- ನವಾಬ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 92 ರ ಅಡಿ ಪ್ರಕರಣ ದಾಖಲು
- ‘ಭಾರತದ ಕಳ್ಳರ ಮಾರುಕಟ್ಟೆಯಲ್ಲಿ ದಾಳಿ’ ಎಂಬ ಶಿರ್ಷಿಕೆಯಡಿ ವಿಡಿಯೊ ಪೋಸ್ಟ್
ರಾಜಧಾನಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವಿದೇಶಿ ಪ್ರವಾಸಿಗರೊಬ್ಬರ ಮೇಲೆ ಸ್ಥಳೀಯ ವ್ಯಾಪಾರಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಂಡನ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆದರ್‌ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಹಲ್ಲೆಗೊಳಗಾದವರು. ಇವರು ಯೂಟ್ಯೂಬರ್ ಆಗಿದ್ದು, ಚಿಕ್ಕಪೇಟೆಯಲ್ಲಿ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ವ್ಯಾಪಾರಿಯೊಬ್ಬ ಇವರನ್ನು ಎಳೆದಾಡಿ ವಿಡಿಯೊ ಮಾಡಲು ಅಡ್ಡಿಪಡಿಸಿದ್ದಾನೆ.
ಹಲ್ಲೆಗೊಳಗಾದ ವ್ಯಕ್ತಿ ಯುಟ್ಯೂಬರ್ ಪೆಡ್ರೊ ಮೋಟಾ ತನ್ನ ಯೂಟ್ಯೂಬ್ ಚಾನೆಲ್ ‘ಮ್ಯಾಡ್ಲಿ ರೋವರ್’ ನಿಂದ ಭಾರತದ ಕಳ್ಳರ ಮಾರುಕಟ್ಟೆಯಲ್ಲಿ ದಾಳಿ ಎಂಬ ಶಿರ್ಷಿಕೆಯಡಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
“ಭಾರತದಲ್ಲಿ ಪ್ರಯಾಣಿಸುವ ವಿದೇಶಿಗರು ಬೆಂಗಳೂರಿನಲ್ಲಿ ಕಳ್ಳರ ಮಾರುಕಟ್ಟೆಯನ್ನು ಅನುಭವಿಸುತ್ತಾರೆ. ಇದನ್ನು ‘ಸಂಡೇ ಮಾರ್ಕೆಟ್’ ಅಥವಾ ‘ಕಳ್ಳರ ಮಾರುಕಟ್ಟೆ’ ಎಂದು ಕರೆಯುತ್ತಾರೆ. ಆ ಪ್ರದೇಶವನ್ನು ಅನ್ವೇಷಿಸಲು ಪ್ರಾರಂಭಿಸಿದೆ. ಈ ವೇಳೆ ಕೋಪಗೊಂಡ ಓರ್ವ ವ್ಯಕ್ತಿ ನನ್ನ ಕೈ ಮತ್ತು ತೋಳನ್ನು ಹಿಡಿದು ತಿರುಚುವ ಮೂಲಕ ನನ್ನ ಮೇಲೆ ದಾಳಿ ಮಾಡಿದನು. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವರು ನನ್ನ ಹಿಂದೆ ಬರುತ್ತಿದ್ದರು. ನನ್ನ ಕೈ ಬಿಡಲು ಅವರಲ್ಲಿ ಮನವಿ ಮಾಡಿದೆ” ಎಂದು ಮೋಟಾ ಬರೆದುಕೊಂಡಿದ್ದಾರೆ.
ಮಾರ್ಚ ತಿಂಗಳಿನಲ್ಲಿ ನಡೆದ ಘಟನೆಯ ವಿಡಿಯೊ ಅನ್ನು ಮೋಟಾ ಸೋಮವಾರ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಂಗಡಿಯವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸರನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸುರಕ್ಷಿತ ಮಟ್ಟಕ್ಕಿಂತ ಕೆಟ್ಟದಾದ ಬೆಂಗಳೂರಿನ ವಾಯು ಗುಣಮಟ್ಟ: ವರದಿ
“ವಿದೇಶಿ ಪೆಡ್ರೊ ಮೋಟಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ದೂರಿಗೆ ಸಂಬಂಧಿಸಿದಂತೆ, ನವಾಬ್ ಹಯಾತ್ ಷರೀಫ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 92 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ಬಿ ನಿಂಬರಗಿ ಹೇಳಿದರು.