ವ್ಯಂಗ್ಯಚಿತ್ರಗಳ ಮೇಲೆ ನಿಯಂತ್ರಣ ಹೇರುವ ಕ್ರಮ ಇದೇ ಮೊದಲನೆಯದಲ್ಲ. ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ನಡೆಯುತ್ತಿರುವಾಗ, ʼಮುಂಬೈ ಲಾ ಎನ್ಫೋರ್ಸ್‌ಮೆಂಟ್ ಏಜೆನ್ಸಿ’ಯು ಭಾರತದ ಐಟಿ ಆಕ್ಟನ್ನು ಉಲ್ಲಂಘಿಸುತ್ತದೆ ಎಂಬ ಕಾರಣ ನೀಡಿ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಮತ್ತು ಮಂಜುಳ್‍ರ ಕೆಲವು ವ್ಯಂಗ್ಯಚಿತ್ರಗಳನ್ನು ತೆಗೆದು ಹಾಕಲು ʼಎಕ್ಸ್’ ಗೆ ನೋಟಿಸ್ ನೀಡಿತ್ತು.
ಅಮೆರಿಕ ತನ್ನ ನೆಲದಲ್ಲಿರುವ ಅಕ್ರಮ ಭಾರತೀಯ ನಿವಾಸಿಗಳನ್ನು, ನಮ್ಮಲ್ಲಿ ಜಾನುವಾರುಗಳನ್ನು ಕಾಲು ಕಟ್ಟಿ ಟೆಂಪೋಗಳಲ್ಲಿ ತುಂಬಿ ರವಾನಿಸುವಂತೆ, ಕೈಕಾಲುಗಳಿಗೆ ಕೋಳ ಹಾಕಿ, ಮಿಲಿಟರಿ ವಿಮಾನಗಳಲ್ಲಿ ತುಂಬಿ ವಾಪಾಸ್ ಕಳಿಸುತ್ತಿದೆ. ಈಗಾಗಲೇ ಮೂರು ಟ್ರಿಪ್‌ಗಳಲ್ಲಿ 332 ಜನ ಭಾರತೀಯರು ಇದೇ ರೀತಿಯಲ್ಲಿ ವಾಪಾಸ್ ಕಳಿಸಲ್ಪಟ್ಟಿದ್ದಾರೆ. ದಕ್ಷಿಣ ಅಮೆರಿಕದ ಕೊಲಂಬಿಯಾ ಕೇವಲ 5 ಕೋಟಿಗೆ ತುಸು ಹೆಚ್ಚು ಜನಸಂಖ್ಯೆಯಿರುವ ಪುಟ್‍ಬಾಲ್ ಆಡುವ ಒಂದು ಪುಟ್ಟ ರಾಷ್ಟ್ರ. ಅದರ ಪ್ರಜೆಗಳು ಕಾನೂನು ಬಾಹಿರವಾಗಿ ಅಮೆರಿಕಕ್ಕೆ ಹೋಗುವುದು, ಅಮೆರಿಕ ಅವರನ್ನು ವಾಪಾಸ್ ಕಳಿಸುವುದು ಅದಕ್ಕೆ ಹೊಸದಲ್ಲ. 2024ರಲ್ಲಿ ನೂರಾರು ಅಮೆರಿಕನ್ ನಾಗರಿಕ ವಿಮಾನಗಳು ಅಮೆರಿಕದಿಂದ ಸಾವಿರಾರು ಅಕ್ರಮ ಕೊಲಂಬಿಯಾ ನಿವಾಸಿಗಳನ್ನು ತಂದು ಇಳಿಸಿ ಹೋಗಿದ್ದವು. ಆದರೆ, ಈ ಬಾರಿ ಅಮೆರಿಕ ತನ್ನ ಪ್ರಜೆಗಳಿಗೆ ಕೋಳ ತೊಡಿಸಿ, ಮಿಲಿಟರಿ ವಿಮಾನದಲ್ಲಿ ವಾಪಾಸ್ ಕಳಿಸಿದ್ದನ್ನು ನೋಡಿ ಕೆರಳಿದ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೊ, ತನ್ನ ನಾಗರಿಕರನ್ನು ಹಾಗೆ ಅವಮಾನಕರವಾಗಿ ಮಿಲಿಟರಿ ವಿಮಾನಗಳಲ್ಲಿ ವಾಪಾಸ್ ಕಳಿಸಿದರೆ ತನ್ನ ನೆಲದಲ್ಲಿ ಆ ವಿಮಾನಗಳಿಗೆ ಇಳಿಯಲು ಅನುಮತಿ ಕೊಡುವುದಿಲ್ಲ ಎಂದು ಆವಾಜ್ ಹಾಕಿದರು. ಅದರ ನಂತರ ಅಮೆರಿಕ ಕೊಲಂಬಿಯಾದ ಅಕ್ರಮ ನಿವಾಸಿಗಳನ್ನು ನಾಗರಿಕ ವಿಮಾನಗಳಲ್ಲಿ ಕಳಿಸಿತು.
