ಕೊಡಗು ಜಿಲ್ಲೆಯ ‘ಜ್ಞಾನ ಕಾವೇರಿ ವಿಶ್ವವಿದ್ಯಾಲಯ’ವನ್ನು ಮುಚ್ಚಬಾರದು. ಒಂದು ವೇಳೆ ಸರ್ಕಾರ ಅಂತಹ ನಿರ್ಧಾರಕ್ಕೆ ಬಂದರೆ ಇಡೀ ಕೊಡಗಿನಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ನಾಪಂಡ ಮುತ್ತಪ್ಪ ಎಚ್ಚರಿಕೆ ನೀಡಿದ್ದಾರೆ.
“ರಾಜ್ಯ ಸರ್ಕಾರ ರಾಜ್ಯದಲ್ಲಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಚಿಂತನೆ ನಡೆಸಿದ್ದು, ಅದರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆಳ್ವಾರದಲ್ಲಿರುವ ‘ಜ್ಞಾನ ಕಾವೇರಿ ವಿಶ್ವವಿದ್ಯಾಲಯವೂ ಸೇರಿದೆ. ನೂರಾರು ಎಕರೆ ಪ್ರದೇಶದಲ್ಲಿ ಈ ವಿವಿ ಸ್ಥಾಪನೆಯಾಗಿದ್ದು, ವಿಧ್ಯಾರ್ಥಿಗಳಿಗೆ ಅನುಕೂಲವಾಗಿರುವ ಸುಸಜ್ಜಿತ ವ್ಯವಸ್ಥೆ ಹೊಂದಿರುವ ವಿವಿಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಿವಿಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಆತಂಕ ಹೆಚ್ಚಾಗಿದೆ. ನಿವೃತ್ತಿ ಅಂಚಿನಲ್ಲಿರುವ ಉಪನ್ಯಾಸಕರಿಗೆ ಭಯ ಕಾಡುತ್ತಿದೆ. ಸಿಗಬೇಕಾದ ಸವಲತ್ತು ಕೈತಪ್ಪುತ್ತದೆಂಬುದು ಅಲ್ಲದೆ ಈಗ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಕೊಡಗಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಮುಂದೆ ತೊಂದರೆ ಎದುರಾಗಲಿದೆ. ಆದ್ದರಿಂದ ಕೊಡಗಿನ ಎಲ್ಲ ಸಮಾನ ಮನಸ್ಕರು ಸೇರಿ ಕೊಡಗಿನ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲಿದ್ದೇವೆ” ಎಂದರು.
ಕಾಂಗ್ರೆಸ್ ಮುಖಂಡ ವಿ ಪಿ ಶಶಿಧರ್ ಮಾತನಾಡಿ, “ಶಾಸಕರ ಜತೆಗೆ ವಿವಿ ವಿಚಾರವಾಗಿ ಚರ್ಚೆ ಮಾಡಲಾಗಿದೆ.ಯಾವುದೇ ಕಾರಣಕ್ಕೂ ಕೊಡಗಿನ ವಿವಿ ಮುಚ್ಚದಂತೆ ರಾಜ್ಯ ನಾಯಕರ ಗಮನಕ್ಕೂ ತರಲಾಗಿದೆ. ಒಂದು ವೇಳೆ ಕೈಮೀರಿ ಹೋಗುವ ಹಂತಕ್ಕೆ ಬಂದರೆ ಎಲ್ಲರೂ ಒಟ್ಟಾಗಿ ಸೇರಿ ಬೃಹತ್ ಪ್ರತಿಭಟನೆ ಮಾಡೋಣ” ಎಂದು ಕರೆ ನೀಡಿದರು.
“ಕೊಡಗಿನಲ್ಲಿ ಇರುವ ವಿವಿ ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಯುವಜನರ ಓದಿಗೆ ಅಗತ್ಯವಾದ ವಿವಿ ಕಳೆದುಕೊಂಡರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೂರದ ಊರಿಗೆ ತೆರಳಬೇಕಾಗಿ ಬರುತ್ತದೆ. ವಿಧ್ಯಾರ್ಥಿಗಳು ಹಾಗೂ ಪೋಷಕರಿಗೆ ಇದರಿಂದ ಹೆಚ್ಚಿನ ಹೊರೆಯಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕೊಡಗಿನ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಬಗ್ಗೆ ಹೋರಾಟ ನಡೆಯಲಿದೆ” ಎಂದರು.

