್ಟಿನ ಹಿನ್ನೀರಿನಿಂದ ನೀರನ್ನು ಹೊರತೆಗೆಯಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೆಚ್ಚುವರಿ 150 ಎಂಎಲ್‌ಡಿ ನೀರನ್ನು ಒದಗಿಸುತ್ತದೆ. ಒಟ್ಟು ₹595 ಕೋಟಿ ವೆಚ್ಚದಲ್ಲಿ ಹಳೇ ಉಂಡುವಾಡಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಭದ್ರಾ ನದಿಗೆ ಈಜಲು ಹೋಗಿ ಯುವಕ ಸಾವು
“ಪ್ರಸ್ತುತ, ಮೈಸೂರು 306 ಎಂಎಲ್‌ಡಿ ನೀರನ್ನು ಪಡೆಯುತ್ತಿದ್ದು, ಇದು ಕೈಗಾರಿಕಾ ಅಗತ್ಯಗಳು ಸೇರಿದಂತೆ ಸುಮಾರು 13ರಿಂದ 14 ಲಕ್ಷ ಜನಸಂಖ್ಯೆಗೆ ಸಾಕಾಗುತ್ತದೆ. ಆದರೂ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ನೀರು ಸರಬರಾಜಿಗೆ ಬೇಡಿಕೆ ಇದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಟಿ ದೇವೆಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
