ನುಡಿಯಂಗಳ | ಉಚ್ಚಾರಣೆ ಎಂದರೆ ಸಾಲದೇ! ಉಚ್ಛಾರಣೆ ಎನ್ನಬೇಕೇ?

Date:

Advertisements

ತಮ್ಮ ಆಡು ಮಾತಿನಲ್ಲಿ ಮಹಾಪ್ರಾಣ ಬಳಸದೇ ಇರುವುದೇ ಅಭ್ಯಾಸ ಆಗಿರುವವರು ಮುಂದೆ ಶಿಕ್ಷಣದ ಅವಧಿಯಲ್ಲಿಯೂ ತಿದ್ದಿಕೊಳ್ಳದೇ ಹೋಗಬಹುದು. ಮುಂದೆ ಆಡಳಿತ, ನ್ಯಾಯಾಂಗ, ವ್ಯವಹಾರ, ವಾಣಿಜ್ಯ, ಸ್ವಂತ ವೃತ್ತಿ, ಇತ್ಯಾದಿ ಕ್ಷೇತ್ರಗಳಲ್ಲಿ ಇದು ಮುಂದುವರೆಯಬಹುದು. ಆದರೆ, ಒಂದು ಸ್ವಾರಸ್ಯದ ಸಂಗತಿ ಎಂದರೆ, ಅವರಿಗೆ ತಾವು ಮಹಾಪ್ರಾಣವನ್ನು ಅಲ್ಪಪ್ರಾಣವಾಗಿ ಉಚ್ಚರಿಸುತ್ತಿರುವುದು ಅರಿವಿಗೆ ಬರುವುದಿಲ್ಲ

ಕರ್ನಾಟಕ ಸಾಹಿತ್ಯ ಅಕಾಡಮಿ ಮತು ಭಾರತೀಯ ಬೌದ್ಧ ಮಹಾಸಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಧಾರವಾಡದಲ್ಲಿ ಫೆಬ್ರವರಿ 6-8ರಂದು ಕನ್ನಡ ವಿಚಾರ ಸಾಹಿತ್ಯ ದರ್ಶನ ಎಂಬ ಕಮ್ಮಟ ನಡೆಯಿತು. ಅದರಲ್ಲಿ 8ರ ಬೆಳಗ್ಗೆ ನನ್ನದೂ ಒಂದು ಗೋಷ್ಠಿ ಇತ್ತು. ನಾನು, ‘ಸಾಂವಿಧಾನಿಕ ಮೌಲ್ಯಗಳು ಮತ್ತು ಅವುಗಳನ್ನು ಸಾಹಿತ್ಯದಲ್ಲಿ ಅಳವಡಿಸಿಕೊಳ್ಳುವ ವಿಧಾನ’ ಎನ್ನುವ ವಿಷಯದ ಕುರಿತು ಸಂವಾದವನ್ನು ನಡೆಸಿಕೊಟ್ಟೆ. ಕಮ್ಮಟ ನಡೆದದ್ದು ಧಾರವಾಡದ ರಂಗಾಯಣದ ಪುಟ್ಟ ಸಭಾಂಗಣದಲ್ಲಿ.

ಇದಕ್ಕಾಗಿ ನಾನು ರಂಗಾಯಣದ ಆವರಣವನ್ನು ಪ್ರವೇಶಿಸಿದ ಕೂಡಲೇ ಕಂಡಿದ್ದು ಹಸಿರಿನ ಮಧ್ಯೆ ಕಂಗೊಳಿಸುತ್ತಿದ್ದ ಸುಂದರ ಸಭಾಂಗಣ. ಕಟ್ಟಡದ ಶಿರೋಭಾಗದಲ್ಲಿ ಕಡೆದ ಅದರ ಹೆಸರಿನ ಕಡೆಗೆ ನನ್ನ ಗಮನ ಹೋಯಿತು. ಕನ್ನಡದ ಮೇಷ್ಟ್ರು ಆದ್ದರಿಂದ ಕಂಡಕಂಡದ್ದನ್ನು ಬಿಡಿಸಿ ಓದುವುದು ನನ್ನ ಅಭ್ಯಾಸ. ನೋಡಿದ ಕೂಡಲೇ ಅದರಲ್ಲೇನೋ ಒಂದು ತಪ್ಪಿದೆ ಎಂದು ಭಾಸವಾಯಿತು. ಕೆಳಗೆ ಇದೆ, ಈ ಬರಹದಲ್ಲಿ ಏನಾದರೂ ತಪ್ಪಿದೆಯೇ ಎಂದು ನೀವೂ ನೋಡಿ.

