ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!

Date:

Advertisements
ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ, ಮೂಲಭೂತ ಸೌಕರ್ಯಗಳ ನೆಪದಲ್ಲಿ ಕೋಟ್ಯಂತರ ರೂ.ಗಳ ಕಾಮಗಾರಿ ಚಾಲ್ತಿಯಲ್ಲಿದೆ. ಅದು ಅಧಿಕಾರಸ್ಥರಿಗೆ ಹಾಗೂ ಅವಕಾಶವಾದಿಗಳಿಗೆ ವರದಾನವಾಗಿ ಪರಿಣಮಿಸಿದೆ.

ಈ ಬಾರಿ ಫೆಬ್ರವರಿಯಲ್ಲಿಯೇ ಬೇಸಿಗೆ ಬಂದಿದೆ. ರಾಜ್ಯದ ನಾನಾ ಪ್ರದೇಶಗಳಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮೀರಿಹೋಗುತ್ತಿದೆ. ಬಿಸಿಲು ಮತ್ತು ಸೆಕೆ ಹೆಚ್ಚಾಗಿ ಬೆವರಿಳಿಸುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಅಧಿಕ ಮಳೆ, ಚಳಿ ಮತ್ತು ಈಗ ಬಿರುಬೇಸಿಗೆ ಜನರನ್ನು ಹೈರಾಣಾಗಿಸುತ್ತಿದೆ.

ಈ ಹವಾಮಾನ ವೈಪರೀತ್ಯ ಎಂಬುದು ನಮಗಷ್ಟೇ ಅಲ್ಲ, ಇಡೀ ಜಗತ್ತನ್ನೇ ಬಾಧಿಸುತ್ತಿರುವ ಜಾಗತಿಕ ಸಮಸ್ಯೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಪ್ರಾಕೃತಿಕ ಅವಘಡ ಸಂಭವಿಸಿದರೆ, ಯಾವುದೇ ಭಯವಿಲ್ಲ ಎಂದು ನಾವು ಭಾವಿಸುವಂತಿಲ್ಲ. ಆ ಅವಘಡ, ಭವಿಷ್ಯದಲ್ಲಿ ನಮ್ಮ ಮೇಲೆಯೂ ಅಂತಹ ವ್ಯತಿರಿಕ್ತ ಪರಿಣಾಮ ಬೀರದೆ ಬಿಡುವುದಿಲ್ಲ. ಹಾಗಾಗಿ, ಪರಿಸರದ ಮೇಲಿನ ಆಕ್ರಮಣ ತಡೆಯುವ ನಿಟ್ಟಿನಲ್ಲಿ ಸರ್ಕಾರ ಸುಮ್ಮನೆ ಕೂರುವಂತಿಲ್ಲ.

ಸುಮ್ಮನೆ ಕೂರುವಂತಿಲ್ಲ ಎನ್ನುವುದೇ ಸರ್ಕಾರಕ್ಕೆ, ಅಧಿಕಾರಸ್ಥ ರಾಜಕಾರಣಿಗಳಿಗೆ ವರದಾನವಾಗಿ ಪರಿಣಮಿಸಿದೆ. ಅಂದರೆ ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪಗಳಿಂದ ಜನರ ರಕ್ಷಣೆಯ ನೆಪದಲ್ಲಿ ಕೋಟ್ಯಂತರ ರೂ.ಗಳ ಕಾಮಗಾರಿ ಚಾಲ್ತಿಯಲ್ಲಿದೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪಾಠ ಕಲಿಯದ ‘ರೈಲ್ವೆ ಇಲಾಖೆ’

ಈಗ ಬೆಂಗಳೂರು ಮಹಾನಗರವನ್ನೇ ತೆಗೆದುಕೊಳ್ಳಿ, ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಪಡೆದಿರುವ ಈ ನಗರಕ್ಕೆ ದೇಶ-ವಿದೇಶಗಳಿಂದಷ್ಟೇ ಅಲ್ಲ; ರಾಜ್ಯದ ಮೂಲೆ ಮೂಲೆಗಳಿಂದ, ಹಲವಾರು ಕಾರಣಗಳಿಗಾಗಿ ಪ್ರತಿದಿನ ಲಕ್ಷಾಂತರ ಮಂದಿ ಬರುತ್ತಿದ್ದಾರೆ. ಹೀಗೆ ಬಂದು ನೆಲೆಯೂರಿದವರಿಂದಾಗಿ ಬೆಂಗಳೂರು ನಗರದ ಜನಸಂಖ್ಯೆ ಸದ್ಯಕ್ಕೆ ಒಂದೂವರೆ ಕೋಟಿ ದಾಟಿದೆ. ಈ ಜನಸಂಖ್ಯೆಗೆ ಮೂಲಭೂತ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ವಸತಿ, ರಸ್ತೆ, ನೀರು ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಅದರಲ್ಲೂ ರಸ್ತೆ ಮತ್ತು ನೀರು ಮೂಲಭೂತ ಅಗತ್ಯಗಳಾಗಿವೆ. ಅವುಗಳನ್ನಾದರೂ ಸರ್ಕಾರ ಸಮರ್ಥವಾಗಿ ಪೂರೈಸಿದೆಯೇ?

