ದೇಶದಾದ್ಯಂತ ಕೋವಿಡ್ ಲಸಿಕೆ ಪಡೆದವರ ವೈಯಕ್ತಿಕ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಟಿಎಂಸಿ ನಾಯಕ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, “ದೇಶದಲ್ಲಿ ಲಸಿಕೆ ಪಡೆದುಕೊಂಡ ಹಲವು ವಿರೋಧ ಪಕ್ಷದ ನಾಯಕರು ಸೇರಿದಂತೆ ಪತ್ರಕರ್ತರು ಹಾಗೂ ಗಣ್ಯ ವ್ಯಕ್ತಿಗಳ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ , ಪಾಸ್‌ಪೋರ್ಟ್ ಸಂಖ್ಯೆ, ಮತದಾನದ ಗುರುತಿನ ಸಂಖ್ಯೆ ಹಾಗೂ ಕುಟುಂಬ ಸದಸ್ಯರ ಮಾಹಿತಿಗಳನ್ನು ಸೋರಿಕೆ ಮಾಡಲಾಗಿದೆ” ಎಂದು ಸ್ಕ್ರೀನ್‌ಶಾಟ್‌ನೊಂದಿಗೆ ಹಂಚಿಕೊಂಡಿದ್ದಾರೆ.
ರಾಜ್ಯಸಭಾ ಸಂಸದ ಹಾಗೂ ಟಿಎಂಸಿ ನಾಯಕ ಡೆರೆಕ್ ಓಬ್ರಿಯನ್, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್ ಹಾಗೂ ಜೈರಾಂ ರಮೇಶ್ ಸೇರಿದಂತೆ ಹಲವರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದನ್ನು ಅವರು ಸರಣಿ ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭವಿಷ್ಯದಲ್ಲಿ ತಮಿಳರಿಗೆ ಪ್ರಧಾನಿ ಪಟ್ಟ; ಅಮಿತ್ ಶಾ ಭರವಸೆ
ಪತ್ರಕರ್ತದ ರಾಜ್‌ದೀಪ್ ಸರ್‌ದೇಸಾಯಿ, ಬರ್ಖಾದತ್, ಧನ್ಯಾ ರಾಜೇಂದ್ರನ್ ಮುಂತಾದವರ ಮಾಹಿತಿಗಳೂ ಸೋರಿಕೆಯಾಗಿವೆ. ನಮ್ಮಲ್ಲಿ ಬಲಿಷ್ಠವಾದ ಡಾಟಾ ಭದ್ರತೆ ಇದೆ ಎಂದು ಹೇಳಿಕೊಳ್ಳುವ ಸರಕಾರವು, ಈ ಮಾಹಿತಿ ಹೇಗೆ ಸೋರಿಕೆಯಾಗಿದೆ ಎಂದು ಹೇಳಬಹುದೇ? ಇಂತಹಾ ಸೂಕ್ಷ್ಮ ಮಾಹಿತಿ ಇಷ್ಟು ಸುಲಭದಲ್ಲಿ ಸೋರಿಕೆಯಾಗಿದ್ದು ಹೇಗೆ?” ಎಂದು ಸಾಕೇತ್ ಗೋಖಲೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
“ಲಸಿಕೆ ಪಡೆದ ಎಲ್ಲ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗುವ ಮೂಲಕ ನರೇಂದ್ರ ಮೋದಿ ಸರ್ಕಾರ ಡೇಟಾ ಉಲ್ಲಂಘನೆ ಮಾಡಿದೆ. ಗೃಹ ಸಚಿವಾಲಯ ಸೇರಿದಂತೆ ಮೋದಿ ಸರ್ಕಾರಕ್ಕೆ ಈ ಸೋರಿಕೆಯ ಬಗ್ಗೆ ತಿಳಿದಿರುತ್ತದೆ. ಆದರೆ ಡೇಟಾ ಉಲ್ಲಂಘನೆಯ ಬಗ್ಗೆ ಭಾರತೀಯರಿಗೆ ಏಕೆ ಮಾಹಿತಿ ನೀಡಲಾಗಿಲ್ಲ? ವೆಬ್‌ಸೈಟ್‌ನಲ್ಲಿ ಪ್ರವೇಶ ಮಾಡಲು ಕೇಂದ್ರ ಸರ್ಕಾರ ಯಾರಿಗೆ ಅನುಮತಿ ನೀಡಿದೆ” ಎಂದು ಪ್ರಶ್ನಿಸಿದ ಗೋಖಲೆ, “ಇದು ಖಂಡಿತವಾಗಿಯು ರಾಷ್ಟ್ರಕ್ಕೆ ಗಂಭೀರ ಹಾಗೂ ಕಳವಳಕಾರಿಯಾದ ವಿಷಯವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ರೈಲ್ವೆ ಖಾತೆ ಹೊಂದಿರುವ ಅಶ್ವಿನಿ ವೈಷ್ಣವ್ ಅವರು ಎಲೆಕ್ಟ್ರಾನಿಕ್ಸ್, ಸಂವಹನ ಮತ್ತು ಐಟಿ ಖಾತೆಗಳ ಮುಖ್ಯಸ್ಥರಾಗಿದ್ದಾರೆ. ಅಶ್ವಿನಿ ವೈಷ್ಣವ್ ಅವರ ಅಸಮರ್ಥತೆಯನ್ನು ಪ್ರಧಾನಿ ಮೋದಿ ಇನ್ನೂ ಎಷ್ಟು ದಿನ ನಿರ್ಲಕ್ಷಿಸುತ್ತಾರೆ?” ಎಂದು ಪ್ರಧಾನಿಯವರನ್ನು ಸಾಕೇತ್ ಗೋಖಲೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ನಡುವೆ ಕೋವಿಡ್ ಡೇಟಾ ಸೋರಿಕೆಯನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಆರೋಗ್ಯ ಸಚಿವಾಲಯದ ಕೋವಿನ್ ಪೋರ್ಟಲ್ ಡೇಟಾವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ದತ್ತಾಂಶದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.