021

ನಿಮಗೂ ಗೊತ್ತಾಗಿದ್ದರೆ ಸಂತೋಷ. ಇಲ್ಲಿ, ‘ಸುವರ್ಣ ಸಾಂಸ್ಕೃತಿಕ ಸಮುಚ್ಛಯ’ ಎಂದು ಬರೆಯಲಾಗಿದೆ. ‘ಸಮುಚ್ಛಯ’ ಎನ್ನುವುದು ಸರಿಯಲ್ಲ, ‘ಸಮುಚ್ಚಯ’ ಎನ್ನುವುದು ಸರಿ. ಚ ಕೆಳಗಿನ ಒತ್ತಕ್ಷರ ಮಹಾಪ್ರಾಣವಲ್ಲ, ಅಲ್ಪಪ್ರಾಣ. ಅನುಮಾನವಾದರೆ, ನಾನು ಮಾಡುವ ಹಾಗೆಯೇ, ನೀವೂ ಯಾವುದಾದರೂ ಉತ್ತಮ ಕನ್ನಡ ನಿಘಂಟನ್ನು ತೆರೆದು ನೋಡಿ.
ಒಳಗಡೆ ಹೋದ ಕೂಡಲೇ ಆ ಕಟ್ಟಡದ ಉದ್ಘಾಟನಾ ಸಮಾರಂಭದ ನೆನಪನ್ನು ದಾಖಲಿಸುವ, ಕಲ್ಲಿನಲ್ಲಿ ಕೆತ್ತಿದ ಫಲಕವಿತ್ತು. ಅದರಲ್ಲಿಯೂ ಕಟ್ಟಡದ ಹೆಸರನ್ನು ಹಾಗೆಯೇ ಬರೆದಿದ್ದರು. ಸಾಂಸ್ಕೃತಿಕ ಆವರಣದಲ್ಲಿರುವ ಹಲವು ಸೌಕರ್ಯಗಳನ್ನು ಒಗ್ಗೂಡಿಸಿ ಇದೊಂದು ಸಮೂಹ, ರಾಶಿ ಎಂದು ಹೇಳುವ ಸಲುವಾಗಿ ಈ ಪದವನ್ನು ಬಳಸಿ, ಹಣೆ ಭಾಗದಲ್ಲಿ ಅಷ್ಟೊಂದು ಸುಂದರವಾಗಿ ದೊಡ್ಡಕ್ಷರಗಳಲ್ಲಿ ಕೆತ್ತಿಸಿದವರಿಗೆ ಇದು ಹೊಳೆಯಲಿಲ್ಲವೇ?

ಉಚ್ಚಾರಣೆಯ ಅವಾಂತರ

ಸಮುಚ್ಚಯ ಎಂದು ಬರೆಯುವ ಬದಲಿಗೆ ಸಮುಚ್ಛಯ ಎಂದು ಬರೆದದ್ದು ಉಚ್ಚಾರಣೆಯ ಅವಾಂತರಕ್ಕೆ ಒಂದು ಉತ್ತಮ ನಿದರ್ಶನ. ಇಲ್ಲಿ ರಂಗಾಯಣಕ್ಕೆ ಸಂಬಂಧಿಸಿದರವನ್ನು ಟೀಕೆ ಮಾಡುವ ಉದ್ದೇಶ ನನಗೆ ಖಂಡಿತ ಇಲ್ಲ. ಇದನ್ನು ಒಂದು ಉದಾಹರಣೆಯಾಗಿ ಬಳಸಿ ಕನ್ನಡದ ಉಚ್ಚಾರಣೆಯ ಕುರಿತು ಒಂದಷ್ಟು ನನಗೆ ಗೊತ್ತಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ನನ್ನ ಉದ್ದೇಶ. ಈ ಮೇಲಿನ ಉಪಶೀರ್ಷಿಕೆಯನ್ನು ನೋಡಿದವರಲ್ಲಿ ಹಲವರು ನನ್ನನ್ನೇ ಟೀಕಿಸಬಹುದು, ಮೊದಲು ನಿಮ್ಮ ‘ಉಚ್ಛಾರಣೆ’ ತಿದ್ದಿಕೊಳ್ಳಿ ಎಂದು.

ನಿಜ. ಹೆಚ್ಚಿನವರು, ಇಂಗ್ಲಿಷಿನ pronuncition ಪದಕ್ಕೆ ಸಂವಾದಿಯಾದ ಕನ್ನಡ ಪದ, ‘ಉಚ್ಛಾರಣೆ’ ಎಂದೇ ತಿಳಿದಿರುತ್ತಾರೆ. ಇಲ್ಲ, ಇದು ಸರಿಯಲ್ಲ. ಉಚ್ಚಾರಣೆ ಎಂಬ ಪದದ ಸರಿಯಾದ ಉಚ್ಚಾರಣೆ ‘ಉಚ್ಚಾರಣೆ’ ಎಂದು, ‘ಉಚ್ಛಾರಣೆ’ ಎಂದು ಅಲ್ಲ. ಬೇಕಾದರೆ ಒಳ್ಳೆಯ ನಿಘಂಟನ್ನು ತೆರೆದು ನೋಡಿ ಖಾತ್ರಿ ಮಾಡಿಕೊಳ್ಳಿ. ಉಚ್ಚಾರಣೆಯನ್ನು ಉಚ್ಛಾರಣೆ ಎಂದೂ, ಸಮುಚ್ಚಯವನ್ನು ಸಮುಚ್ಛಯವೆಂದೂ ಬರೆಯುವ ಪ್ರಕ್ರಿಯೆಯನ್ನು ಇಂಗ್ಲಿಷಿನಲ್ಲಿ hypercorrection ಎನ್ನುತ್ತಾರೆ. ಕನ್ನಡದಲ್ಲಿ ಅತಿತಿದ್ದುವಿಕೆ ಎನ್ನಬಹುದು.

Advertisements
03 Varnamala

ಸಮಸ್ಯೆಯ ಬೇರು: ಕನ್ನಡದ ವರ್ಗೀಯ ವ್ಯಂಜನಗಳಲ್ಲಿ, ಕ, ಗ, ಚ, ಜ, ಟ, ಡ, ತ, ದ, ಪ ಮತ್ತು ಬ ವ್ಯಂಜನಗಳಿಗೆ ಸಂವಾದಿಯಾದ ಮಹಾಪ್ರಾಣ ಜೋಡಿಗಳು ಇವೆ: ಖ, ಘ, ಛ, ಝ, ಠ, ಢ, ಥ, ಧ, ಫ ಮತ್ತು ಭ. ಕನ್ನಡವನ್ನು ಮಾತಾಡುವವರಲ್ಲಿ ಅನೇಕರು ಈ ಮಹಾಪ್ರಾಣ ಧ್ವನಿಗಳನ್ನು ಅಲ್ಪಪ್ರಾಣ ಧ್ವನಿಗಳಾಗಿ ಉಚ್ಚರಿಸುತ್ತಾರೆ. ಪದಗಳಲ್ಲಿ ಬಂದಾಗ ಇದು ಎದ್ದು ಕಾಣುತ್ತದೆ. ಉದಾ: ಇಲಾಖೆ, ಓಘ, ಘೋರ, ಇಚ್ಛೆ, ಝೇಂಕಾರ, ಶ್ರೀಕಂಠ, ಢಾಲು, ರಥ, ಧನ, ಫಲ, ಭಾರತ ಇತ್ಯಾದಿ ಪದಗಳನ್ನು ಕ್ರಮವಾಗಿ ಇಲಾಕೆ, ಓಗ, ಗೋರ, ಇಚ್ಚೆ, ಜೇಂಕಾರ, ಶ್ರೀಕಂಟ, ಡಾಲು, ರತ, ದನ, ಪಲ ಮತ್ತು ಬಾರತ ಎಂಬಂತೆ ಉಚ್ಚರಿಸುತ್ತಾರೆ.

ಇಂಥ ಸಮಸ್ಯೆ ಹೆಚ್ಚಿನಂಶ ಹಳೆಯ ಮೈಸೂರು ಪ್ರಾಂತ್ಯದಲ್ಲಿ, ಅದರಲ್ಲೂ ಮುಖ್ಯವಾಗಿ ಮಾತೃಭಾಷೀಯರಲ್ಲಿ ಸಹಜವಾಗಿರುತ್ತದೆ. ಇದಕ್ಕೆ ಕಾರಣ, ಎಲ್ಲಾ ಮಹಾಪ್ರಾಣ ಧ್ವನಿಯಿರುವ ಪದಗಳು ಸಂಸ್ಕೃತ ಭಾಷೆಯಿಂದ ಬಂದವು, ಮೂಲ ಕನ್ನಡದಲ್ಲಿ ಮಹಾಪ್ರಾಣಗಳಿಲ್ಲ [ತಮಿಳು ಭಾಷೆಯಲ್ಲಿ (ವರ್ಣಮಾಲೆಯನ್ನು ನೋಡಿ) ಈ ಹತ್ತು ಮಹಾಪ್ರಾಣ ಧ್ವನಿಗಳು ಇಲ್ಲವೇ ಇಲ್ಲ ಎಂಬುದನ್ನು ಗಮನಿಸಿ]. ಹೀಗಾಗಿ ಆಡುಮಾತಿನಲ್ಲಿ ಈ ಧ್ವನಿಗಳು ಇರುವುದಿಲ್ಲ. ಇದೇ ಶೈಲಿಯಲ್ಲಿ ಮಾತಾಡುತ್ತಾ ಬೆಳೆದ ಮಕ್ಕಳಲ್ಲಿ ಶಾಲೆಗೆ ಬರುವ ಮುನ್ನ ಮಹಾಪ್ರಾಣವನ್ನೂ ಅಲ್ಪಪ್ರಾಣವನ್ನಾಗಿ ಮಾತಾಡುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ.