ಬೆಂಗಳೂರು ನಗರ ಬೆಳೆದಂತೆಲ್ಲ ಸಂಚಾರದಟ್ಟಣೆ ನಿಯಂತ್ರಣಕ್ಕೆ ಬಾರದ, ಬಗೆಹರಿಸಲಾಗದ ಭಾರೀ ಸಮಸ್ಯೆಯಾಗಿದೆ. ಸಂಚಾರದಟ್ಟಣೆ ನಿಯಂತ್ರಣಕ್ಕೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ‘ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ 1,700 ಕೋಟಿ ರೂ. ವೆಚ್ಚದಲ್ಲಿ ಸುಮಾರು 30 ವರ್ಷಗಳ ಕಾಲ ಬಾಳಿಕೆ ಬರುವ ಶಾಶ್ವತ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ’ ಎಂದಿದ್ದಾರೆ. ಸಚಿವರ ಶಾಶ್ವತ ರಸ್ತೆಗಳ ನಿರ್ಮಾಣ ಕಾರ್ಯವನ್ನು ಅಪಹಾಸ್ಯ ಮಾಡುವಂತೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ರಸ್ತೆಗುಂಡಿಗಳನ್ನು ಮುಚ್ಚಲು 660 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ರಸ್ತೆಗುಂಡಿಗಳು ಈಗಲೂ ಬಾಯ್ತೆರೆದು ಕೂತಿವೆ. ಸಾರ್ವಜನಿಕರಿಗೆ ಮೃತ್ಯುಕೂಪಗಳಾಗಿವೆ’ ಎಂದಿದ್ದಾರೆ.

ಇನ್ನು ಕುಡಿಯುವ ನೀರಿನ ಸಮಸ್ಯೆ- ಮತ್ತೊಂದು ಮಗ್ಗುಲನ್ನೇ ಬಿಚ್ಚಿಡುತ್ತದೆ. ಕಾಸ್ಮೋ ಸಿಟಿ ಬೆಂಗಳೂರಿನಲ್ಲಿ ಪ್ರತಿಬಾರಿ ಮಾರ್ಚ್, ಏಪ್ರಿಲ್‌ನಲ್ಲಿ ಶುರುವಾಗಲಿದ್ದ ಕುಡಿಯುವ ನೀರಿನ ಸಮಸ್ಯೆ ಈಗಲೇ- ಫೆಬ್ರವರಿಯಲ್ಲಿಯೇ ಶುರುವಾಗಿದೆ. ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರಕ್ಕೆ ಅಗತ್ಯವಿರುವುದು 2,250 ಎಂ.ಎಲ್.ಡಿ(millions of liter per day)ಯಷ್ಟು ನೀರು. ಆದರೆ ನಾಲ್ಕೂ ಹಂತಗಳ ಕಾವೇರಿ ನೀರಿನ ಯೋಜನೆಯಿಂದ ನಮಗೆ ಲಭ್ಯವಾಗುತ್ತಿರುವುದು ಕೇವಲ 1,450 ಎಂ.ಎಲ್.ಡಿಯಷ್ಟು ಮಾತ್ರ. ಅದರಲ್ಲೂ ಜಲಮಂಡಳಿ ದಿನಕ್ಕೆ ಸರಿಸುಮಾರು 900 ಮಿಲಿಯನ್ ಲೀಟರ್‌ಗಳನ್ನು ಮಾತ್ರ ಪೂರೈಸುತ್ತಿದೆ. ಈ ಅಂತರ ಮತ್ತು ಅಭಾವ ಖಾಸಗಿ ನೀರಿನ ಟ್ಯಾಂಕರ್‌ ಉದ್ಯಮ ಹುಲುಸಾಗಿ ಬೆಳೆಯಲು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ.

