ಸರ್ಕಾರದ ಪರವಾನಿಗೆ ಇಲ್ಲದೆ ಮೆಕ್ಕೆಜೋಳ ಬಿತ್ತನೆ ಬೀಜವನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಕೂಡ್ಲಿಗಿ ಪಿಎಸ್ಐ ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಲಗೇರಿ ಗ್ರಾಮದ ಗಿರೀಶ ದಾನಪ್ಪ ಸರವಂದ (36) ಹಾಗೂ ಮಂಜುನಾಥ (42) ಬಂಧಿತ ಆರೋಪಿಗಳು. ಅವರು ದಾವಣಗೆರೆ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಿಂದ ಕೂಡ್ಲಿಗಿ ತಾಲೂಕಿನ ಮೊರಬದ ಕಡೆಗೆ ಪರವಾನಗಿ ಇಲ್ಲದೆ ಅನಧಿಕೃತವಾಗಿ ಮೆಕ್ಕೆಜೋಳ ಬಿತ್ತನೆ ಬೀಜದ ಚೀಲಗಳನ್ನು ಸಾಗಿಸುತ್ತಿದ್ದರು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಬಿತ್ತನೆ ಬೀಜಗಳ ಒಟ್ಟು ಮೌಲ್ಯ 1.2 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಕೂಡ್ಲಿಗಿ ಪಿಎಸ್ಐ ಧನಂಜಯ ಅವರು ಭಾನುವಾರ ಸಂಜೆ 5-50ಕ್ಕೆ ಕೂಡ್ಲಿಗಿ ಹೊರವಲಯದ ಕೊಟ್ಟೂರು ರಸ್ತೆಯ ಬೈಪಾಸ್ ರಸ್ತೆಯಲ್ಲಿ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೂಡ್ಲಿಗಿ ಕೃಷಿ ರೈತ ಸಂಪರ್ಕ ಕೆಂದ್ರದ ಸಹಾಯಕ ಕೃಷಿ ಅಧಿಕಾರಿ ಹಾಗೂ ಬೀಜಗಳ ಪರಿವೀಕ್ಷಕ ಗುರುಬಸವರಾಜ ಚಿಲಗೋಡ ಅವರನ್ನು ಕರೆಯಿಸಿ ಮಾಹಿತಿ ಆಧಾರಿಸಿ ಅವರು ನೀಡಿದ ದೂರಿನ ಮೇರೆಗೆ ನಕಲಿ ಮೆಕ್ಕೆಜೋಳ ಬೀಜ ಸಾಗಾಟದಲ್ಲಿ ತೊಡಗಿದ್ದ ಇಬ್ಬರನ್ನೂ ಕೂಡ್ಲಿಗಿ ಪೊಲೀಸರು ವಶಕ್ಕೆ ಪಡೆದು ಸಾಗಾಟ ಮಾಡುತ್ತಿದ್ದ ಟಾಟಾ ಎಸಿ ವಾಹನವನ್ನು ಹಾಗೂ ಅದರಲ್ಲಿದ್ದ ಮೆಕ್ಕೆಜೋಳ ಬೀಜವನ್ನು ಜಪ್ತಿ ಮಾಡಿದ್ದಾರೆ.