ಮುಂದೆ ಔಪಚಾರಿಕ ಶಿಕ್ಷಣದಲ್ಲಿ ಇದನ್ನು ತಿದ್ದಿಕೊಳ್ಳಬೇಕು ಎಂಬ ನಿರೀಕ್ಷೆ ಇರುತ್ತದೆ. ಅದ್ಯಾಕೆ ಬೇಕು, ಹೀಗೇ ಇದ್ದರೆ ಏನು ತೊಂದರೆ ಎಂಬ ವಾದಗಳೂ ಇವೆ. ಈಗ ನಾನು ಆ ವಿಚಾರಕ್ಕೆ ಹೋಗುವುದಿಲ್ಲ. ಅಖಿಲ ಕರ್ನಾಟಕ ಮಟ್ಟದಲ್ಲಿ ಮಾತಾಡುವಾಗ, ಗ್ರಂಥಸ್ಥ ಮಾದರಿಯ ಕನ್ನಡವನ್ನು ಓದುವಾಗ ಮತ್ತು ಬರೆಯುವಾಗ ಮಹಾಪ್ರಾಣ ವರ್ಣಗಳನ್ನು ಮಹಾಪ್ರಾಣದಲ್ಲಿಯೇ ಉಚ್ಚರಿಸುವುದನ್ನು ಕಲಿಯುವುದು ಅನಿವಾರ್ಯವೆಂದು ನನ್ನ ಅಭಿಪ್ರಾಯವೂ ಆಗಿದೆ. ಆದರೆ, ಶಾಲೆಗೆ ಬಂದ ನಂತರವೂ ಒಮ್ಮೊಮ್ಮೆ ಕಲಿಸುವ ಶಿಕ್ಷಕರಲ್ಲಿಯೂ ಈ ಅಲ್ಪ-ಮಹಾಪ್ರಾಣ ಸಮಸ್ಯೆ ಉಳಿದುಬಿಟ್ಟಿರುವ ಸನ್ನಿವೇಶದಲ್ಲಿ ಮಕ್ಕಳು ಅದನ್ನು ಕಲಿಯದೇ ಮುಂದುವರೆಯುತ್ತಾರೆ.

ನುಡಿದಂತೆ ಬರೆವ ಲಿಪಿ

ಕನ್ನಡದ ಓದು ಬರಹವು ವರ್ಣಲಿಪಿಯನ್ನು ಬಳಸುತ್ತದೆ. ಇಂಗ್ಲಿಷಿನಲ್ಲಿ ಎ-ಯಿಂದ ಜಡ್-ವರೆಗೆ 26 ಅಕ್ಷರಗಳು, ಎಂದರೆ alphabet ಗಳು ಇವೆ. ಅವು ಬೇರೆ ಬೇರೆ ಸಂಯೋಜನೆಯಲ್ಲಿ ಸೇರಿದಾಗ ಪದಗಳು ಆಗುತ್ತವೆ. ಅದನ್ನು ಸ್ಪೆಲ್ಲಿಂಗ್ ಎನ್ನುತ್ತೇವೆ. ಹೀಗಾಗಿ ಇದರಲ್ಲಿ ಎ, ಇ, ಐ, ಒ, ಯು ಎಂಬ ಸ್ವರಗಳು, ಸಿ, ಜಿ ನಂಥ ಕೆಲವು ವ್ಯಂಜನಗಳು ಸನ್ನಿವೇಶಕ್ಕೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಧ್ವನಿಗಳನ್ನು ಹೊರಡಿಸುತ್ತವೆ. ಕೆಲವು ಅಕ್ಷರಗಳನ್ನು ಬರೆಯುತ್ತೇವೆ, ಆದರೆ ಅದನ್ನು ಉಚ್ಚರಿಸಬಾರದು, ಅವು ಸೈಲೆಂಟ್ ಎನ್ನುತ್ತೇವೆ. (ಈ ಕುರಿತು ಮುಂದೆ ಯಾವಾಗಲಾದರೂ ವಿಸ್ತಾರವಾಗಿ ಮಾತಾಡೋಣ.