ಆದರೆ, 140 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ, ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆ ಎಂದು ಎದೆಯುಬ್ಬಿಸುವ ಭಾರತದ ಪ್ರಧಾನಿ, ತನ್ನ ನಾಗರಿಕರನ್ನು ಅಮೆರಿಕ ಹೀಗೆ ಕ್ರಿಮಿನಲ್‍ಗಳಂತೆ ಕೋಳ ಹಾಕಿ, ಮಿಲಿಟರಿ ವಿಮಾನಗಳಲ್ಲಿ ಕಳಿಸುತ್ತಿರುವುದಕ್ಕೆ ಈವರೆಗೂ ಕಮಕ್ ಕಿಮಕ್ ಅನ್ನಿಲ್ಲ. ಇದರ ನಡುವೆಯೇ ಅವರು ಅಮೆರಿಕ ಪ್ರವಾಸ ಹೋಗಿ, ತಮ್ಮ ನೆಚ್ಚಿನ ಗೆಳೆಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾಗಿಯೂ ಬಂದರು. ಅವರು ಅಮೆರಿಕಕ್ಕೆ ಹೋಗಿ ಬಂದ ನಂತರವೂ ನಿನ್ನೆ ಮತ್ತು ಮೊನ್ನೆ ಎರಡು ಬಾರಿ ಅಮೆರಿಕದ ಮಿಲಿಟರಿ ವಿಮಾನಗಳು ಅದೇ ಅವಮಾನಕರ ರೀತಿಯಲ್ಲಿ ಇನ್ನೂರಕ್ಕೂ ಹೆಚ್ಚು ಭಾರತೀಯರನ್ನು ಇಳಿಸಿ ಹೋದವು. ಅಂದರೆ, ಈ ಬಗ್ಗೆ ಪ್ರಧಾನಿ ಮೋದಿ ಟ್ರಂಪ್‍ರೊಂದಿಗಾಗಲೀ, ಇತರ ಅಧಿಕಾರಿಗಳೊಂದಿಗಾಗಲೀ ಯಾವುದೇ ಮಾತುಕತೆ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಂದು ದೇಶದ ಜನ ಸೂಕ್ತ ಪರವಾನಗಿಗಳಿಲ್ಲದೆ ಇನ್ನೊಂದು ದೇಶಕ್ಕೆ ಹೋಗುವುದು ಅಪರಾಧ ಎನ್ನುವುದು ಸರಿಯೇ. ಆದರೆ, ಅದು ಕೈಕಾಲುಗಳಿಗೆ ಕೋಳ ಹಾಕಿ, ಮಿಲಿಟರಿ ವಿಮಾನಗಳಲ್ಲಿ ತುಂಬಿ ವಾಪಾಸ್ ಕಳಿಸುವಂತಹ ಕ್ರಿಮಿನಲ್ ಅಪರಾಧವೇ? ಅವರನ್ನು ಒಂದು ನಾಗರಿಕ ಸಮಾಜದಂತೆ ವಾಪಾಸ್ ಕಳಿಸಬೇಕಾದುದು ಯಾವುದೇ ನಾಗರಿಕ ದೇಶ ಪಾಲಿಸಬೇಕಾದ ಕನಿಷ್ಠ ಮಾನವೀಯ ನಡವಳಿಕೆಯಲ್ಲವೇ? ತನ್ನ ದೇಶದ ಪ್ರಜೆಗಳನ್ನು ಯಾವುದೇ ದೇಶ ಹಾಗೆ ಅವಮಾನಿಸಿದರೆ ಅದರ ವಿರುದ್ಧ ದನಿ ಎತ್ತಿ ಪ್ರತಿಭಟಿಸಬೇಕಾದುದು ಆ ದೇಶದ ಪ್ರಧಾನಿಯ ಜವಾಬ್ದಾರಿ. ನಮ್ಮ ದೇಶದ ಪ್ರಧಾನಿ ಆ ಕೆಲಸ ಮಾಡದಿದ್ದಾಗ ದೇಶದ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್‍ಗಳ ಮೂಲಕ ಪ್ರತಿಭಟಿಸತೊಡಗಿದರು. ವಾಸ್ತವದಲ್ಲಿ, ಇತ್ತೀಚಿನ ವರ್ಷಗಳಲ್ಲಿ ದೇಶದ ಮಾಧ್ಯಮ ಆಳುವ ಕೂಟದ ತುತ್ತೂರಿಯಾಗಿ ಬದಲಾಗಿ ತನ್ನ ಕರ್ತವ್ಯವನ್ನು ಮರೆತಿರುವಾಗ ಪತ್ರಿಕೋದ್ಯಮದ ಘನತೆಯನ್ನು ತುಸುವಾದರೂ ಎತ್ತಿ ಹಿಡಿಯುತ್ತಿರುವವರೇ ಈ ವ್ಯಂಗ್ಯಚಿತ್ರಕಾರರು. ವಿಕಟನ್ ವಾರಪತ್ರಿಕೆ ತನ್ನ ಫೆಬ್ರವರಿ 13ರ ಸಂಚಿಕೆಯಲ್ಲಿ ಪ್ರಧಾನಿ ಮೋದಿಯ ಕೈಕಾಲುಗಳಿಗೇ ಕೋಳ ಹಾಕಿಸಿ, ಅವರ ಮಿತ್ರ ಡೊನಾಲ್ಡ್ ಟ್ರಂಪ್ ಎದುರು ಕುಳ್ಳಿರಿಸಿದ ವ್ಯಂಗ್ಯಚಿತ್ರವನ್ನು ಪ್ರಕಟಿಸಿತು. ಅದನ್ನು ಕಂಡ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ದೂರು ನೀಡಿದರು. ಆ ದೂರಿನನ್ವಯ ಮೋದಿ ಸರ್ಕಾರ ವಿಕಟನ್ ವೆಬ್‍ಸೈಟಿಗೆ ಕಡಿವಾಣ ಹಾಕಿತು.
ವ್ಯಂಗ್ಯಚಿತ್ರಗಳ ಮೇಲೆ ನಿಯಂತ್ರಣ ಹೇರುವ ಕ್ರಮ ಇದೇ ಮೊದಲನೆಯದಲ್ಲ. ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ನಡೆಯುತ್ತಿರುವಾಗ, ಮುಂಬೈ ಲಾ ಎನ್ಫೋರ್ಸ್‌ಮೆಂಟ್ ಏಜೆನ್ಸಿಯು ಭಾರತದ ಐಟಿ ಆಕ್ಟನ್ನು ಉಲ್ಲಂಘಿಸುತ್ತದೆ ಎಂಬ ಕಾರಣ ನೀಡಿ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಮತ್ತು ಮಂಜುಳ್‍ರ ಕೆಲವು ವ್ಯಂಗ್ಯಚಿತ್ರಗಳನ್ನು ತೆಗೆದು ಹಾಕಲು `ಎಕ್ಸ್’ ಗೆ ನೋಟಿಸ್ ನೀಡಿತ್ತು.
