ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಇಲಾಖಾ ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ. ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರ ಎಡವಿದರೆ, ಟೀಕಿಸಲು, ಎಚ್ಚರಿಸಲು ವಿರೋಧ ಪಕ್ಷಗಳಿವೆ. ಅಂದಮೇಲೆ, ಸರ್ಕಾರಕ್ಕೆ ಅನಗತ್ಯ ಹೊರೆಯಾದ ಗ್ಯಾರಂಟಿ ಅನುಷ್ಠಾನ ಸಮಿತಿ ಏಕೆ ಬೇಕು?
‘ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಕಳೆದ ಐದು ತಿಂಗಳಿಂದ ತಡೆಹಿಡಿಯಲಾಗಿದೆ. ಫಲಾನುಭವಿಗಳ ಖಾತೆಗೆ ಸಮಯಕ್ಕೆ ಸರಿಯಾಗಿ ರಾಜ್ಯ ಸರ್ಕಾರ ಹಣ ಜಮೆ ಮಾಡುತ್ತಿಲ್ಲ. ಹಾಗಾದರೆ ಬಜೆಟ್‌ನಲ್ಲಿ ಮೀಸಲಿಟ್ಟ 52 ಸಾವಿರ ಕೋಟಿ ಎಲ್ಲಿ ಹೋಗುತ್ತಿದೆ’ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಪಾವತಿಯಲ್ಲಿ ವಿಳಂಬವಾಗಿದ್ದರೆ ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಲಾಗುವುದು. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳುತ್ತದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಎಂದು ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಅಲ್ಲಿಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿ ಮುಗಿಯಿತು. ಆದರೆ ಪ್ರಶ್ನೆ ಇರುವುದು ಅದಲ್ಲ. ಐದು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವ ಸಲುವಾಗಿ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿಯೇ ಒಂದು ಸಮಿತಿ ರಚಿಸಿತಲ್ಲ, ಅದೇನು ಮಾಡುತ್ತಿದೆ ಎನ್ನುವುದು?
ಜನವರಿ 2024ರಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚಿಸಲಾಗುವುದು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಫೆಬ್ರವರಿ 2024ರಲ್ಲಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದರು.
ರಾಜ್ಯ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 31 ಸದಸ್ಯರಿರುತ್ತಾರೆ. ಅವರು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಾರೆ. ಜಿಲ್ಲಾ ಮಟ್ಟದ ಪ್ರತಿ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 21 ಸದಸ್ಯರಿರುತ್ತಾರೆ. ಹಾಗೆಯೇ ಕ್ಷೇತ್ರ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 11 ಮಂದಿ ಸದಸ್ಯರಿರುತ್ತಾರೆ ಎಂದು ವಿವರಿಸಿದ್ದರು.
ಗ್ಯಾರಂಟಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಎಚ್.ಎಂ. ರೇವಣ್ಣನವರನ್ನು ನೇಮಕ ಮಾಡಿದ್ದರು. ಉಪಾಧ್ಯಕ್ಷರಾಗಿ ಮೆಹರೋಜ್ ಖಾನ್, ಡಾ. ಪುಷ್ಪಾ ಅಮರನಾಥ್, ಎಸ್.ಆರ್. ಪಾಟೀಲ್, ಸೂರಜ್ ಹೆಗ್ಡೆ ಅವರನ್ನು ನೇಮಕ ಮಾಡಿದ್ದರು. ತದನಂತರ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದ ಸಮಿತಿಗಳೂ ರಚನೆಯಾಗಿ, ಪದಾಧಿಕಾರಿಗಳನ್ನು ನೇಮಿಸಲಾಗಿತ್ತು.
ಅಲ್ಲದೆ, ರಾಜ್ಯ ಮಟ್ಟದ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಲಾಗುವುದು. ಉಳಿದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗೌರವಧನ ನೀಡಲಾಗುವುದು. ಇದಕ್ಕೆ ವಾರ್ಷಿಕ 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಕಳೆದ ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದರು.
ಇದನ್ನು ಓದಿದ್ದೀರಾ?: ಅಲ್ಪಸಂಖ್ಯಾತರ ಶೈಕ್ಷಣಿಕ-ಸಾಮಾಜಿಕ-ಆರ್ಥಿಕ ಪ್ರಗತಿಗಾಗಿ ಸರ್ಕಾರದ ಕಾರ್ಯಕ್ರಮಗಳೇನು?
ಅಂದರೆ, ಅಲ್ಲಿಂದ ಇಲ್ಲಿಯವರೆಗೆ, ಒಂದು ವರ್ಷ ಕಳೆದಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರಿಸುಮಾರು 16 ಕೋಟಿ ರೂಪಾಯಿ- ಮುಖ್ಯಮಂತ್ರಿಗಳು ತಿಳಿಸಿದಂತೆಯೇ ವ್ಯಯವಾಗಿದೆ. ಆದರೆ, ಈ ಸಮಿತಿಯಿಂದ ಸರ್ಕಾರಕ್ಕೆ ಮತ್ತು ಫಲಾನುಭವಿಗಳಿಗೆ ಆದ ಪ್ರಯೋಜನವೇನು?
