ಗೃಹಲಕ್ಷ್ಮಿ ಯೋಜನೆ | ಫಲಾನುಭವಿಗಳ ಖಾತೆಗೆ ಹಣ ಬಂದಾಗಲೇ ಗ್ಯಾರಂಟಿ!

Date:

Advertisements
ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಆದರೆ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯಕ್ಕೆ ಮಾತ್ರ ಪ್ರತಿ ತಿಂಗಳು ಸರಿಯಾಗಿ ಹಣ ಜಮಾ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗ್ಯಾರಂಟಿಗಳಿಗಾಗಿಯೇ ಬಜೆಟ್‌ನಲ್ಲಿ ಮೀಸಲಿಟ್ಟ 52 ಸಾವಿರ ಕೋಟಿ ಎಲ್ಲಿ ಹೋಗುತ್ತಿದೆ ಎಂಬುದಕ್ಕೆ ಉತ್ತರವಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಚುನಾವಣೆ ಪೂರ್ವ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು (ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಯುವನಿಧಿ) ಹಂತ ಹಂತವಾಗಿ ಜಾರಿಗೊಳಿಸಿದೆ. ಆದರೆ, ಮಹಿಳೆಯರಿಗೆ ಮಾಸಿಕವಾಗಿ ನೀಡುವ ಗೃಹಲಕ್ಷ್ಮಿ ಯೋಜನೆಯ 2,000 ರೂ. ಮತ್ತು ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಸರಿಯಾಗಿ ಜಮೆಯಾಗುತ್ತಿಲ್ಲ ಎನ್ನುವ ಆರೋಪಗಳು ರಾಜ್ಯಾದ್ಯಂತ ವ್ಯಕ್ತವಾಗಿವೆ.

ಕಡು ಬಡವರು, ಬಡವರು ಹಾಗೂ ಕೆಳ ಮಧ್ಯಮ ವರ್ಗಗಳ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಜಾರಿಗೂ ಮೊದಲೇ ಬಿಜೆಪಿ-ಜೆಡಿಎಸ್‌ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದು, ‘ಬಿಟ್ಟಿ ಭಾಗ್ಯ’ ಎಂದು ಹಂಗಿಸಿದರು. ಮಧ್ಯಮ ಮತ್ತು ಶ್ರೀಮಂತ ವರ್ಗದಿಂದಲೂ ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದವು. ಆದರೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ಮಾದರಿ ರಾಜ್ಯ ರೂಪಿಸಲು ಹೊರಟು, ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೊಳಿಸಿತು. ಆದರೀಗ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದು ವಿಳಂಬವಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಇದನ್ನೇ ಅಸ್ತ್ರವಾಗಿಟ್ಟುಕೊಂಡು “ಸರ್ಕಾರದ ಬಳಿ ಹಣವೇ ಇಲ್ಲ, ಗ್ಯಾರಂಟಿಗಳು ಸ್ಥಗಿತವಾಗಲಿವೆ” ಎಂದು ಷರಾ ಬರೆಯುತ್ತಿವೆ.

ಬಾಗಲಕೋಟೆ, ರಾಯಚೂರು, ಗದಗ, ಹುಬ್ಬಳ್ಳಿ, ದಕ್ಷಿಣ ಕನ್ನಡ ಹಾಗೂ ವಿವಿಧೆಡೆಯ ಮಹಿಳೆಯರು 3-4 ತಿಂಗಳಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ ಹಣವೇ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಆರೋಪ ಬೆನ್ನು ಹತ್ತಿದ ಈ ದಿನ.ಕಾಮ್‌ ಹಲವು ಜಿಲ್ಲೆಗಳ ಕೆಲವು ಫಲಾನುಭವಿಗಳ ಅಕೌಂಟ್‌ಗಳ ವಿವರ ತೆಗಿಸಿ ಪರಿಶೀಲಿಸಿದಾಗ ಜನಸಾಮಾನ್ಯರ ಆರೋಪ ನಿಜವಾಗಿದೆ.