ಮೋದೀಜಿ, `ನಮ್ಮದು 56 ಇಂಚಿನ ಎದೆ, ಪಾಕಿಸ್ತಾನಕ್ಕೆ ಕಣ್ಣು ಕೆಂಪು ಮಾಡಿಕೊಂಡು ಉತ್ತರ ಕೊಡುತ್ತೇವೆ’ ಎನ್ನುತ್ತ ಅಧಿಕಾರಕ್ಕೆ ಬಂದರು. ಆದರೆ, ಅತ್ತ ಚೀನಾ ಅರುಣಾಚಲದಲ್ಲಿ ನಮ್ಮ ಹಳ್ಳಿಗಳನ್ನು ಇಡಿ ಇಡೀಯಾಗಿ ಆಕ್ರಮಿಸುತ್ತಿದ್ದರೂ ಕಣ್ಣು ಬಾಯಿ ಮುಚ್ಚಿಕೊಂಡು `ಸಬ್ ಚಾಂಗಾಸಿ’ ಎನ್ನುತ್ತಾರೆ. ಅಮೆರಿಕ ನಮ್ಮ ಪ್ರಜೆಗಳನ್ನು ಕ್ರಿಮಿನಲ್‍ಗಳಂತೆ ಕೈಕಾಲು ಕಟ್ಟಿ, ಮಿಲಿಟರಿ ವಿಮಾನಗಳಲ್ಲಿ ತುಂಬಿ ಕಳಿಸಿ ಅವಮಾನಿಸುತ್ತಿದ್ದರೂ, `ಡೊನಾಲ್ಡ್ ಟ್ರಂಪ್ ಹಮಾರೇ ದೋಸ್ತ್ ಹೈಂ’ ಅನ್ನುತ್ತಾರೆ. ಆದರೆ, ದೇಶದ ವ್ಯಂಗ್ಯಚಿತ್ರಕಾರರು, ಇನ್ನೂ ಅಳಿದುಳಿದಿರುವ ನಿಷ್ಟಾವಂತ ಪತ್ರಕರ್ತರು ಸರ್ಕಾರದ ಇದೇ ದೌರ್ಬಲ್ಯ ಹಾಗೂ ಇತರ ಜೀವವಿರೋಧಿ ನಡವಳಿಕೆಗಳನ್ನು ಟೀಕಿಸಿದಾಗ ಅವರ ಮೇಲೆ ನಿಬಂಧನೆ, ಬೆದರಿಕೆ ಹೇರಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ `ಸರ್ಜಿಕಲ್ ಸ್ಟ್ರೈಕ್’ ನಡೆಸುವುದು `ಅಮೃತಕಾಲ್ ಭಾರತ್ ಕೀ ನಯೀಂ ಪೆಹಚಾನ್ ಹೈಂ’ ಎಂಬಂತಾಗಿದೆ.

ಪಂಜು ಗಂಗೊಳ್ಳಿ
ಮುಂಗಾರು ಪತ್ರಿಕೆಯ ಮೂಲಕ ವ್ಯಂಗ್ಯಚಿತ್ರಕಾರ ವೃತ್ತಿ ಆರಂಭ. ನಂತರ ಲಂಕೇಶ್ ವಾರಪತ್ರಿಕೆಯಲ್ಲಿ ಸ್ವಲ್ಪಕಾಲ, ಬಳಿಕ ಮುಂಬೈನಲ್ಲಿ ಪ್ರೀತೀಶ್ ನಂದಿ ಸಂಪಾದಕತ್ವದ 'ದಿ ಸಂಡೇ ಅಬ್ಸರ್ವರ್' ಪತ್ರಿಕೆಯಲ್ಲಿ, 23 ವರ್ಷಗಳಿಂದ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿದ್ಧಾರೆ.