ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಆಯ್ದ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದ್ದ ಆರೋಪದಡಿ ಉಪ ಪ್ರಾಂಶುಪಾಲ ಸೇರಿ ಮೂವರು ಆರೋಪಿಗಳನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಸವ ಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್, ಅವರ ಕಾರು ಚಾಲಕನೂ ಆಗಿದ್ದ ವಿದ್ಯಾರ್ಥಿ ಜಗದೀಶ್ ಹಾಗೂ ಬಂಗಾರಪೇಟೆ ಕಾನೂನು ಕಾಲೇಜ್‌ವೊಂದರ ವಿದ್ಯಾರ್ಥಿ ವರುಣ್ ಕುಮಾರ್ ಬಂಧಿತ ಆರೋಪಿಗಳು.
ರಾಜ್ಯ ಕಾನೂನು ವಿವಿಯಿಂದ ಜನವರಿ 23ರಂದು ನಿಗದಿಯಾಗಿದ್ದ ಕಾಂಟ್ರ್ಯಾಕ್ಟ್ ಲಾ-1 ಪರೀಕ್ಷೆಯ ಪ್ರಶ್ನೆಗಳು ಟೆಲಿಗ್ರಾಂ ಮತ್ತು ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ವೈರಲ್ ಆಗಿದ್ದವು. ಉಪ ಪ್ರಾಂಶುಪಾಲ ನಾಗರಾಜ್ ಅವರಿಗೆ ಕಾರು ಚಾಲಕ ಹಾಗೂ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಜಗದೀಶ್, ನಾಗರಾಜ್ ಅವರ ಮೊಬೈಲ್ ಫೋನ್‌ನಲ್ಲಿದ್ದ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡಿದ್ದರು. ಬಳಿಕ ಅವುಗಳನ್ನ ಪರೀಕ್ಷಾರ್ಥಿಗಳಿಗೆ ಸೋರಿಕೆ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಪ್ರಕರಣದ ಮತ್ತೋರ್ವ ಆರೋಪಿ ವರುಣ್ ಕುಮಾರ್, ಪರೀಕ್ಷೆಯ ಹಿಂದಿನ ದಿನ ಕಾಲೇಜ್‌ಗೆ ಬಂದ ಪ್ರಶ್ನೆ ಪತ್ರಿಕೆಗಳನ್ನು ಯಾರಿಗೂ ತಿಳಿಯದಂತೆ ತೆರೆದು, ಅದರಲ್ಲಿನ ಪ್ರಶ್ನೆಗಳನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಕಾಪಿ ಮಾಡಿಕೊಂಡು ಹಣಕ್ಕಾಗಿ ಅವುಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಾಗಿ ಪಿಯು ಕಾಲೇಜು ಪ್ರಾಂಶುಪಾಲರ ನೇಮಕ
ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳ ಚೇರ್‌ಮನ್ ಹಾಗೂ ಜಾಗೃತ ದಳ-2 ಅಧಿಕಾರಿಯಾಗಿರುವ ವಿಶ್ವನಾಥ್ ಕೆ.ಎನ್ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಠಾಣೆ ಪೊಲೀಸರು ತಾಂತ್ರಿಕ ಸಹಾಯದಿಂದ ಮಾಹಿತಿಗಳನ್ನು ಸಂಗ್ರಹಿಸಿ ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನ ಸೋರಿಕೆ ಮಾಡಿದ್ದ ಮೂವರು ಆರೋಪಿಗಳನ್ನ ಬಂಧಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