ಎಚ್.ಎಂ. ರೇವಣ್ಣನವರ ಅಧ್ಯಕ್ಷತೆಯ ಈ ಸಮಿತಿ, ಈ ಒಂದು ವರ್ಷದಲ್ಲಿ ಎಷ್ಟು ಸಭೆಗಳನ್ನು ಮಾಡಿದೆ, ಎಷ್ಟು ವರದಿಗಳನ್ನು ನೀಡಿದೆ, ಅದರಿಂದ ಸರ್ಕಾರಕ್ಕೆ ಮತ್ತು ಫಲಾನುಭವಿಗಳಿಗೆ ಆದ ಅನುಕೂಲಗಳೇನು ಎಂಬುದನ್ನು ಸಾರ್ವಜನಿಕರ ಅವಗಾಹನೆಗೆ ಇಡಬೇಕಾಗಿದೆ.
ಏಕೆಂದರೆ, ‘ಗ್ಯಾರಂಟಿ ಹೆಸರಿನಲ್ಲಿ ಘೋಷಿಸಲಾದ ಎಲ್ಲ ಯೋಜನೆಗಳು ವಿಫಲವಾಗಿದ್ದು, ಅವುಗಳಿಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡುತ್ತಿದೆ, ಖಜಾನೆ ಖಾಲಿಯಾಗಿದೆ’ ಎಂದು ಪದೆ ಪದೇ ವಿರೋಧ ಪಕ್ಷಗಳು ಸರ್ಕಾರವನ್ನು ದೂಷಿಸುತ್ತಿವೆ. ಇಕ್ಕಟ್ಟಿಗೆ ಸಿಲುಕಿಸುತ್ತಿವೆ.
ಇದಕ್ಕೆ ಪೂರಕವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಮೂರು ತಿಂಗಳಿಂದ ಅನ್ನಭಾಗ್ಯ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಹಣವನ್ನು ಸರ್ಕಾರ ಹಾಕಿಲ್ಲ. ಶೀಘ್ರದಲ್ಲೇ ಬಾಕಿ ಹಣವನ್ನು ಹಾಕುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ’ ಎಂದು ಹೇಳಿರುವುದು, ವಿರೋಧಪಕ್ಷಗಳ ಟೀಕೆಗೆ ಪುಷ್ಟಿ ನೀಡಿದೆ.

ವಸ್ತುಸ್ಥಿತಿ ಹೀಗಿರುವಾಗ ‘ಗ್ಯಾರಂಟಿ ಸಮಿತಿಯನ್ನು ರಚಿಸುವುದು, ಆ ಸಮಿತಿಗಾಗಿ 16 ಕೋಟಿ ರೂಪಾಯಿಗಳನ್ನು ವ್ಯಯಿಸುವುದು ಸರ್ಕಾರದ ವಿವೇಕಯುತ ನಡೆಯಲ್ಲ’ ಎನ್ನುವುದು ನಾಡಿನ ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಹಾಗೆಯೇ ‘ಮುಖ್ಯಮಂತ್ರಿಗಳು ತಮ್ಮ ಜಾತಿಯ ಎಚ್.ಎಂ. ರೇವಣ್ಣರಿಗೆ ಪ್ರತಿಷ್ಠಿತ ಹುದ್ದೆ, ಕಚೇರಿ, ಸಿಬ್ಬಂದಿ, ಟಿಎಡಿಎ, ಗೂಟದ ಕಾರು ಕರುಣಿಸಲು ಈ ಹುದ್ದೆಯನ್ನು ಸೃಷ್ಟಿಸಲಾಗಿದೆ. ಇದು ಬೇಕಿರಲಿಲ್ಲ’ ಎಂಬ ಕಟು ಟೀಕೆ ಕೂಡ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಅಷ್ಟಕ್ಕೂ 16 ಕೋಟಿ ರೂಪಾಯಿಗಳು ಚಿಲ್ಲರೆ ಹಣವಲ್ಲ, ಅದು ಸಾರ್ವಜನಿಕರ ಹಣ, ತೆರಿಗೆಯ ಹಣ. ಆ ಹಣದ ಲೆಕ್ಕವನ್ನು ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಡಿನ ಜನತೆಗೆ ತಿಳಿಸುವ ತುರ್ತಿದೆ. ಹಾಗೆಯೇ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿವೆಯೇ ಇಲ್ಲವೇ ಎಂದು ಪರಿಶೀಲಿಸಲು ಆಯಾಯ ಇಲಾಖಾ ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ. ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರ ಎಡವಿದರೆ, ಟೀಕಿಸಲು, ಎಚ್ಚರಿಸಲು ವಿರೋಧ ಪಕ್ಷಗಳಿವೆ. ಅಂದಮೇಲೆ, ಸರ್ಕಾರಕ್ಕೆ ಅನಗತ್ಯ ಹೊರೆಯಾದ ಗ್ಯಾರಂಟಿ ಅನುಷ್ಠಾನ ಸಮಿತಿ ಏಕೆ ಬೇಕು?

ಲೇಖಕ, ಪತ್ರಕರ್ತ