ಕ್ರೀಡೆಯಿಂದ ಸಮಾಜದಲ್ಲಿ ಸೌಹಾರ್ದ ಸಂಬಂಧ ವೃದ್ಧಿಯಾಗಲಿದೆ. ಸಮುದಾಯಗಳು ಪರಸ್ಪರ ಉತ್ತಮ ಬಾಂಧವ್ಯ ಹೊಂದಲು ಸಹಕಾರಿಯಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಮಡಿಕೇರಿಯಲ್ಲಿ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಚಿಲ್ಲಿ ಬಾಯ್ಸ್ ಮಡಿಕೇರಿ ಆಯೋಜಿಸಿದ್ದ ಇಪ್ಪತ್ತನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, “ಇತ್ತೀಚೆಗೆ ಯುವಜನರು ಮಾದಕ ವ್ಯಸನ ಇನ್ನಿತರ ದುಶ್ಚಟಗಳಿಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಅವರಲ್ಲಿ ಹೊಸ ಚೈತನ್ಯ ತುಂಬುವಲ್ಲಿ ಕ್ರೀಡೆಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಭಾಗವಹಿಸುವಿಕೆ ಮುಖ್ಯ” ಎಂದರು.
ಗ್ರಾಮ ಪಂಚಾಯತಿ ಸದಸ್ಯ ಶುಂಟಿಕೊಪ್ಪದ ಅಬ್ದುಲ್ ಲತೀಫ್ ಮಾತನಾಡಿ, “ಕೊಡಗು ಮುಸ್ಲಿಮ್ ಕಪ್ ಸಂಘಟನೆಯು ಎರಡು ಭಾಗವಾಗಿ ಹೋಗಿದ್ದು ದುರದೃಷ್ಟಕ. ಎಲ್ಲರೂ ಒಟ್ಟಾಗಿ ಸಂಘಟಿಸಿ ಕೆಲಸ ಮಾಡಬೇಕು. ಮುಂದೆ ಒಗ್ಗಟ್ಟಾಗಿ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಜನರಲ್ಲಿ ಸೌಹಾರ್ದ ಮನೋಭಾವ ಬೆಳೆಯಲು ಕ್ರೀಡೆಗಳು ತಳಹದಿ ಹಾಕುತ್ತವೆ” ಎಂದು ಕರೆ ನೀಡಿದರು.

ಕೊಡಗು ಮುಸ್ಲಿಂ ಕಪ್ 2025ರ ಫೈನಲ್ ಪಂದ್ಯಾಟವು ಫ್ರೀಡಂ ಬಾಯ್ಸ್ ಹುಂಡಿ ಹಾಗೂ ತಾಜ್ ಕ್ರಿಕೆಟರ್ಸ್ ಕುಶಾಲನಗರ ತಂಡಗಳ ನಡುವೆ ಏರ್ಪಟ್ಟಿತ್ತು. ಮೊದಲು ಟಾಸ್ ಗೆದ್ದ ಫ್ರೀಡಂ ಬಾಯ್ಸ್ ಹುಂಡಿ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಆರಂಭಿಸಿದ ತಾಜ್ ಕ್ರಿಕೆಟರ್ಸ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 49 ಗುರಿ ಕೊಟ್ಟಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಫ್ರೀಡಂ ಬಾಯ್ಸ್ ಹುಂಡಿ ತಂಡವು 40 ರನ್ ಗಳನ್ನು ಬಾರಿಸಿ ಸೋಲನುಭವಿಸಿತು.
ಈ ಸುದ್ದಿ ಓದಿದ್ದೀರಾ?: ಮಡಿಕೇರಿ | ‘ಕೊಡವಾಮೆ ಬಾಳೋ’ ಪಾದಯಾತ್ರೆ ಸಮಾರೋಪ : ಬೇಡಿಕೆ ಈಡೇರಿಸಲು ಕೊಡವರಿಂದ ಜಿಲ್ಲಾಡಳಿತಕ್ಕೆ ಮನವಿ
ಈ ವೇಳೆ ಕೊಡಗು ಮುಸ್ಲಿಂ ಕಪ್ 2025ರ ಪಂದ್ಯಾಟದಲ್ಲಿ ಸತತ 5ನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡ ಕುಶಾಲನಗರ ತಾಜ್ ಕ್ರಿಕೆಟರ್ಸ್ ತಂಡಕ್ಕೆ ಬಹುಮಾನ ವಿತರಣೆ ಮಾಡಲಾಯಿತು.