Advertisements

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚನ್ನಮ್ಮ ಕುಂಬಾರ ಎಂಬುವರಿಗೆ ಡಿಸೆಂಬರ್‌ 12, ಬೆಂಗಳೂರಿನ ರಾಜಾಜಿನಗರ ನಿವಾಸಿ ಶಶಿಕಲಾ ಅವರಿಗೆ ಡಿಸೆಂಬರ್ 11, ಗದಗ ಜಿಲ್ಲೆಯ ಶಿವಮ್ಮ ಯಡಿಯಾಪುರ ಅವರಿಗೆ ಡಿಸೆಂಬರ್‌ 17, ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಪುತಳಾಬಾಯಿ ಅವರಿಗೆ ಡಿಸೆಂಬರ್ 11, ಬೆಂಗಳೂರಿನ ಮರಿಯಪ್ಪನ ಪಾಳ್ಯದ ನಿವಾಸಿ ನಂದಿನಿ ಅವರಿಗೆ ಡಿಸೆಂಬರ್‌ 23 ಕೊನೆಯ ಬಾರಿಗೆ ಗೃಹಲಕ್ಷ್ಮಿ ಹಣ ಜಮಾ ಆಗಿದೆ. ಅದು ನವೆಂಬರ್‌ ತಿಂಗಳಿನದ್ದು.

ಬಹುತೇಕ ಜಿಲ್ಲೆಗಳಲ್ಲಿ ಸರಾಸರಿ 2-3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಅತೀ ಉತ್ಸಾಹ ತೋರಿದ ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ಮಾಧ್ಯಮಗಳ ಮುಂದೆ ಬಂದು, ಮೂರು ತಿಂಗಳಿಂದ ಅನ್ನಭಾಗ್ಯ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಖಾತೆಗೆ ಸರ್ಕಾರ ಹಾಕಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಸಮಾಧಾನವನ್ನು ಪುಷ್ಟಿಕರಿಸಿದೆ.

ಈ ಸುದ್ದಿ ಓದಿದ್ದೀರಾ? ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದಿದ್ದರೆ, ಸಮಿತಿ ಏಕೆ ಬೇಕು?

ವಿಪರ್ಯಾಸ ಎಂದರೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ, “ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಮೂರು ತಿಂಗಳಿಂದ ಜಮೆ ಆಗದಿರುವುದು ನನಗೆ ಗೊತ್ತಿಲ್ಲ” ಎಂದಿದ್ದಾರೆ. ಹಣಕಾಸು ವಿಚಾರದಲ್ಲಿ ಬಹಳ ನಿಪುಣತೆಯಿಂದ ಮಾತನಾಡುವ ಖ್ಯಾತಿಗೆ ಒಳಗಾಗಿರುವ ಸಿದ್ದರಾಮಯ್ಯ ಅವರಿಗೆ ಗೃಹಲಕ್ಷ್ಮಿ ಹಣ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ ಎಂಬುದು ಗೊತ್ತಿಲ್ಲ ಎಂದರೆ ಯಾರಾದರೂ ನಂಬುತ್ತಾರಾ? ಇದೊಂದು ಅಪಹಾಸ್ಯದ ಹೇಳಿಕೆ ಅಲ್ಲದೇ ಮತ್ತೇನು ಅಲ್ಲ!

ಹಣಕಾಸು ಇಲಾಖೆ ಇರುವುದೇ ಸಿಎಂ ಅವರ ಕೈಯಲ್ಲಿ. ಬೆಳಗು ಹರಿದರೆ ಸಾಕು ಹಣಕಾಸು ಇಲಾಖೆಯ ವ್ಯವಹಾರಗಳು ಮುಖ್ಯಮಂತ್ರಿಗಳಿಗೆ ತಿಳಿಯುತ್ತವೆ. ಮಾರ್ಚ್‌ 7ರಂದು ತಮ್ಮ ದಾಖಲೆಯ 16ನೇ ಬಜೆಟ್‌ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಮೂರು ತಿಂಗಳಿಂದ ಗೃಹಲಕ್ಷ್ಮಿಯ ಹಣಕಾಸು ವಿಚಾರವೇ ತಿಳಿದಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ನೋಡಿದರೆ; ಪ್ರತಿಪಕ್ಷಗಳಿಗೆ ಸಿಎಂ ಅವರೇ ಫುಲ್‌ಟಾಸ್‌ ಬಾಲ್‌ ಹಾಕಿ ಹೊಡಿಸಿಕೊಂಡಂತಾಗಿದೆ!

