ಮಧು ಬಂಗಾರಪ್ಪಗೆ ಶಾಲೆಗೆ ಬರುವಂತೆ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲಿ ಆಹ್ವಾನ ನೀಡಿದ್ದು, ಅವರ ಜತೆಗೆ ಫೋಟೋ ತೆಗೆಸಿಕೊಂಡರು. ಅಲ್ಲದೆ ಸಚಿವರು ಪ್ರತಿ ಮಕ್ಕಳಿಗೂ ಹಸ್ತಲಾಘವ ನೀಡಿ, ಶಾಲೆಯಲ್ಲಿ ಸಿಗುವ ಸೌಕರ್ಯಗಳ ಬಗ್ಗೆ ವಿಚಾರಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ಉಂಬ್ಳೆಬೈಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿಮಾನ ನಿಲ್ದಾಣ ಹಾಗೂ ವಿಮಾನದ ಹಾರಾಟವನ್ನು ತೋರಿಸುವ ಸಲುವಾಗಿ ಶಿಕ್ಷಕರು ಮಕ್ಕಳನ್ನು ಪ್ರವಾಸ ಕರೆದುಕೊಂಡು ಬಂದಿದ್ದರು.
ಅನಿರೀಕ್ಷಿತವಾಗಿ ಸಿಕ್ಕ ಸರ್ಕಾರಿ ಶಾಲೆಯ ಮಕ್ಕಳನ್ನು ಮಾತನಾಡಿಸಿದ ಮಧು ಬಂಗಾರಪ್ಪ ಅವರು ಮಕ್ಕಳನ್ನು ಮಾತನಾಡಿಸಿದ್ದು, ಊಟ ಮಾಡಿದ್ರಾ? ಮೊಟ್ಟೆ ಕೊಟ್ಟಿದ್ದಾರಾ ಎಂದೆಲ್ಲ ಪ್ರಶ್ನಿಸಿದ್ದಾರೆ. ಮಧು ಬಂಗಾರಪ್ಪನವರ ಮಾತುಗಳಿಗೆ ಮಕ್ಕಳು ಹೌದು ಸರ್ ಎಂದು ಉತ್ತರಿಸಿದರು.

ಸಚಿವರ ಪ್ರಶ್ನೆಗಳಿಗೆ ಅಂಜದೆ ಉತ್ತರಿಸಿದ ಮಕ್ಕಳು ನಿಮ್ಮನ್ನು ನೋಡುತ್ತಿರುವುದು ಖುಷಿಯಾಗಿದೆ ಸರ್ ಎಂದಾಗ, ಇದಕ್ಕೆ ಪ್ರತಿಯಾಗಿ ಸಚಿವರೂ ಕೂಡಾ ನಿಮ್ಮನ್ನೆಲ್ಲಾ ಭೇಟಿಯಾಗಿ ನನಗೂ ಸಂತೋಷವಾಗಿದೆ ಮಕ್ಕಳೇ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ʼಬಸವ ಉತ್ಸವʼ ಮರೆಯಿತೇ ರಾಜ್ಯ ಸರ್ಕಾರ?
ಈ ನಡುವೆ ವಿದ್ಯಾರ್ಥಿನಿಯೊಬ್ಬರು, “ಸರ್ ನೀವು ತುಂಬಾ ಕ್ಯೂಟ್ ಆಗಿದ್ದೀರ” ಎಂದಾಗ ನಕ್ಕ ಸಚಿವರು, ನೀನೂ ಕೂಡಾ ಕ್ಯೂಟ್ ಆಗಿದ್ದೀಯಾ ಎಂದರು. ಇದರ ಬೆನ್ನಲ್ಲೆ ವಿದ್ಯಾರ್ಥಿನಿಯೊಬ್ಬರು ʼಬನ್ನಿ ಸಾರ್ ಈಗ ನಮ್ಮ ಶಾಲೆಗೆ ಹೋಗಣವೆಂದು ಸ್ಥಳದಲ್ಲಿಯೇ ಆಹ್ವಾನ ನೀಡಿದಳು. ಪ್ರತಿಯಾಗಿ ನಕ್ಕ ಸಚಿವರು, ಇಲ್ಲಮ್ಮ ಈಗ ಬೇರೆ ಕೆಲಸವಿದೆ ನಾನು ಹೋಗಬೇಕೆಂದು ವಿದ್ಯಾರ್ಥಿನಿಗೆ ತಿಳಿಸಿದರು.
ಮಕ್ಕಳ ಜತೆಗೆ ಕೆಲಕಾಲ ನಗುತ್ತ ಕಾಲ ಕಳೆದ ಸಚಿವರು, ರಾಜಕಾರಣ ಬದಿಗಿಟ್ಟು ಮಕ್ಕಳ ಜತೆಗೆ ತಮಾಷೆ ಮಾಡಿಕೊಂಡು ವಿಮಾನ ಬರುವವರೆಗೂ ಕಾದರು. ಅದೇ ಸಮಯದಲ್ಲಿ ವಿಮಾನವೊಂದು ಶಿವಮೊಗ್ಗ ಏರ್‌ಫೋರ್ಟ್‌ಗೆ ಬಂದು ಇಳಿಯಿತು. ವಿಮಾನ ಲ್ಯಾಂಡಿಂಗ್ ಆಗುವುದನ್ನು ಕಂಡ ವಿದ್ಯಾರ್ಥಿಗಳು ವಿಶೇಷವಾಗಿ ಸಂಭ್ರಮಿಸಿದರು. ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತ ವಿಮಾನದ ವರ್ಣನೆ ಮಾಡಿದರು.