ಸಾಲದ ಕಂತು ಕಟ್ಟಿಲ್ಲವೆಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯ ಕಿವಿಯೋಲೆ ಕಿತ್ತುಕೊಂಡು ನಿಂದಿಸಿದ ಕೋಣಂದೂರು ಬ್ಯಾಂಕ್ ಸಿಬ್ಬಂದಿ ಅವರನ್ನು ಬ್ಯಾಂಕ್‌ನಿಂದ ಹೊರದಬ್ಬಿದ ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಿಂದ ಕೂಗಳತೆ ದೂರದ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್ ಚನ್ನವೀರಪ್ಪ ಅವರ ಪತ್ನಿ ಹಾಲಮ್ಮ(86) ಈ ಹಿಂದೆ ಮನೆ ದುರಸ್ತಿಗೆಂದು ಪಿಂಚಣಿ ಹಣದ ಆಧಾರದ ಮೇಲೆ ಸಾಲ ಪಡೆದಿದ್ದರು. ಅವರಿಗೆ ಕಳೆದ ನಾಲೈದು ತಿಂಗಳಿನಿಂದ ಪಿಂಚಣಿ ಹಣ ಬಂದಿರರಲಿಲ್ಲ. ಹಾಗಾಗಿ ಹಾಲಮ್ಮ ಮಾಡಿದ್ದ ಸಾಲದ ಒಂದು ಕಂತು ಕಟ್ಟಿಲ್ಲವೆನ್ನುವ ಕಾರಣಕ್ಕೆ ಅವರ ಕಿವಿಯಲ್ಲಿದ್ದ ಓಲೆಯನ್ನು ಕಿತ್ತುಕೊಂಡು ನಿಂದಿಸಿ ಹೊರದಬ್ಬಿದ್ದಾರೆ. ಈ ಬಗ್ಗೆ ಕೋಣಂದೂರು ಉಪಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಂಚಣಿ ಹಣದ ಆಧಾರದ ಮೇಲೆ ಮನೆ ದುರಸ್ತಿಗೆ ಕೋಣಂದೂರಿನ ಬ್ಯಾಂಕ್ ಒಂದರಲ್ಲಿ ಸಾಲ ಪಡೆದಿದ್ದ ವೃದ್ದೆಗೆ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲದ ಕಾರಣಕ್ಕೆ ಸಾಲದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.
“ಫೆಬ್ರವರಿ 10ರಂದು ಮನೆಯಲ್ಲಿ ದಿನಸಿ ಸಾಮಾನು ಇಲ್ಲದ ಕಾರಣಕ್ಕೆ ತನ್ನ ಕಿವಿಯಲ್ಲಿದ್ದ ಓಲೆ, ಚಿನ್ನದ ಸರವನ್ನು ಅಡವಿಡಲು ಬ್ಯಾಂಕ್‌ಗೆ ಬಂದಾಗ ಬ್ಯಾಂಕ್ ಸಿಬ್ಬಂದಿ ಓಲೆ, ಚಿನ್ನದ ಸರ ಪಡೆದು ಹಣ ನೀಡದೆ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಹೊರದಬ್ಬಿದ್ದಾರೆ” ಎಂದು ಆರೋಪಿಸಿ ವೃದ್ಧೆಯ ಮಗಳು ಶಕುಂತಳಾ ದೂರು ನೀಡಿದ್ದಾರೆ.

“ಬಿಲ್ಲೇಶ್ವರ ಗ್ರಾಮದ ಎಸ್ ಚನವೀರಪ ಸ್ವಾತಂತ್ರ್ಯ ಹೋರಾಟದ ಜೈಲುವಾಸ ಅನುಭವಿಸಿ ದೇಶಸೇವೆ ಮಾಡಿದ್ದಾರೆ. ಅವರ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ. ಆದರೆ ನಮ್ಮನ್ನು ಸರ್ಕಾರಗಳು ಹಾಗೂ ವ್ಯವಸ್ಥೆ ಇಷ್ಟು ನಿಕೃಷ್ಟವಾಗಿ ಕಾಣುತ್ತಿರುವುದು ಬೇಸರದ ಸಂಗತಿ” ಎಂದು ವೃದ್ಧೆ ಹಾಲಮ್ಮ ತಮ್ಮ ನೋವು ತೋಡಿಕೊಂಡರು.
“ವಯಸ್ಸಾದ ಅ ತಾಯಿಗೆ ನ್ಯಾಯ ದೊರಕಿಸಿಕೊಟ್ಟು, ಕಟುಕತನ ಪ್ರದರ್ಶಿಸಿದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.