ಗ್ಯಾರಂಟಿ ಯೋಜನೆ 3

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಫೆಬ್ರವರಿ 2024ರಲ್ಲಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿದೆ. ರಾಜ್ಯ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 31 ಸದಸ್ಯರಿದ್ದಾರೆ. ಅವರು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಾರೆ. ಜಿಲ್ಲಾ ಮಟ್ಟದ ಪ್ರತಿ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 21 ಸದಸ್ಯರಿರುತ್ತಾರೆ. ಹಾಗೆಯೇ ಕ್ಷೇತ್ರ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 11 ಮಂದಿ ಸದಸ್ಯರಿದ್ದಾರೆ. ಗ್ಯಾರಂಟಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಎಚ್.ಎಂ. ರೇವಣ್ಣನವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಮೆಹರೋಜ್ ಖಾನ್, ಡಾ. ಪುಷ್ಪಾ ಅಮರನಾಥ್​, ಎಸ್.ಆರ್. ಪಾಟೀಲ್, ಸೂರಜ್ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ. ತದನಂತರ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದ ಸಮಿತಿಗಳೂ ರಚನೆಯಾಗಿ, ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗೆ ಈವರೆಗೂ ಸರಿಸುಮಾರು 16 ಕೋಟಿ ರೂಪಾಯಿ ಮುಖ್ಯಮಂತ್ರಿಗಳು ತಿಳಿಸಿದಂತೆಯೇ ವ್ಯಯವಾಗಿದೆ. ಹಾಗೆಯೇ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿವೆಯೇ ಇಲ್ಲವೇ ಎಂದು ಪರಿಶೀಲಿಸಲು ಆಯಾಯ ಇಲಾಖಾ ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ. ಇಷ್ಟೆಲ್ಲಾ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರೂ ಮೂರು ತಿಂಗಳಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ.

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹೇಗಾಗಿದೆ ಎಂದರೆ ಫಲಾನುಭವಿಗಳಿಗೆ ಹಬ್ಬಗಳಿಗೆ ಬೋನಸ್‌ ಕೊಟ್ಟಂತಾಗಿದೆ. ಉದಾಹರಣೆಗೆ ಬಾಗಲಕೋಟೆಯ ಚನ್ನಮ್ಮ ಎಂಬುವರಿಗೆ ಗೃಹಲಕ್ಷ್ಮಿ ಹಣ 2024 ಮೇ 3 ರಂದು 2000 ರೂ. ಜಮಾ ಆಗಿದೆ. ಮತ್ತೆ ಅವರಿಗೆ ಗೃಹಲಕ್ಷ್ಮಿಯ 2000 ರೂ. ಹಣ ಜಮಾ ಆಗಿದ್ದು ಆಗಸ್ಟ್‌ ತಿಂಗಳಲ್ಲಿ. ಮತ್ತೆ ಎರಡು ತಿಂಗಳು ಗ್ಯಾಪ್‌ ಆಗಿದ್ದು, ಅಕ್ಟೋಬರ್‌ 10ಕ್ಕೆ ಮತ್ತೆ ಎರಡು ಸಾವಿರ ಜಮಾ ಆಗಿದೆ. ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ 10ನೇ ತಾರೀಖಿಗೆ ಕ್ರಮವಾಗಿ ಜಮಾ ಆಗಿದೆ. ಈಗ ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣ ಬಂದಿಲ್ಲ.

