ತನ್ನದೇ ಬಣ ಕಟ್ಟಿಕೊಂಡು, ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ ಆರೋಪದ ಮೇಲೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೀಡಿದ್ದ ನೋಟಿಸ್‌ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಉತ್ತರಿಸಿದ್ದಾರೆ. ನಾವು ನಾವುದೇ ಬಣ ರಾಜಕಾರಣ ಮಾಡಿಲ್ಲ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ, ಸಮರ್ಥರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.
ಯತ್ನಾಳ್‌ಗೆ ಬಿಜೆಪಿ ಶಿಸ್ತು ಸಮಿತಿ ಫೆಬ್ರವರಿ 10ರಂದು 2ನೇ ಬಾರಿಗೆ ನೋಟಿಸ್ ನೀಡಿತ್ತು. 72 ಗಂಟೆಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿತ್ತು. ಆ ನೋಟಿಸ್‌ಗೆ ಯತ್ನಾಳ್ ಉತ್ತರಿಸಿದ್ದಾರೆ. “ಯಾವುದೇ ಬಣ ರಾಜಕಾರಣ ಮಾಡಿಲ್ಲ. ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಪಕ್ಷದ ಚೌಕಟ್ಟಿನೊಳಗೆಯೇ ವಕ್ಫ್ ಆಸ್ತಿ ವಿರುದ್ದದ ಹೋರಾಟ ನಡೆಸಿದ್ದೇನೆ. ತಂಡವಾಗಿ ನಡೆಸಿದ ಆ ಹೋರಾಟ ಯಶಸ್ಸು ಕಂಡಿದೆ” ಎಂದು ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
“ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿಜಯೇಂದ್ರ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಅವರು ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡ ಎಲ್ಲ ಹೋರಾಟಗಳು ವಿಫಲವಾಗಿವೆ. ಇದಕ್ಕೆ ವಿಜಯೇಂದ್ರ ಅವರ ಅಸಮರ್ಥತೆಯೇ ಕಾರಣ” ಎಂದು ಆರೋಪಿಸಿದ್ದಾರೆ.
“ಕರ್ನಾಟಕದಲ್ಲಿ ಬಿಜೆಪಿಯೊಳಗೆ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತಕ್ಕೆ ಅಂತ್ಯ ಹಾಡಬೇಕು. ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಬಲಗೊಳ್ಳಬೇಕೆಂದರೆ, ಈಗಲೇ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು. ಎಲ್ಲರನ್ನು ವಿಶ್ವಾಸದಿಂದ ನಿಭಾಯಿಸಬಲ್ಲವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು” ಎಂದು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.
ಯತ್ನಾಳ್‌ಗೆ 2024ರ ಡಿಸೆಂಬರ್‌ನಲ್ಲಿಯೂ ನೋಟಿಸ್ ನೀಡಲಾಗಿತ್ತು. ಆಗ, ಶಿಸ್ತು ಸಮಿತಿಯ ಎದುರು ಖುದ್ದು ಹಾಜರಾಗಿದ್ದ ಯತ್ನಾಳ್, ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಮತ್ತೆ ವಾಗ್ದಾಳಿಯನ್ನು ಮುಂದುವರೆಸಿದ್ದರು.