ಆದರೆ ಕನ್ನಡದ್ದು ಅಕ್ಷರಗಳ ಬದಲಾಗಿ ವರ್ಣವ್ಯವಸ್ಥೆ. ಇಲ್ಲಿ 13 ಸ್ವರಗಳು, 2 ಯೋಗವಾಹಗಳು, 25 ವರ್ಗೀಯ ಮತ್ತು 9 ಅವರ್ಗೀಯ ವ್ಯಂಜನಗಳು ಇವೆ. ಇವುಗಳ ಒಂದು ವೈಶಿಷ್ಠ್ಯವೆಂದರೆ ಇವುಗಳನ್ನು ಬರೆದಿರುವ ಹಾಗೆಯೇ ಓದುತ್ತೇವೆ, ಬಾಯಿಂದ ಉಚ್ಚರಿಸುವ ಹಾಗೆಯೇ ಬರೆಯುತ್ತೇವೆ.

ಹೀಗಾಗಿ ನಮಗೆ ಬರಹ ಕನ್ನಡದಲ್ಲಿ ಮಹಾಪ್ರಾಣ ಉಚ್ಚಾರಣೆಯ ಸಮಸ್ಯೆಯಿದ್ದರೆ, ಓದುವಾಗೇನೊ ನಡೆಯಬಹುದು, ಆದರೆ, ಬರೆಯುವಾಗ ನಾವು ಒಪ್ಪಿತ ಮಾದರಿಗಿಂತ ಭಿನ್ನವಾಗಿ ಬರೆಯುತ್ತೇವೆ. ಉದಾಹರಣೆಗೆ: ಪಲಿತಾಂಶ, ಬರವಸೆ, ದ್ವಜ, ಸಂವಿದಾನ, ದನಿಕ, ಬದ್ರತೆ, ಸಂಬಾವಿತ, ದನ್ಯವಾದ, ಮೂಡನಂಬಿಕೆ, ದಾಕಲೆ, ಆದಾರ, ಆಚ್ಚಾದಿತ ಇತ್ಯಾದಿ. ಅದು ನಮಗೆ, ಮತ್ತು ನಮ್ಮಂಥ ಸಮಸ್ಯೆ ಇರುವವರಿಗೆ ಸರಿಹೋಗಬಹುದೇನೋ ಆದರೆ, ಸರ್ವಸಮ್ಮತವಾಗುವುದಿಲ್ಲ, ಆದ್ದರಿಂದ ಅದು ತಪ್ಪೇ ಎನ್ನಬೇಕಾಗುತ್ತದೆ.

ಅತಿತಿದ್ದುವ ಪ್ರವೃತ್ತಿ

ತಮ್ಮ ಆಡು ಮಾತಿನಲ್ಲಿ ಮಹಾಪ್ರಾಣ ಬಳಸದೇ ಇರುವುದೇ ಅಭ್ಯಾಸ ಆಗಿರುವವರು ಮುಂದೆ ಶಿಕ್ಷಣದ ಅವಧಿಯಲ್ಲಿಯೂ ತಿದ್ದಿಕೊಳ್ಳದೇ ಹೋಗಬಹುದು. ಮುಂದೆ ಆಡಳಿತ, ನ್ಯಾಯಾಂಗ, ವ್ಯವಹಾರ, ವಾಣಿಜ್ಯ, ಸ್ವಂತ ವೃತ್ತಿ, ಇತ್ಯಾದಿ ಕ್ಷೇತ್ರಗಳಲ್ಲಿ ಇದು ಮುಂದುವರೆಯಬಹುದು. ಆದರೆ, ಒಂದು ಸ್ವಾರಸ್ಯದ ಸಂಗತಿ ಎಂದರೆ, ಅವರಿಗೆ ತಾವು ಮಹಾಪ್ರಾಣವನ್ನು ಅಲ್ಪಪ್ರಾಣವಾಗಿ ಉಚ್ಚರಿಸುತ್ತಿರುವುದು ಅರಿವಿಗೆ ಬರುವುದಿಲ್ಲ. ಅಷ್ಟೇ ಅಲ್ಲ, ಅವರು ಮಹಾಪ್ರಾಣವನ್ನು ಸರಿಯಾಗಿಯೇ ಉಚ್ಚರಿಸುತ್ತಿದ್ದೇವೆ ಎಂದೇ ನಂಬಿರುತ್ತಾರೆ, ಮುಂದುವರೆದು ಅಂಥ ಸಮಸ್ಯೆ ಉಳ್ಳ ಬೇರೆಯವರನ್ನು ತಮಾಷೆ ಮಾಡಿ ನಗಲೂ ಬಹುದು.