ಪ್ರತ್ಯೇಕ ಸಭೆಯಲ್ಲಿ ಕೊಡಗಿನ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ ಪಿ ಕುಮಾರ್ ಮಾತನಾಡಿ, “ಕೊಡಗಿನ ಕಳಸ ಪ್ರಾಯವಾದ ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಕೊಡಗಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು ಎನ್ನುವ ಬೇಡಿಕೆ ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಈಡೇರಿದೆ. ಆದರೆ ರಾಜ್ಯ ಸರ್ಕಾರ ಈಗ ವಿವಿಗಳನ್ನು ಮುಚ್ಚಲು ಹೊರಟಿದೆ. ಇದು ಕೊಡಗಿನ ಜನರ ಭಾವನೆಗೆ ವಿರುದ್ಧವಾದದ್ದು” ಎಂದರು.
“ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಹಾಗೂ ಕೆ ಜಿ ಬೋಪಯ್ಯ ಅವರ ಮನವಿಗೆ ಸ್ಪಂದಿಸಿ ಮಂಜೂರು ಮಾಡಿದ ವಿವಿಯಾಗಿದೆ. ಯಾವುದೋ ಹುನ್ನಾರಕ್ಕೆ ಮಣಿದು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗುತ್ತದೆ. ರಾಜ್ಯದಲ್ಲಿ ಬೇಡದ್ದೆಲ್ಲ ಇರುವಾಗ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ಪ್ರಯತ್ನ ಯಾಕೆ? ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆಹಾಕುವ ಕೆಲಸ ಮಾಡುವುದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ” ಎಂದು ಹೇಳಿದರು.

ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಕೊಡಗು ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಘಟಕ ಉಪಾಧ್ಯಕ್ಷ ನವನೀತ್ ಪೂನ್ನೇಟಿ ಒತ್ತಾಯಿಸಿದ್ದಾರೆ.
“ಕೊಡಗು ಎಲ್ಲ ಕ್ಷೇತ್ರಗಳಲ್ಲೂ ವಂಚನೆಗೊಳಗಾಗುತ್ತಿದೆ. ಸೌಲಭ್ಯಗಳಿಂದ ದೂರಾಗಿದೆ, ಈಗ ಯುವ ಸಮೂಹಕ್ಕೆ ಶೈಕ್ಷಣಿಕ ಭವಿಷ್ಯವನ್ನು ಹಾಳುಮಾಡುವ ಹುನ್ನಾರ ಇದಾಗಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹೊಸದಾಗಿ 10 ವಿವಿಗಳನ್ನು ಸ್ಥಾಪನೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ 9 ವಿವಿಗಳನ್ನು ಮುಚ್ಚಲು ಹೊರಟಿದೆ. ಸರ್ಕಾರಕ್ಕೆ ಯುವ ಜನತೆಯ ಹಿತ ಮುಖ್ಯವಲ್ಲ, ಇವರಿಗೆ ಅಧಿಕಾರದ ಮದವೇರಿದೆ. ಹಣಕಾಸು ನಿರ್ವಹಣೆ ಮಾಡಲಾಗದೆ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಲು ಇಂತಹ ಕೀಳು ಮಟ್ಟಕ್ಕೆ ಇಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ವಿಸ್ತರಣೆ ಮಾಡಿ ಬೊಕ್ಕಸ ತುಂಬಿಸಿಕೊಳ್ಳುವ ಸರ್ಕಾರಕ್ಕೆ ವಿದ್ಯಾರ್ಥಿಗಳು ಓದುವ ವಿವಿ ಹೊರೆಯಾಗಿದೆ. ವಿವಿ ಮುಚ್ಚಿದರೆ ವಿದ್ಯಾರ್ಥಿಗಳ ಪಾಡೇನು? ಮುಂದಿನ ಭವಿಷ್ಯದ ತೊಡಕುಗಳನ್ನು ಯೋಚಿಸದೆ, ಆರ್ಥಿಕ ಮುಗ್ಗಟ್ಟಿನ ವಿಚಾರ ಮುಂದಿಟ್ಟು ವ್ಯವಸ್ಥಿತವಾಗಿ ವಿವಿ ಮುಚ್ಚಲು ಹೊರಟಿರುವುದು ಉದ್ದೇಶಪೂರ್ವಕವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಲೆ ಮಹದೇಶ್ವರ ಬೆಟ್ಟ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ
“ಶಾಸಕರುಗಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ವಿವಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವೃತ್ತರಾಗಬೇಕು. ತಮ್ಮ ಪ್ರಭಾವ ಬಳಸಿ ಸರ್ಕಾರದ ಗಮನಕ್ಕೆ ತಂದು ಜಿಲ್ಲೆಯಲ್ಲಿ ವಿವಿ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡದೇ ಇದ್ದಲ್ಲಿ ಕೊಡಗಿನಲ್ಲಿ ಭಾರೀ ವಿರೋಧ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