ಕುತೂಹಲಕರ ಸಂಗತಿ ಎಂದರೆ, ಸರ್ಕಾರ ಮತ್ತು ಜಲಮಂಡಳಿಯ ಉಸ್ತುವಾರಿಯಲ್ಲಿ ಪೈಪ್‌ಲೈನ್‌ಗಳು, ಕೆರೆಗಳು, ನದಿಗಳು, ಜಲಾಶಯಗಳು, ಸರೋವರಗಳೆಂಬ ಜಲಮೂಲಗಳಿದ್ದರೂ; ಅದಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುತ್ತಿದ್ದರೂ; ಇವತ್ತಿಗೂ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿಲ್ಲ. ಆದರೆ, ಇದಾವ ಜಲಮೂಲಗಳನ್ನು ಅಧಿಕೃತವಾಗಿ ಹೊಂದಿಲ್ಲದಿರುವ 3,500ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್ ಮಾಲೀಕರು, ನಗರದಲ್ಲಿ ನೀರಿನ ಕೃತಕ ಅಭಾವ ಸೃಷ್ಟಿಸಿ, ನೀರು ಸರಬರಾಜನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. 6 ಸಾವಿರ ಲೀಟರ್ ನೀರಿನ ಟ್ಯಾಂಕರ್‍‌ವೊಂದಕ್ಕೆ 500ರಿಂದ 3 ಸಾವಿರದವರೆಗೆ ಮಾರಾಟ ಮಾಡುತ್ತಿದ್ದಾರೆ. ಕುಡಿದ ನೀರು ಸರಾಗವಾಗಿ ಗಂಟಲಲ್ಲಿ ಇಳಿಯದಂತೆ ಮಾಡಿದ್ದಾರೆ.

ಈ ಟ್ಯಾಂಕರ್ ನೀರು ಮಾರಾಟ ಜಾಲದಲ್ಲಿ, ವಿವಿಧ ವಾರ್ಡ್‌ಗಳಲ್ಲಿ ನೀರು ಬಿಡುವ ವಾಟರ್‍‌ಮನ್‌ನಿಂದ ಹಿಡಿದು ಜಲಮಂಡಳಿಯ ಎಂಜಿನಿಯರ್‍‌ಗಳು, ಟ್ಯಾಂಕರ್‍‌ಗಳಿಗೆ ಪರವಾನಗಿ ನೀಡುವ ಬಿಬಿಎಂಪಿಯ ಅಧಿಕಾರಿಗಳು, ಆ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ ಏರಿಯಾ ಕಾರ್ಪೊರೇಟರ್‍‌ಗಳು, ಶಾಸಕರು, ಸಚಿವರಿದ್ದಾರೆ. ಖಾಸಗಿ ಟ್ಯಾಂಕರ್ ಮಾಲೀಕರು ಇವರೆಲ್ಲರ ಸಂಪರ್ಕದಲ್ಲಿದ್ದಾರೆ. ಇವರೆಲ್ಲರನ್ನೂ ಸಂಭಾಳಿಸುತ್ತಿದ್ದಾರೆ.