ಹೀಗಾದಾಗ, ಇಂಥ ಸಮಸ್ಯೆಯುಳ್ಳವರು ತಮ್ಮ ಉಚ್ಚಾರಣೆಯನ್ನು ತಿದ್ದಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಾರೆ. ಹೆಚ್ಚಿನಂಶ ಮಹಾಪ್ರಾಣ ಧ್ವನಿಗಳನ್ನುಳ್ಳ ಶಬ್ದಗಳನ್ನು ಸರಿಯಾಗಿಯೆ ಉಚ್ಚರಿಸುತ್ತಾರೆ. ಕೆಲವೊಮ್ಮೆ ಮಹಾಪ್ರಾಣದ ಒತ್ತನ್ನು ಪದದ ತಪ್ಪು ಭಾಗದಲ್ಲಿ ಹಾಕುತ್ತಾರೆ. ಎಂದರೆ, ಎಲ್ಲಿ ಮಾಹಾಪ್ರಾಣ ಇರಬೇಕಿತ್ತೋ ಅಲ್ಲಿ ಬಿಟ್ಟು ಇನ್ನೊಂದು ಗುಣಿತಾಕ್ಷರದ ಮೇಲೆ ಮಹಾಪ್ರಾಣ ಬಳಸಿ ಉಚ್ಚರಿಸುತ್ತಾರೆ.

ಉದಾಹರಣೆಗೆ: ವಿದ್ಯಾರ್ಥಿ ಎನ್ನುವ ಬದಲಿಗೆ ವಿಧ್ಯಾರ್ತಿ ಎನ್ನುತ್ತಾರೆ. ಬೋಧಕ ಎನ್ನುವ ಬದಲು ಭೋದಕ, ಬಂಧನ-ಭಂದನ, ಶಪಥ-ಶಫತ, ದಾಖಲೆ-ಧಾಕಲೆ, ಸಂಬಂಧ-ಸಂಭಂದ, ದಾಂಧಲೆ-ಧಾಂದಲೆ ಇತ್ಯಾದಿಯಲ್ಲಿ ಈ ಮಹಾಪ್ರಾಣವನ್ನು ಸರಿಯಾದ ಜಾಗದಿಂದ ಕಿತ್ತು ತಪ್ಪಾದ ಜಾಗದಲ್ಲಿ ಹಾಕಿ ಅಲ್ಲಿಯು ಇನ್ನೊಂದು ತಪ್ಪು ಆಗುವ ಹಾಗೆ ಮಾಡುತ್ತಾರೆ. ಈ ಒಂದು ಪ್ರಕ್ರಿಯೆಯನ್ನು ಭಾಷಾವಿಜ್ಞಾನದಲ್ಲಿ, hypercorrection ಎನ್ನುತ್ತಾರೆ; ಕನ್ನಡದಲ್ಲಿ ಅತಿತಿದ್ದುವಿಕೆ ಎನ್ನಬಹುದು.

ಇದು ಉಚ್ಛಾರಣೆ, ಅಬಧ್ರ, ಸಂಧರ್ಬ, ಸಿಬ್ಬಂಧಿ, ನಿಗಧಿ, ಅಫಘಾತ, ಸಂಗಠನೆ, ಸಂಧಿಗ್ದ, ಉದ್ಗಾಠನೆ ಇತ್ಯಾದಿ ಪದಗಳಲ್ಲಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭಗಳಲ್ಲಿ ಕ್ರಮವಾಗಿ ಉಚ್ಚಾರಣೆ, ಅಭದ್ರ, ಸಂದರ್ಭ, ಸಿಬ್ಬಂದಿ, ನಿಗದಿ, ಅಪಘಾತ, ಸಂಘಟನೆ, ಸಂದಿಗ್ಧ, ಉದ್ಘಾಟನೆ ಇತ್ಯಾದಿ ಸರಿಯಾದ ಪ್ರಯೋಗಗಳು. ಈ ಒಂದು ಸರಣಿಯಲ್ಲಿ ನಾವು ಲೇಖನದ ಆರಂಭದಲ್ಲಿ ಧಾರವಾಡದ ರಂಗಾಯಣದ ಕಟ್ಟಡದ ಮೇಲೆ ನೋಡಿದ, ‘ಸಮುಚ್ಛಯ’ ಪದವೂ ಈ ತರಹದ ಕ್ರಿಯೆಗೆ ಒಳಗಾಗಿದೆ. ಅದನ್ನು ಸೂಚಿಸಿದವರು, ನಿಗಾ ವಹಿಸಿದವರೆಲ್ಲರಿಗೂ ಸಮುಚ್ಛಯವೇ ಸರಿ ಎನ್ನಿಸಿದೆ, ಅನುಮಾನ ಬರುವ ಸಂಭವವೂ ಇರಲಿಲ್ಲ.

