ಬಹುಸಂಸ್ಕೃತಿಯ ತೊಟ್ಟಿಲು ಕರಾವಳಿ, ಈ ಕರಾವಳಿಯನ್ನು ಇಲ್ಲಿಯ ಬಹುಸಂಖ್ಯಾತರು ಕಟ್ಟಿದ್ದಾರೆ. ಮಂಗಳೂರು ಮಲ್ಲಿಗೆ ಇದಕ್ಕೆ ಉತ್ತಮ ಉದಾಹರಣೆ, ಕ್ರೈಸ್ತರ ಮಲ್ಲಿಗೆಯನ್ನು ಬೆಳೆಯುತ್ತಾರೆ, ಮುಸ್ಲಿಮರು (ಬ್ಯಾರಿ) ಗಳು ಮಾರಾಟ ಮಾಡುತ್ತಾರೆ ಮತ್ತು ಇಲ್ಲಿಯ ಹಿಂದೂಗಳು ಅದನ್ನು ಮುಡುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕೋಮು ಶಕ್ತಿಗಳು ಬಹುಸಂಸ್ಕೃತಿಯನ್ನು ಒಡೆಯುವ ಮೂಲಕ ಮಲ್ಲಿಗೆಯ ಸುವಾಸನೆಯನ್ನು ಕೆಡಿಸಲು ಶ್ರಮಿಸುತ್ತಿದ್ದಾರೆ ಎಂದು ಖ್ಯಾತ ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.
ಅವರು ಇಂದು ಉಡುಪಿಯ ಕುಕ್ಕಂಜೆಯಲ್ಲಿರು ಅನುಗ್ರಹ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ಮಹಿಳಾ ಬಂಧುತ್ವ ವೇದಿಕೆ – ಕರ್ನಾಟಕ, ಮಂಗಳೂರು ವಿಭಾಗದ ಪದಾಧಿಕಾರಿಗಳ ಸಮಾವೇಶ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಬಹುಸಂಸ್ಕೃತಿಯ ಅಳಿವು ಉಳಿವು ವಿಷಯದಲ್ಲಿ ಮಾತನಾಡುತ್ತಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯನ್ನು ಇಲ್ಲಿಯ ಜನರು ಪರಸ್ಪರ ಪ್ರೀತಿಯಿಂದ ಕಟ್ಟಿದ್ದರು ಆದರೆ 80ರ ದಶಕದಲ್ಲಿ ದಕ್ಷಣ ಕನ್ನಡದಲ್ಲಿ ಕೋಮು ದ್ವೇಷ ಶುರುವಾಗಿದ್ದು,
ಧರ್ಮದ ವ್ಯಾಪಾರ, ವಿದ್ಯೆಯ ವ್ಯಾಪಾರ, ರಾಜಕೀಯ ವ್ಯಾಪಾರ ಪ್ರಾರಂಭವಾಯಿತು. ಮದುವೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಕೋಟಿಗಟ್ಟಲೇ ಖರ್ಚು ಮಾಡುವ ಈ ಭಾಗದ ಜನರು ಆ ಹಣದಲ್ಲಿ ನೂರಾರು ಬಡವರಿಗೆ ಸೂರನ್ನು ಕಲ್ಪಿಸಿಕೊಡುವಲ್ಲಿ ಸೋತುಹೋಗಿದ್ದಾರೆ ಎಂದು ಹೇಳಿದರು
ನಾರಾಯಣ ಗುರುವನ್ನು ಒಪ್ಪುವವರು ಆರ್ ಎಸ್ ಎಸ್ ಅನ್ನು ಒಪ್ಪಲು ಸಾಧ್ಯವೇ ಇಲ್ಲ. ಹಿಂದು ಧರ್ಮದ ಬಗ್ಗೆ ಯಾರಿಗೂ ವಿರೋಧವಿಲ್ಲ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ನಾರಾಯಣ ಗುರು ಹೇಳಿದ ಕಲಿಸಿದ್ದೇ ಆ ಹಿಂದು ಧರ್ಮದ ಸಾರವನ್ನೇ ಆದರೆ ಗೋಳ್ವಾಲ್ಕರ್ ಹೇಳಿದ ಹಿಂದು ಧರ್ಮಕ್ಕೆ ನಮ್ಮ ವಿರೋಧ ಈ ಬಗ್ಗೆ ಪ್ರತಿಯೊಬ್ಬ ಆರ್ ಎಸ್ ಎಸ್, ಹಿಂದು ಕಾರ್ಯಕರ್ತ ಆತ್ಮಶೋಧನೆ ಮಾಡಿಕೊಳ್ಳಬೇಕು. ರಾಮನನ್ನು, ಕೃಷ್ಣ ನನ್ನು ರಾಜಕೀಯಕ್ಕೆ ತರುವವರು ದೇಶ ದ್ರೂಹಿಗಳು, ನಿಮ್ಮ ಪ್ರಕಾರ ಹಿಂದು ಆಗಲು ಹಿಂದು ತಂದೆ ತಾಯಿಗೆ ಹುಟ್ಟಿದರೆ ಸಾಕಾ ಅಥವಾ ಬಿಜೆಪಿ ಸದಸ್ಯ ಆಗಬೇಕಾ? ಎಂದು ಪ್ರಶ್ನಿಸಿದರು.

ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ
ಮಾನವ ಬಂಧುತ್ವ ವೇದಿಕೆ ರಾಜಕೀಯ ಮಾಡಲು ಹುಟ್ಟಿದ ವೇದಿಕೆಯಲ್ಲ, ಶೋಷಿತರು, ಮರ್ದಿತರು ಮುಖ್ಯವಾಹಿನಿಗೆ ಬರಬೇಕು, ಬುದ್ದ, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು ಯಾವ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೋ ಅದನ್ನೇ ಮತ್ತೆ ಮತ್ತೆ ಜನರಿಗೆ ನೆನಪಿಸುವ ಸಲುವಾಗಿ ಹುಟ್ಟಿಕೊಂಡ ವೇದಿಕೆ ಇದಾಗಿದೆ ಎಂದು ಹೇಳಿದರು.

ಚಿಂತಕ ಪ್ರೊ. ಕೆ.ಫಣಿರಾಜ್ ಬಹುತ್ವ ಭಾರತದ ಪ್ರಸ್ತುತ ಸವಾಲುಗಳು ಎಂಬ ವಿಷಯದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ವಹಿಸಿದ್ದರು. ಮಹಿಳಾ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕಿ ಡಾ. ಲೀಲಾ ಸಂಪಿಗೆ, ಉಡುಪಿ ಜಿಲ್ಲಾ ಸಂಚಾಲಕಿ ಶಾಂತಿ ಬೈಂದೂರು, ದ.ಕ. ಜಿಲ್ಲಾ ಸಂಚಾಲಕ ಪ್ರೇಮಿ ಫರ್ನಾಂಡೀಸ್,
ಮಂಗಳೂರು ವಿಭಾಗೀಯ ಸಂಚಾಲಕರಾದ ಕೆ.ಎಸ್.ಸತೀಶ್‌ಕುಮಾರ್, ರಾಜ್ಯ ಸಮಿತಿ ಸದಸ್ಯರಾದ ರೊನಾಲ್ಡ್ ಮನೋಹರ ಕರ್ಕಡ, ದ.ಕ. ಜಿಲ್ಲಾ ಸಂಚಾಲಕ ಜಯರಾಂ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟೀವನ್ ಕಾರ್ಯಕ್ರಮ ನಿರೂಪಿಸಿದರು.