ಈ ವ್ಯವಹಾರದ ಆಳ-ಅಗಲ ಅರಿಯಲು ಈ ಉದಾಹರಣೆ ಅನುಕೂಲವಾಗಬಹುದು. ಕಳೆದ ಎರಡು ವರ್ಷಗಳ ಹಿಂದೆ, ರಾಜರಾಜೇಶ್ವರಿನಗರದ ವ್ಯಾಪ್ತಿಗೆ ಬರುವ, 250 ಮನೆಗಳಿರುವ ಅಪಾರ್ಟ್‌ಮೆಂಟ್‌ವೊಂದರ ನಾಲ್ಕು ಬೋರ್‍‌ವೆಲ್‌ಗಳು ಬತ್ತಿಹೋದವು. ಅಗತ್ಯ ನೀರಿಗಾಗಿ ಅಪಾರ್ಟ್‌ಮೆಂಟ್‌ ವಾಸಿಗಳು ಖಾಸಗಿ ಟ್ಯಾಂಕರ್ ಮೊರೆ ಹೋದರು. ತಾತ್ಕಾಲಿಕ ವ್ಯವಸ್ಥೆಯಾದ ನಂತರ ಅವರದೇ ಜಾಗದಲ್ಲಿ 6 ಬೋರ್‍‌ವೆಲ್‌ ಕೊರೆಸಲು ಮುಂದಾದರು. ಆದರೆ ರಾಜರಾಜೇಶ್ವರಿನಗರ ಶಾಸಕರಿಂದ ಅಪಾರ್ಟ್‌ಮೆಂಟ್‌ ಸಂಘದ ಪದಾಧಿಕಾರಿಗಳಿಗೆ ಧಮ್ಕಿ ರೂಪದ ಫೋನ್ ಕರೆ ಬಂತು. ಬೆಚ್ಚಿದ ಪದಾಧಿಕಾರಿಗಳು ಬೋರ್‍‌ವೆಲ್‌ ಕೊರೆಸುವುದನ್ನು ಬಿಟ್ಟರು. ಇವತ್ತಿಗೂ ಖಾಸಗಿ ಟ್ಯಾಂಕರ್ ನೀರನ್ನೇ ಬಳಸುತ್ತಿದ್ದಾರೆ. ಹೀಗಾಗಿ ಇವತ್ತು, ನೀರಿನ ಟ್ಯಾಂಕರ್ ಮಾಫಿಯಾವು ರಾಜಕೀಯ ನಾಯಕರೊಂದಿಗೆ ನಿಕಟವಾಗಿ ಕೆಲಸ ಮಾಡುವ ಅನೇಕ ಲಾಬಿಗಳಲ್ಲಿ ಒಂದಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೆಟ್ರೋ ದರ ಏರಿಕೆ- ‘ಸತ್ತಂತೆಯೂ ಅತ್ತಂತೆಯೂ’ ಆಡುತ್ತಿರುವ ಈ ನಾಟಕ ನಿಲ್ಲಲಿ

ಒಂದಾಗಿಲ್ಲ ಎಂದು ತೋರಲು, ಸರ್ಕಾರವೇ ಮುಂದೆ ನಿಂತು ಕೆರೆಗಳ ಪುನಶ್ಚೇತನ, ಅಂತರ್ಜಲ ಮಟ್ಟ ಹೆಚ್ಚಿಸಲು ಇಂಗುಗುಂಡಿಗಳ ನಿರ್ಮಾಣ, ಬೋರ್‍‌ವೆಲ್‌ ಮರುಪೂರಣಗಳಂತಹ ಪರಿಸರಸ್ನೇಹಿ ಮತ್ತು ಜನತೆಯ ಹಿತರಕ್ಷಣೆಯ ಮಾತುಗಳನ್ನಾಡುತ್ತಿದೆ. ಅಷ್ಟೇ ಅಲ್ಲ, ನಗರದ ನೀರಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಾವೇರಿ 5ನೇ ಹಂತದ ಯೋಜನೆಗಾಗಿ 4,336 ಕೋಟಿ ರೂ.ಗಳನ್ನು ವೆಚ್ಚ ಮಾಡಿ, 775 ಎಂ.ಎಲ್.ಡಿಯಷ್ಟು ನೀರನ್ನು 110 ಹಳ್ಳಿಗಳಿಗೆ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಪ್ರಚಾರ ಪಡೆದದ್ದೂ ಆಗಿದೆ.

ಇಷ್ಟಾದರೂ, ಬೆಂಗಳೂರು ನಗರದಲ್ಲಿ ಬಡವರು ಕೂಡ ಬದುಕುವಂತಹ ವಾತಾವರಣ ಸೃಷ್ಟಿಸಲಾಗಿಲ್ಲ. ಮಧ್ಯಮವರ್ಗದವರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಎಂದಿನಂತೆ ಖಾಸಗಿ ಟ್ಯಾಂಕರ್‍‌ಗಳ ನೀರೂ ಹರಿಯುತ್ತಿದೆ, ಅಭಿವೃದ್ಧಿ ಹೆಸರಲ್ಲಿ ಸಾರ್ವಜನಿಕರ ಹಣವೂ ಪೋಲಾಗುತ್ತಿದೆ. ಪ್ರಶ್ನಿಸಬೇಕಾದ, ಪ್ರತಿಭಟಿಸಬೇಕಾದ ಜನ ಸಹಿಸಿಕೊಂಡು ಸುಮ್ಮನಾಗುತ್ತಿದ್ದಾರೆ. ಇದು ಅಧಿಕಾರಸ್ಥರಿಗೆ, ಅವಕಾಶವಾದಿಗಳಿಗೆ ಅನುಕೂಲವಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X