ಕರ್ನಾಟಕದ ಹೈಕೋರ್ಟಿನ ಸಂಗತಿ

ಲೇಖನ ಮುಗಿಸುವ ಮಂಚೆ ಇದೇ ತರಹದ ಇನ್ನೊಂದು ಬಹಳ ಪ್ರಮುಖವಾದ ಉದಾಹರಣೆಯನ್ನು ನೀಡುತ್ತೇನೆ. ನಾನು ನಡೆಸುವ ಭಾಷಾ ಕೌಶಲಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಶಿಬಿರಗಳಲ್ಲಿ ‘ಹೈಕೋರ್ಟ್’ ಎಂಬ ಪದಕ್ಕೆ ಕನ್ನಡ ಪದವೇನು ಎಂದು ಕೇಳಿದಾಗ ಭಾಗಿಗಳಿಂದ ಎರಡು ಪ್ರಯೋಗಗಳು ಹೊಮ್ಮಿಬರುತ್ತವೆ. (1) ಉಚ್ಚ ನ್ಯಾಯಾಲಯ, (2) ಉಚ್ಛ ನ್ಯಾಯಾಲಯ. ಇದರಲ್ಲಿ ಎರಡನೆಯದಕ್ಕೆ ಹೆಚ್ಚಿನ ಮತಗಳು ಬೀಳುತ್ತವೆ. ಆದರೆ, ಇಲ್ಲಿಯೂ ‘ಉಚ್ಚ ನ್ಯಾಯಾಲಯ’ ಎಂಬುದೇ ಸರಿ ಎಂದು ಕೆಲವೇ ಜನ ಹೇಳಿದ್ದರೂ, ಅದೇ ಪ್ರಯೋಗ ಸರಿ. ಬೇಕಿದ್ದರೆ ನಿಘಂಟು ತೆಗೆದು ನೋಡಿ.

ಉಚ್ಛ
2222

ನಾಲ್ಕೈದು ವರ್ಷಗಳ ಹಿಂದೆ, ಕರ್ನಾಟಕ ಹೈಕೋಟಿನ ಶಿರೋನಾಮೆಯ ಜಾಗದಲ್ಲಿ, ದೊಡ್ಡ, ಸುಂದರವಾದ ಅಕ್ಷರಗಳಲ್ಲಿ, ‘ಕರ್ನಾಟಕ ಉಚ್ಛ ನ್ಯಾಯಾಲಯ’ ಎಂದೇ ಕೆತ್ತಲಾಗಿತ್ತು. ನಾನು ಇದನ್ನು ಗಮನಿಸಿದ್ದು ಹೈಕೋರ್ಟ್ ಎದುರಿಗೆ ಲಾರ್ಡ್ ಕಬ್ಬನ್ ಕುದುರೆಯ ಮೇಲೆ ಕುಳಿತಿರುವ ಮೂರ್ತಿ ಇರುವ ಬದಿಯಲ್ಲಿ. ಅದನ್ನು ಗಮನಿಸಿ ನಾನು ಪ್ರಜಾವಾಣಿಯ ಸಂಗತದಲ್ಲಿ ಈ ಕುರಿತು ಲೇಖನ ಬರೆದು, ಉಚ್ಛ ನ್ಯಾಯಾಲಯ ಎನ್ನುವುದು ತಪ್ಪು, ‘ಉಚ್ಚ ನ್ಯಾಯಾಲಯ’ ಎನ್ನುವುದೇ ಸರಿ ಎಂದು ಪ್ರತಿಪಾದಿಸಿದ್ದೆ. ಇದಾದ ಸುಮಾರು ಒಂದು ತಿಂಗಳಲ್ಲಿ ನ್ಯಾಯಾಲಯದ ಆಡಳಿತವು ಅದನ್ನು ಸರಿಪಡಿಸಿತು. ಈಗ ಅಲ್ಲಿ, ‘ಕರ್ನಾಟಕ ಉಚ್ಚ ನ್ಯಾಯಾಲಯ’ ಎಂಬ ಹೆಸರು ರಾರಾಜಿಸುತ್ತಿದೆ.

