ರಸ್ತೆ ವಿಭಜಕ ಮಧ್ಯೆ ಇರುವ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣದ ತ್ರಿಪುರಾಂತ ಸಮೀಪದ ರಸ್ತೆಯಲ್ಲಿ ನಡೆದಿದೆ.
ಬಸವಕಲ್ಯಾಣದ ತ್ರಿಪುರಾಂತ ನಿವಾಸಿಗಳಾದ ಗುಂಡಪ್ಪ ಬಿರಾದರ್(46), ಉಮೇಶ ರಾಜೋಳೆ(42) ಮೃತರು ಎನ್ನಲಾಗಿದೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಗರದ ಹೊರವಲಯದ ಸಸ್ತಾಪುರ ಕಡೆಯಿಂದ ಬಸವಕಲ್ಯಾಣಕ್ಕೆ ಆಗಮಿಸುವ ವೇಳೆ ದುರ್ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕ ಮಧ್ಯೆ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಿಪಿಐ ಅಲಿಸಾಬ್, ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.