ಈ ದಿನ.ಕಾಮ್‌ ಜೊತೆ ಮಾತನಾಡಿದ ಚನ್ನಮ್ಮ ಕುಂಬಾರ, “ಗೃಹಲಕ್ಷ್ಮಿ ಹಣ ನಂಗ ಮೊದಲ ಬಂದಿದ್ದು 2023 ಸೆಪ್ಟೆಂಬರ್‌ 19ಕ್ಕೆ. ಅಲ್ಲಿಂದ ನಾನು ಒಂದು ವರ್ಷ ಪ್ರತಿ ತಿಂಗಳು ಬ್ಯಾಂಕಿನಿಂದ 2,000 ರೂ. ತೆಗೆಸಿಕೊಂಡು ಬರುತ್ತಿದ್ದೆ. ಕಳೆದ ಐದಾರು ತಿಂಗಳಿಂದ ಬ್ಯಾಂಕ್‌ಗೆ ಹೋದರೆ ‘ಗೃಹಲಕ್ಷ್ಮಿ ಹಣ ಬಂದಿಲ್ಲ ಹೋಗಬೇ’ ಅಂತ ಬ್ಯಾಂಕ್‌ನವರು ಪಾಸ್‌ಬುಕ್‌ ಚೆಕ್‌ ಮಾಡಿ ಕಳಿಸುತ್ತಾರೆ. ಪದೇಪದೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಅಲ್ಲಿಯವರು ಸಿಟ್ಟಾಗುತ್ತಾರೆ. ಈಗ ಬ್ಯಾಂಕಿಗೆ ಹೋಗುವುದನ್ನೇ ಬಿಟ್ಟಿರುವೆ. ಗೃಹಲಕ್ಷ್ಮಿ ಹಣ ಬಂದಾಗ ಬರ್ಲಿ ಅಂತ ಸುಮ್ಮನಾಗಿದ್ದೇನೆ. ಓನ್ಯಾಗ ಗೃಹಲಕ್ಷ್ಮಿ ಹಣ ನಿಂತಿದೆ ಅಂತ ಮಾತಾಡ್ತಿದಾರ. ಪುಣ್ಯಾತ್ಮ ಸಿದ್ದರಾಮಯ್ಯ ಬಡವರಿಗೆ ಬಾಳ್‌ ಅನುಕೂಲ ಮಾಡ್ಯಾನ. ಒಂದು ರೂಪಾಯಿ ಇಲ್ದ ಎಲ್ಲಿಗಾದ್ರೂ ಹೋಗಿ ಬರ್ತೀವಿ. ಯಾವ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸಬಾರದು. ಒಂದು ತಿಂಗಳ ತಡ ಆಗಲಿ, ನಾವು ಕಾಯ್ತಿವಿ. ಹಣ ಕೊಡುವುದು ನಿಲ್ಲಿಸಬಾರದು” ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಈ ದಿನ.ಕಾಮ್‌ ಮಾತನಾಡಿ, “ಗೃಹಲಕ್ಷ್ಮಿ ಹಣ ಜಮಾ ವಿಳಂಬವಾಗಿದೆ. ಶೀಘ್ರದಲ್ಲೇ ಎಲ್ಲ ಫಲಾನುಭವಿಗಳಿಗೆ ಹಣ ಜಮಾ ಮಾಡುತ್ತೇವೆ. ಆದರೆ ಬಿಜೆಪಿಯವರ ಆರೋಪಗಳು ಸುಳ್ಳು. ಗ್ಯಾರಂಟಿಗಾಗಿ ಹಣವನ್ನು ಮೊದಲೇ ತೆಗೆದಿಟ್ಟಿದ್ದೇವೆ. ಆಯಾ ತಾಲ್ಲೂಕು ಪಂಚಾಯಿತಿಗಳಿಗೆ ಹಣ ವರ್ಗಾವಣೆ ಮಾಡುವಲ್ಲಿ ನಮ್ಮಿಂದ ವಿಳಂಬವಾಗಿದೆ. ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಕೂಡಲೇ ಗೃಹಲಕ್ಷ್ಮಿ ಹಣ ಜಮಾ ಮಾಡುತ್ತೇವೆ” ಎಂದು ಹೇಳಿದರು.

ಗೃಹಲಕ್ಷ್ಮಿ ಹಣ ಜಮಾ ಆಗದಿರುವ ಬಗ್ಗೆ ಪ್ರತಿ ಜಿಲ್ಲೆಯಲ್ಲೂ ಆರೋಪಗಳು ಹರಳುಗಟ್ಟುತ್ತಿದ್ದು, ಬಿಜೆಪಿ ಭಜನೆ ಮಾಡುವ ಮಾಧ್ಯಮಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು, ಸರ್ಕಾರವು ಗ್ಯಾರಂಟಿಗಳನ್ನು ರದ್ದು ಮಾಡುವ ಆಲೋಚನೆಯಲ್ಲಿದೆ ಎನ್ನುವ ಅನುಮಾನವನ್ನು ಜನರಲ್ಲಿ ಬಿತ್ತುತ್ತಿವೆ. ಆದರೆ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಆದರೆ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯಕ್ಕೆ ಮಾತ್ರ ಪ್ರತಿ ತಿಂಗಳು ಸರಿಯಾಗಿ ಹಣ ಜಮಾ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗ್ಯಾರಂಟಿಗಳಿಗಾಗಿಯೇ ಬಜೆಟ್‌ನಲ್ಲಿ ಮೀಸಲಿಟ್ಟ 52 ಸಾವಿರ ಕೋಟಿ ಎಲ್ಲಿ ಹೋಗುತ್ತಿದೆ ಎಂಬುದಕ್ಕೆ ಉತ್ತರವಿಲ್ಲ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X