ಇದು ನನ್ನ ಲೇಖನದ ಪ್ರಭಾವವೇ ಎಂಬುದು ನನಗೆ ಖಚಿತವಿಲ್ಲ. ಆದರೆ, ಟೈಮ್ ಲೈನ್ ಹಾಗೆ ಹೇಳುತ್ತದೆ. ಅಂತೂ ಈಗ ಹೈಕೋರ್ಟ್ ಎದುರಿಗೆ ಕಬ್ಬನ್ ಮೂರ್ತಿಯೂ ಇಲ್ಲ, ಹಾಗೆಯೇ ಉಚ್ಛ ಎಂಬ ಪದವೂ ಇಲ್ಲ. ಆದರೂ, ನಮ್ಮ ಟಿವಿ ವಾಹಿನಿಗಳು ಸುದ್ದಿಯಲ್ಲಿ ಹೈಕೋರ್ಟಿನ ಕ್ಲಿಪಿಂಗ್ ತೋರಿಸಬೇಕಾದ ಸಂದರ್ಭದಲ್ಲಿ ಈಗಲೂ ಕೆಲವೊಮ್ಮೆ ಲಾರ್ಡ್ ಕಬ್ಬನ್ ಮೂರ್ತಿ ಇರುವ ಬದಿ ತೋರಿಸುತ್ತಾರೆ. ಆಗ ನೀವು ಹಳೆಯ, ‘ಕರ್ನಾಟಕ ಉಚ್ಛ ನ್ಯಾಯಾಲಯ’ವನ್ನು ಕಾಣಬಹುದು. ಲೇಖನ ಮುಗಿಸುವ ಮುಂಚೆ ಇನ್ನೊಂದು ಮಾತು, ಮೇಲಿನ ಉದಾಹರಣೆಯನ್ನು ಅನುಸರಿಸಿ ಹೇಳುವುದಾದರೆ, ದೆಹಲಿಯಲ್ಲಿರುವ ಸುಪ್ರೀಮ್ ಕೋರ್ಟು, ‘ಸರ್ವೋಚ್ಛ ನ್ಯಾಯಾಲಯ’ವಲ್ಲ, ಅದು ‘ಸರ್ವೋಚ್ಚ ನ್ಯಾಯಾಲಯ’.

ಹಾಗೆಯೇ, ಈ ಲೇಖನ ಧಾರವಾಡದ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆಗಳಿಗೆ ತಲುಪಲಿ, ಅವರಿಗೂ ಸರಿ ಎನ್ನಿಸಿದರೆ ಈ ಹೆಸರನ್ನು ತಿದ್ದಿ ಬರೆಸಲಿ ಎಂದು ನಮ್ಮ ಆಶಯ.

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

2 COMMENTS

  1. ಕನ್ನಡ ದ ಬಗ್ಗೆ ಅಪಾರ ಪ್ರೀತಿ ಕಾಳಜಿ ಪದಗಳ ಬಳಕೆ ಒತ್ತಕ್ಷರಗಳು ಬಗ್ಗೆ ಈದಿನ ಆನ್ಲೈನ್ ಟೆಲಿ ಕಸ್ಟ್ ನಲ್ಲಿ ತಿಳಿಸಿದಕ್ಕೆ ತಮಗೆ ಧನ್ಯವಾದಗಳು ಸರ್
    ಕಟ್ಟೆ ಎರ್ರಿಸ್ವಾಮಿ
    76 ವೆಂಕಟಾಪುರ
    ಹೊಸಪೇಟೆ ತಾಲ್ಲೂಕು

  2. ಕರ್ಣಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಎಎಸ್,ಐಎಎಸ್ ಅಧಿಕಾರಿಗಳು,ಕನ್ನಡವನ್ನು ಕಾಟಾಚಾರಕ್ಕೆ ಬಳಸುತ್ತಾ, ಅಲ್ಪಪ್ರಾಣ ಮಹಾಪ್ರಾಣ ,ಹೃಸ್ವ, ದೀರ್ಘ,ಒತ್ತಕ್ಷರಗಳನ್ನು ವಿವೇಚನೆಯಿಲ್ಲದೆ ಬಳಸುತ್ತಿರುವ, ಕನ್ನಡವನ್ನು ಎಲ್ಲಾ ರಂಗಗಳಲ್ಲಿ ಮುನ್ನೆಲೆಗೆ ತರಬೇಕೆಂಬ ಕಾಳಜಿಯಿರುವ, ಕನ್ನಡದಲ್ಲಿ ಪರೀಕ್ಷೆ ಬರೆಯುತ್ತಿರುವ, ಲಕ್ಷಾಂತರ ಯುವಕರಿಗೆ ತುಂಬಾ ಉಪಯುಕ್ತ ಲೇಖನ. ಧನ್ಯವಾದಗಳು
    ಪ್ರೊಫೆಸರ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X